New Movies: ‘ಬಾಂಡ್ ರವಿ’, ‘ವಿಜಯಾನಂದ’ ಜತೆ ರಿಲೀಸ್ ಆಗ್ತಿವೆ ಸಿಕ್ಕಾಪಟ್ಟೆ ಸಿನಿಮಾ; ಈ ವಾರ 18ಕ್ಕೂ ಹೆಚ್ಚು ಚಿತ್ರ
This Week Movie Release: ವರ್ಷಾಂತ್ಯಕ್ಕೆ ಸಾಲು ಸಾಲು ಸಿನಿಮಾಗಳು ತೆರೆಕಾಣುತ್ತಿವೆ. ಬೇರೆ ಬೇರೆ ಕಾರಣಗಳಿಂದ ಈ ಚಿತ್ರಗಳು ನಿರೀಕ್ಷೆ ಮೂಡಿಸಿವೆ. ಎಲ್ಲ ಭಾಷೆಗಳಿಂದ ಸೇರಿ ಈ ವಾರ (ಡಿ.9) 18ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗುತ್ತಿವೆ.
ವರ್ಷದ ಕೊನೇ ತಿಂಗಳಲ್ಲಿ ಸಿನಿಮಾಗಳ ಪ್ರವಾಹವೇ ಆಗುತ್ತಿದೆ ಎನ್ನಬಹುದು. ಅನೇಕರು ಡಿಸೆಂಬರ್ ತಿಂಗಳನ್ನು ಲಕ್ಕಿ ಅಂತ ಪರಿಗಣಿಸುತ್ತಾರೆ. ಹಲವು ಸಿನಿಮಾಗಳು ಈ ತಿಂಗಳಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದುಂಟು. ಅದೇ ಕಾರಣಕ್ಕೋ ಏನೋ ಅನೇಕ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ವಾರ (ಡಿ.9) ಬರೋಬ್ಬರಿ 18ಕ್ಕೂ ಅಧಿಕ ಸಿನಿಮಾಗಳು (New Movies Release) ರಿಲೀಸ್ ಆಗುತ್ತಿವೆ. ಕನ್ನಡದಲ್ಲೇ 10ಕ್ಕೂ ಹೆಚ್ಚು ಚಿತ್ರಗಳಿವೆ. ಆ ಪೈಕಿ ‘ಬಾಂಡ್ ರವಿ’ (Bond Ravi), ‘ವಿಜಯಾನಂದ’ ಮುಂತಾದ ಸಿನಿಮಾಗಳು ನಿರೀಕ್ಷೆ ಮೂಡಿಸಿವೆ. ಪರಭಾಷೆಯಲ್ಲೂ ಕೆಲವು ಚಿತ್ರಗಳು ಸದ್ದು ಮಾಡುತ್ತಾ ಥಿಯೇಟರ್ಗೆ ಬರುತ್ತಿವೆ. ಈ ವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ..
‘ಬಾಂಡ್ ರವಿ’ ಚಿತ್ರದಲ್ಲಿ ಪ್ರಮೋದ್ ಮಾಸ್ ಲುಕ್:
ನಟ ಪ್ರಮೋದ್ ಅವರು ಈಗಾಗಲೇ ಅನೇಕ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಈ ಬಾರಿ ಅವರು ‘ಬಾಂಡ್ ರವಿ’ ಚಿತ್ರದಲ್ಲಿ ಸಖತ್ ಮಾಸ್ ಆಗಿ ಎಂಟ್ರಿ ನೀಡುತ್ತಿದ್ದಾರೆ. ನೆಗೆಟಿವ್ ಶೇಡ್ ಇರುವಂತಹ ಪಾತ್ರವನ್ನು ಅವರು ನಿಭಾಯಿಸಿದ್ದಾರೆ ಎಂಬುದಕ್ಕೆ ಈ ಸಿನಿಮಾದ ಟ್ರೇಲರ್ ಸುಳಿವು ನೀಡಿದೆ. ನರಸಿಂಹ ಮೂರ್ತಿ ವಿ. ನಿರ್ಮಾಣದ ಈ ಚಿತ್ರಕ್ಕೆ ಪ್ರಜ್ವಲ್ ಎಸ್.ಪಿ. ನಿರ್ದೇಶನ ಮಾಡಿದ್ದಾರೆ.
