ಉದ್ಯಮಿ ವಿಜಯ ಸಂಕೇಶ್ವರ ಬಯೋಪಿಕ್​ ‘ವಿಜಯಾನಂದ’; ಉತ್ತರ ಕರ್ನಾಟಕದ ಪ್ರತಿಭೆಯೇ ಹೀರೋ

ಉದ್ಯಮಿ ವಿಜಯ ಸಂಕೇಶ್ವರ ಬಯೋಪಿಕ್​ ‘ವಿಜಯಾನಂದ’; ಉತ್ತರ ಕರ್ನಾಟಕದ ಪ್ರತಿಭೆಯೇ ಹೀರೋ
ವಿಜಯ ಸಂಕೇಶ್ವರ, ನಿಹಾಲ್​

ಸಾರಿಗೆ, ಪ್ರತಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಜಯ ಸಂಕೇಶ್ವರ ಅವರ ಬದುಕಿನ ಕಥೆ ಹಲವರಿಗೆ ಸ್ಫೂರ್ತಿ ನೀಡುವಂಥದ್ದು. ಈಗ ಅದನ್ನು ಬೆಳ್ಳಿಪರದೆಗೆ ತರಲು ಸಿದ್ಧತೆ ನಡೆದಿದೆ.

TV9kannada Web Team

| Edited By: Madan Kumar

Aug 02, 2021 | 11:55 AM

ಕರ್ನಾಟಕದ ಖ್ಯಾತ ಉದ್ಯಮಿ ಡಾ. ವಿಜಯ ಸಂಕೇಶ್ವರ (Vijay Sankeshwar) ಅವರ ಜೀವನ ಆಧರಿಸಿ ಸಿನಿಮಾ ಮೂಡಿಬರುತ್ತಿದೆ. ಇದು ಅವರ ಬಯೋಪಿಕ್​ (Biopic) ಆಗಿದ್ದು, ‘ವಿಜಯಾನಂದ’ ಎಂದು ಶೀರ್ಷಿಕೆ ಇಡಲಾಗಿದೆ. ಇಂದು (ಆ.2) ವಿಜಯ ಸಂಕೇಶ್ವರ ಅವರ ಜನ್ಮದಿನ. ಆ ಪ್ರಯುಕ್ತ ‘ವಿಜಯಾನಂದ’ (Vijayananda) ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್​ಲುಕ್​ ಅನಾವರಣ ಮಾಡಲಾಗಿದೆ. ಈ ಸಿನಿಮಾದ ಮೂಲಕ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೂ ಕಾಲಿರಿಸುತ್ತಿದ್ದಾರೆ. ‘ವಿಆರ್​ಎಲ್​ ಫಿಲ್ಮ್​ ಪ್ರೊಡಕ್ಷನ್ಸ್​’ ಎಂಬ ಸಂಸ್ಥೆ ಮೂಲಕ ಅವರು ನಿರ್ಮಾಪಕರಾಗುತ್ತಿದ್ದಾರೆ.

ಕನ್ನಡದಲ್ಲಿ ಬಯೋಪಿಕ್​ಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಕರುನಾಡಿನಲ್ಲಿ ಅನೇಕ ಸಾಧಕರು ಇದ್ದರೂ ಕೂಡ ಅವರ ಜೀವನ ಕಥೆಯನ್ನು ಸಾರುವ ಸಿನಿಮಾಗಳು ಹೆಚ್ಚಾಗಿ ಮೂಡಿಬಂದಿಲ್ಲ. ಸಾರಿಗೆ, ಪ್ರತಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಜಯ ಸಂಕೇಶ್ವರ ಅವರ ಬದುಕಿನ ಕಥೆ ಹಲವರಿಗೆ ಸ್ಫೂರ್ತಿ ನೀಡುವಂಥದ್ದು. ಈಗ ಅದನ್ನು ಬೆಳ್ಳಿಪರದೆಗೆ ತರಲು ಸಿದ್ಧತೆ ನಡೆದಿದೆ.

