ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಸೆಟ್ಟೇರಿತು ಹೊಸಬರ ‘ಬಿಲ್ಲಾರಿ’ ಸಿನಿಮಾ
ಹೊಸ ಕಲಾವಿದರು ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ‘ಬಿಲ್ಲಾರಿ’ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಈ ಸಿನಿಮಾದಲ್ಲಿ ರಿಶ್ವಿಕ್ ಶೆಟ್ಟಿ ಹೀರೋ ಆಗಿ ನಟಿಸುತ್ತಿದ್ದಾರೆ. ಚೈತ್ರಾ ಲೋಕನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿ ಕೂಡ ರಿಶ್ವಿಕ್ ಅವರದ್ದು. ಪಿ.ಎಲ್. ಭರಮಣ್ಣ ಅವರ ನಿರ್ದೇಶನದಲ್ಲಿ ‘ಬಿಲ್ಲಾರಿ’ ಸಿನಿಮಾ ಸಿದ್ಧವಾಗುತ್ತಿದೆ.
ಬಣ್ಣದ ಲೋಕಕ್ಕೆ ಹೊಸಬರ ಆಗಮನ ಆಗುತ್ತಲೇ ಇರುತ್ತದೆ. ಬಹುತೇಕ ಹೊಸಬರೇ ಸೇರಿಕೊಂಡು ಮಾಡುತ್ತಿರುವ ‘ಬಿಲ್ಲಾರಿ’ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಈ ಸಿನಿಮಾಗೆ ಮುಹೂರ್ತ ನೆರವೇರಿಸಲಾಯಿತು. ಅದ್ದೂರಿಯಾಗಿ ನಡೆದ ಮುಹೂರ್ತ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಅವರು ಆಗಮಿಸಿದ್ದರು. ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಅವರು ಚಿತ್ರತಂಡಕ್ಕೆ ಶುಭ ಕೋರಿದರು.
‘ಎವಿಕೆ ಪ್ರೊಡಕ್ಷನ್’ ಮೂಲಕ ರಿಶ್ವಿಕ್ ಶೆಟ್ಟಿ ಅವರು ‘ಬಿಲ್ಲಾರಿ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾಗೆ ಕಥೆ ಕೂಡ ಅವರೇ ಬರೆದಿದ್ದಾರೆ. ನಿರ್ಮಾಪಕರ ತಾಯಿ ಲಕ್ಷೀ ಧನಪಾಲ್ ಅವರು ಕ್ಯಾಮರಾ ಆನ್ ಮಾಡುವ ಮೂಲಕ ಶೂಟಿಂಗ್ಗೆ ಚಾಲನೆ ನೀಡಿದರು. ರಿಶ್ವಿಕ್ ಶೆಟ್ಟಿ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ ಹೀರೋ ಆಗಿಯೂ ನಟಿಸುತ್ತಿದ್ದಾರೆ.
ಗೋಕಾಕ್ ಮೂಲದ ಪಿ.ಎಲ್. ಭರಮಣ್ಣ ಅವರು ‘ಬಿಲ್ಲಾರಿ’ ಸಿನಿಮಾಗೆ ಚಿತ್ರಕತೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ಶಿಲ್ಪಾ ಗೌಡ ಅವರು ಸಹ-ನಿರ್ಮಾಪಕಿಯಾಗಿದ್ದಾರೆ. ಇದೊಂದು ಕಾಲ್ಪನಿಕ ಕಥಾಹಂದರ ಸಿನಿಮಾ ಎಂದು ನಿರ್ದೇಶಕ ಭರಮಣ್ಣ ಹೇಳಿದ್ದಾರೆ. ‘ನಿಘಂಟಿನಲ್ಲಿ ಬಿಲ್ಲಾರಿ ಎಂದರೆ ಬೇರೆ ಅರ್ಥ ಇದೆ. ಆದರೆ ನಮ್ಮ ಸಿನಿಮಾದಲ್ಲಿ ಪಾತ್ರದ ಹೆಸರೇ ಶೀರ್ಷಿಕೆಯಾಗಿದೆ’ ಎಂದು ಅವರು ಹೇಳಿದ್ದಾರೆ.
ಬುಡಕಟ್ಟು ಜನಾಂಗದ ರಾಜನ ಐತಿಹಾಸಿಕ ಕಥೆ ಈ ಸಿನಿಮಾದಲ್ಲಿ ಇರಲಿದೆ. ಸೆಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರಲಿದೆ. ಬೆಂಗಳೂರು, ಹಾಸನ, ಅರಸಿಕೆರೆ, ಅಣ್ಣಿಗೇರಿ, ಯಾಣ, ಗಜೇಂದ್ರಗಡ ಮುಂತಾದ ಕಡೆಗಳಲ್ಲಿ ಶೂಟಿಂಗ್ ನಡೆಯಲಿದೆ. ಸಿನಿಮಾಗೆ ಸೀಕ್ವೆಲ್ ಮಾಡುವ ಆಲೋಚನೆ ಕೂಡ ಇದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ‘ತೂಫಾನ್’ ಬರಲಿದೆ; ‘ತಡೆಯೋ ಪ್ರಯತ್ನ ಮಾಡಬೇಡಿ’ ಎಂದ ಟೀಮ್
ಈ ಸಿನಿಮಾದಲ್ಲಿ ನಾಲ್ಕು ಹಾಡುಗಳು ಇರಲಿವೆ. ಒಂದು ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಸುಭಾಷ್ ಅವರ ಸಂಗೀತ ಈ ಸಿನಿಮಾಗೆ ಇದೆ. ಅಗಸ್ತ್ಯ ಯು. ಗೌಡ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ನಟ ರಿಶ್ವಿಕ್‌ಶೆಟ್ಟಿ ಅವರಿಗೆ ಜೋಡಿಯಾಗಿ ಮೈಸೂರಿನ ಚೈತ್ರಾ ಲೋಕನಾಥ್ ಅವರು ನಟಿಸುತ್ತಿದ್ದಾರೆ. ನಾಗೇಂದ್ರ ಅರಸ್, ಎಂ.ಕೆ. ಮಠ, ಪ್ರಕಾಶ್ ತುಮ್ಮಿನಾಡು, ಕೆಂಪೇಗೌಡ, ಚಂದ್ರಪ್ರಭಾ, ಬಲರಾಮ್ ಪಂಚಾಲ್, ನವೀನ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.