2022ರಲ್ಲಿ ಬಿಡುಗಡೆಯಾದ ‘ಪ್ರೇಮಪೂಜ್ಯಂ’ ಸಿನಿಮಾದಲ್ಲಿ ನಟಿಸಿ ಬೃಂದಾ ಆಚಾರ್ಯ (Brinda Acharya) ಗಮನ ಸೆಳೆದರು. ಈಗ ಅವರ 2ನೇ ಸಿನಿಮಾ ‘ಜೂಲಿಯೆಟ್ 2’ (Juliet 2 Movie) ರಿಲೀಸ್ಗೆ ಸಜ್ಜಾಗಿದೆ. ‘ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಇದರಲ್ಲಿ ಜೂಲಿಯೆಟ್ ಪಾತ್ರದ ಮಾಡಿದ್ದೇನೆ. ಇದೊಂದು ವಿಭಿನ್ನ ಕಥೆ ಇರುವ ಸಿನಿಮಾ. ಮಹಿಳೆ ಅಬಲೆಯಲ್ಲ, ಆಕೆ ಸಬಲೆ ಎಂದು ಈ ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟ್ಟಿದ್ದಾರೆ. ತಂದೆ ಹಾಗೂ ಮಗಳ ಬಾಂಧವ್ಯದ ಸನ್ನಿವೇಶಗಳು ಮನ ಮಿಡಿಯತ್ತವೆ. ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ ಮರೆಯಲು ಅಸಾಧ್ಯ. ಎಲ್ಲರೂ ಬೆವರು ಸುರಿಸಿ ಸಿನಿಮಾ ಮಾಡಿದ್ದೇವೆ ಎನ್ನುತ್ತಾರೆ. ಆದರೆ ನಾವು ರಕ್ತ ಸುರಿಸಿ ಸಿನಿಮಾ ಮಾಡಿದ್ದೇವೆ. ಏಕೆಂದರೆ ಕಾಡಿನಲ್ಲಿ ಜಿಗಣೆಗಳು ಅಷ್ಟು ಕಾಟ ಕೊಟ್ಟಿವೆ’ ಎಂದಿದ್ದಾರೆ ಬೃಂದಾ ಆಚಾರ್ಯ.
‘ನನಗೆ ಎರಡನೇ ಸಿನಿಮಾದಲ್ಲಿಯೇ ಇಂಥ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದಗಳು. ಎರಡು ತಿಂಗಳು ನಾವು ಮಾರ್ಷಲ್ ಆರ್ಟ್ಸ್ ಕಲಿತಿದ್ದೇವೆ. ಈ ಪಾತ್ರಕ್ಕೆ ಅಷ್ಟು ತಯಾರಿ ಬೇಕಿತ್ತು. ಕಥೆ ಕೇಳಿದಾಗಲೇ ನಾನು ಎಮೋಷನಲ್ ಆಗಿದ್ದೆ. ಶೂಟಿಂಗ್ ಸಮಯದಲ್ಲಿ ಸ್ಟ್ರಾಂಗ್ ಆಗಿ ಇರಬೇಕಾಗಿತ್ತು. ಅದಕ್ಕಾಗಿ ಕಷ್ಟಪಟ್ಟು ರಿಹರ್ಸಲ್ ಮಾಡಿದ್ವಿ’ ಎಂದು ಬೃಂದಾ ಆಚಾರ್ಯ ಹೇಳಿದ್ದಾರೆ.
ಇದನ್ನೂ ಓದಿ: ‘ಕಡಲ ತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್ 2 ಲಕ್ಷ ರೂ.ಗೆ ಹರಾಜು; ಒಳ್ಳೇ ಕೆಲಸಕ್ಕೆ ಈ ಹಣ ಬಳಕೆ
ಈ ಚಿತ್ರಕ್ಕೆ ವಿರಾಟ್ ಬಿ. ಗೌಡ ನಿರ್ದೇಶನ ಮಾಡಿದ್ದಾರೆ. ‘ಇದು ಮಹಿಳಾ ಪ್ರಧಾನ ಚಿತ್ರ. ತೊಂದರೆಗೆ ಸಿಲುಕಿದ ಹೆಣ್ಣುಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ ಎಂಬುದು ಇದರ ಪ್ರಮುಖ ಕಥಾಹಂದರ. ಸಾಮಾನ್ಯವಾಗಿ ಜೂಲಿಯೆಟ್ ಎಂದ ತಕ್ಷಣ ಪ್ರೇಮಕಥೆ ಅಂದುಕೊಳ್ಳುತ್ತಾರೆ. ಆದರೆ ಇದು ಲವ್ ಸ್ಟೋರಿ ಸಿನಿಮಾ ಅಲ್ಲ. ಇದರಲ್ಲಿ ರೋಮಿಯೋ ಇರುವುದಿಲ್ಲ. ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲಿಯೇ ಶಿಕ್ಷೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳ ಹೊರಟ್ಟಿದ್ದೇವೆ. ಬೆಳ್ತಂಗಡಿ ಬಳಿಯ ಪಶ್ಚಿಮಘಟ್ಟದ ಕಾಡೊಂದರಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ಇದು ನನ್ನ ಪ್ರಥಮ ಸಿನಿಮಾ’ ಎಂದು ನಿರ್ದೇಶಕರು ಹೇಳಿದ್ದಾರೆ.
‘ಜೂಲಿಯೆಟ್ 2’ ಚಿತ್ರ ಫೆಬ್ರವರಿ 24ರಂದು ಬಿಡುಗಡೆ ಆಗಲಿದೆ. ಆನಂದ್ ಆಡಿಯೋ ಮೂಲಕ ಇದರ ಟ್ರೇಲರ್ ಅನಾವರಣ ಆಗಿದೆ. ಟ್ರೇಲರ್ ಮತ್ತು ಹಾಡುಗಳಿಗೆ ಜನರಿಂದ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಬೃಂದಾ ಆಚಾರ್ಯ ಜೊತೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ. ಲಿಖಿತ್ ಆರ್. ಕೋಟ್ಯಾನ್ ನಿರ್ಮಿಸಿರುವ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:19 pm, Thu, 16 February 23