1976ರ ಸಮಯದಲ್ಲಿ ಒಂದು ಟ್ರಕ್​ನಿಂದ ಶುರುವಾಗಿ ಇವತ್ತಿಗೆ ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ ವಿಜಯ ಸಂಕೇಶ್ವರ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಅವರ ಬದುಕಿನ ವಿವರಗಳು ರೋಚಕವಾಗಿವೆ. ರಿಷಿಕಾ ಶರ್ಮಾರವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ 8 ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ ಹಲವು ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದರು. ‘ಟ್ರಂಕ್​’ ಶೀರ್ಷಿಕೆಯ ಹಾರರ್​ ಚಿತ್ರವನ್ನು ನಿರ್ದೇಶಿಸಿ ಅವರು ಗಮನ ಸೆಳೆದಿದ್ದರು. ಚಿತ್ರದ ಮೇಕಿಂಗ್ ಹಾಗು ನಿರ್ದೇಶನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ‘ವಿಜಯಾನಂದ’ ಸಿನಿಮಾವನ್ನು ನಿರ್ದೇಶಿಸುವ ದೊಡ್ಡ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ.

ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸುವ ಕಲಾವಿದ ಯಾರು? ಅದಕ್ಕೂ ಈಗ ಉತ್ತರ ಸಿಕ್ಕಿದೆ. ‘ಟ್ರಂಕ್’ ಸಿನಿಮಾಗೆ ಬಣ್ಣ ಹಚ್ಚಿದ್ದ ಉತ್ತರ ಕರ್ನಾಟಕದ ಪ್ರತಿಭಾವಂತ ನಟ ನಿಹಾಲ್ ಅವರು ವಿಜಯ ಸಂಕೇಶ್ವರ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು ಭಾರತಿ, ಗಂಗಾ ಮುಂತಾದ ಸೀರಿಯಲ್​ಗಳಲ್ಲಿ ನಟಿಸಿದ್ದರು. ಮಾಧ್ಯಮಗಳಲ್ಲಿ ಆ್ಯಂಕರ್​ ಆಗಿ ಕೆಲಸ ಮಾಡಿದ ಅನುಭವ ಕೂಡ ಅವರಿಗೆ ಇದೆ.

ಕಳೆದ ಎರಡು ವರ್ಷಗಳಿಂದಲೂ ಈ ಚಿತ್ರಕ್ಕಾಗಿ ತಯಾರಿ ನಡೆಯುತ್ತಿತ್ತು. ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಅವರು ‘ವಿಜಯಾನಂದ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕೀರ್ತನ್​ ಪೂಜಾರಿ ಛಾಯಾಗ್ರಹಣ, ಹೇಮಂತ್​ ಕುಮಾರ್​ ಡಿ. ಸಂಕಲನ, ರಘು ನಿಡುವಳ್ಳಿ ಸಂಭಾಷಣೆ, ಇಮ್ರಾನ್​ ಸರ್ದಾರಿಯಾ ನೃತ್ಯ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಿಹಾಲ್​ ಜೊತೆ ಯಾರೆಲ್ಲ ನಟಿಸಲಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ಬಿಟ್ಟುಕೊಡಲಿದೆ.

ಇದನ್ನೂ ಓದಿ:

Sourav Ganguly Biopic: ಬಯೋಪಿಕ್​ಗೆ ​ಅನುಮತಿ ನೀಡಿದ ಸೌರವ್​ ಗಂಗೂಲಿ; ದಾದಾ ಪಾತ್ರಕ್ಕೆ ರಣಬೀರ್​ ಕಪೂರ್​?

ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ ಜಯಲಲಿತಾ ಬಯೋಪಿಕ್​ ತಲೈವಿ; ಗಾಸಿಪ್​ಗೆ ಕಂಗನಾ ಫುಲ್​ಸ್ಟಾಪ್​

Follow us on

Most Read Stories

Click on your DTH Provider to Add TV9 Kannada