ಉದ್ಯಮಿ ವಿಜಯ ಸಂಕೇಶ್ವರ ಸಾಧನೆ ಕಟ್ಟಿಕೊಟ್ಟ ‘ವಿಜಯಾನಂದ’ ಸಿನಿಮಾ ಟ್ರೇಲರ್
ವಿಜಯ ಸಂಕೇಶ್ವರ ಕುಟುಂಬ ಈಗಾಗಲೇ ಸಾರಿಗೆ ಹಾಗೂ ಮೀಡಿಯಾಗಳಲ್ಲಿ ಹೆಸರು ಮಾಡಿದೆ. ‘ವಿಜಯಾನಂದ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೂ ಇಳಿದಿದೆ ಕುಟುಂಬ.
ಡಾ. ವಿಜಯ ಸಂಕೇಶ್ವರ (Vijay Sankeshwar) ಅವರು ವಿಆರ್ಎಲ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಕೇವಲ ಒಂದು ಲಾರಿಯಿಂದ ಆರಂಭವಾದ ಅವರ ಪಯಣ ಈಗ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಅವರು ಸಾವಿರಾರು ಜನರಿಗೆ ಕೆಲಸ ನೀಡಿದ್ದಾರೆ. ಅವರ ಸಾಧನೆ ಅನೇಕರಿಗೆ ಮಾದರಿ ಆಗಿದೆ. ಅವರ ಬಗ್ಗೆ ಬಯೋಪಿಕ್ ಬರಲಿದೆ ಎಂದಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿತ್ತು. ಡಿಸೆಂಬರ್ 9ರಂದು ಸಿನಿಮಾ ರಿಲೀಸ್ ಆಗಲಿದ್ದು, ಈಗ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ.
ವಿಜಯ ಸಂಕೇಶ್ವರ ಅವರ ಬದುಕಿನ ವಿವರಗಳು ರೋಚಕವಾಗಿವೆ. ಆ ಎಲ್ಲಾ ವಿಚಾರಗಳನ್ನು ಸ್ವತಃ ವಿಜಯ ಸಂಕೇಶ್ವರ ಅವರಿಂದ ಸಂಗ್ರಹಿಸಿ ರಿಷಿಕಾ ಶರ್ಮಾ ಅವರು ಸಿನಿಮಾ ಮಾಡಿದ್ದಾರೆ. ಬಯೋಪಿಕ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಇದನ್ನು ಚಾಲೆಂಜ್ ಆಗಿ ಸ್ವೀಕರಿಸಿ ರಿಷಿಕಾ ಅವರು ‘ವಿಜಯಾನಂದ’ ಮಾಡಿದ್ದಾರೆ. ಟ್ರೇಲರ್ ನೋಡಿದ ನಂತರದಲ್ಲಿ ಸಿನಿಪ್ರಿಯರಿಗೆ ಚಿತ್ರದ ಬಗ್ಗೆ ಇರುವ ನಿರೀಕ್ಷೆ ಹೆಚ್ಚಾಗಿದೆ.
ವಿಜಯ ಸಂಕೇಶ್ವರ ಕುಟುಂಬ ಈಗಾಗಲೇ ಸಾರಿಗೆ ಹಾಗೂ ಮೀಡಿಯಾಗಳಲ್ಲಿ ಹೆಸರು ಮಾಡಿದೆ. ‘ವಿಜಯಾನಂದ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೂ ಇಳಿದಿದೆ ಕುಟುಂಬ. ಈ ಚಿತ್ರದ ಮೂಲಕ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಕಾಲಿರಿಸಿದ್ದಾರೆ. ‘ವಿಆರ್ಎಲ್ ಫಿಲ್ಮ್ ಪ್ರೊಡಕ್ಷನ್ಸ್’ ಎಂಬ ಸಂಸ್ಥೆ ಮೂಲಕ ‘ವಿಜಯಾನಂದ’ ಸಿದ್ಧಗೊಂಡಿದೆ.
ಕನ್ನಡದಲ್ಲಿ ಬಯೋಪಿಕ್ಗಳ ಸಂಖ್ಯೆ ಕಡಿಮೆ. ಕರುನಾಡಿನಲ್ಲಿ ಅನೇಕ ಸಾಧಕರು ಇದ್ದರೂ ಕೂಡ ಅವರ ಜೀವನ ಕಥೆಯನ್ನು ಸಾರುವ ಸಿನಿಮಾಗಳು ಹೆಚ್ಚಾಗಿ ಮೂಡಿಬಂದಿಲ್ಲ. ಈ ಮೊದಲು ‘ಟ್ರಂಕ್’ ಚಿತ್ರ ನಿರ್ದೇಶನ ಮಾಡಿದ್ದ ರಿಷಿಕಾ ಅವರು ಈಗ ಕನ್ನಡದಲ್ಲಿ ಒಂದು ಬಯೋಪಿಕ್ ನೀಡಿದ್ದಾರೆ. ‘ಟ್ರಂಕ್’ ಸಿನಿಮಾಗೆ ಬಣ್ಣ ಹಚ್ಚಿದ್ದ ಉತ್ತರ ಕರ್ನಾಟಕದ ಪ್ರತಿಭಾವಂತ ನಟ ನಿಹಾಲ್ ಅವರು ವಿಜಯ ಸಂಕೇಶ್ವರ ಆಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಉದ್ಯಮಿ ವಿಜಯ ಸಂಕೇಶ್ವರ ಬಯೋಪಿಕ್ ‘ವಿಜಯಾನಂದ’; ಉತ್ತರ ಕರ್ನಾಟಕದ ಪ್ರತಿಭೆಯೇ ಹೀರೋ
ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಅವರು ‘ವಿಜಯಾನಂದ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಹೇಮಂತ್ ಕುಮಾರ್ ಡಿ. ಸಂಕಲನ, ರಘು ನಿಡುವಳ್ಳಿ ಸಂಭಾಷಣೆ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.
Published On - 8:07 pm, Sat, 19 November 22