ವಿಜಯ್ ಸಂಕೇಶ್ವರ ಬಯೋಪಿಕ್ ‘ವಿಜಯಾನಂದ’:
ಕರುನಾಡಿನ ಯಶಸ್ವಿ ಉದ್ಯಮಿ ವಿಜಯ್ ಸಂಕೇಶ್ವರ ಅವರ ಜೀವನದ ವಿವರಗಳನ್ನು ಇಟ್ಟುಕೊಂಡು ‘ವಿಜಯಾನಂದ’ ಸಿನಿಮಾ ಮೂಡಿಬಂದಿದೆ. ನಿಹಾಲ್, ಸಿರಿ ಪ್ರಹ್ಲಾದ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಿಶಿಕಾ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ.
‘ನಾನೇ ನರರಾಕ್ಷಸ’, ‘ಸುನಾಮಿ 143’, ‘ಪ್ರಾಯಶಃ’, ‘ಪಂಖುರಿ’, ‘ಮೈಸೂರು ಡೈರೀಸ್’, ‘ಕ್ಷೇಮಗಿರಿಯಲ್ಲಿ ಕರ್ನಾಟಕ’, ‘ದ್ವಿಪಾತ್ರ’, ‘ಡಾ. 56’ ಸಿನಿಮಾಗಳು ಕೂಡ ಈ ವಾರ ತೆರೆಕಾಣುತ್ತಿವೆ. ಯಾವುದನ್ನು ನೋಡೋದು, ಯಾವುದನ್ನು ಬಿಡೋದು ಎಂಬ ಗೊಂದಲದಲ್ಲಿ ಪ್ರೇಕ್ಷಕರಿದ್ದಾರೆ.
‘ಸಲಾಂ ವೆಂಕಿ’ ಚಿತ್ರದಲ್ಲಿ ಕಾಜೋಲ್:
ಹಿಂದಿಯಲ್ಲಿ ನಟಿ ಕಾಜೋಲ್ ಅಭಿನಯದ ‘ಸಲಾಂ ವೆಂಕಿ’ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಈ ಚಿತ್ರಕ್ಕೆ ರೇವತಿ ನಿರ್ದೇಶನ ಮಾಡಿದ್ದಾರೆ. ವಿಶೇಷ ಕಥಾಹಂದರ ಇರುವ ಈ ಸಿನಿಮಾದಲ್ಲಿ ಆಮಿರ್ ಖಾನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಚಿತ್ರದ ಮೇಲೆ ಕಾಜೋಲ್ ಅಭಿಮಾನಿಗಳಿಗೆ ನಿರೀಕ್ಷೆ ಇದೆ.
ಇದನ್ನೂ ಓದಿ: Dharani Mandala Madhyadolage: ಅಲ್ಲಲ್ಲೇ ಬೆಸೆದುಕೊಂಡರೂ ಮತ್ತೆಲ್ಲಿಗೋ ಕರೆದೊಯ್ಯುವ ಕಾಕತಾಳೀಯ ಕಥನ
‘ಲವ್ ಮಾಕ್ಟೇಲ್’ ರಿಮೇಕ್ ‘ಗುರ್ತುಂದ ಶೀತಕಾಲಂ’:
ಕನ್ನಡದ ‘ಲವ್ ಮಾಕ್ಟೇಲ್’ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗಿದೆ. ‘ಗುರ್ತುಂದ ಶೀತಕಾಲಂ’ ಶೀರ್ಷಿಕೆಯ ಈ ಚಿತ್ರದಲ್ಲಿ ನಟಿ ತಮನ್ನಾ ಹಾಗೂ ಸತ್ಯದೇವ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಕನ್ನಡಿಗ ನಾಗಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಇದರ ಜೊತೆ ‘ಮುಖಚಿತ್ರಂ’, ‘ಪಂಚತಂತ್ರಂ’ ಚಿತ್ರಗಳು ಕೂಡ ತೆಲುಗಿನಲ್ಲಿ ರಿಲೀಸ್ ಆಗುತ್ತಿವೆ.
ಇದನ್ನೂ ಓದಿ: Raymo Movie Review: ಆಗಾಗ ಟ್ವಿಸ್ಟ್ ನೀಡುವ ಭಾವನೆಗಳ ಹಾವು-ಏಣಿ ಆಟ
ತಮಿಳಿನಲ್ಲಿ ‘ನಾಯಿ ಶೇಖರ್ ರಿಟರ್ನ್ಸ್’, ‘ವರಲಾರು ಮುಕ್ಕಿಯಂ’ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ವಾರ ಯಾವ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು. ಕಳೆದ ವಾರ ಬಿಡುಗಡೆಯಾಗಿ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳು ಕೂಡ ಪೈಪೋಟಿ ಮುಂದುವರಿಸಲಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.