AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಷೇಪಾರ್ಹ ಹೇಳಿಕೆ, ನಟ ಉಪೇಂದ್ರ ವಿರುದ್ಧ ದಲಿತಪರ ಸಂಘಟನೆಗಳ ಪ್ರತಿಭಟನೆ, ದೂರು ದಾಖಲು

Upendra: ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿದ್ದ ನಟ ಉಪೇಂದ್ರ, ದಲಿತ ಸಮುದಾಯದವರ ಭಾವನೆಗಳಿಗೆ ಧಕ್ಕೆ ಆಗುವ ಗಾದೆಯೊಂದನ್ನು ಬಳಸಿದ್ದರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ನಟನ ವಿರುದ್ಧ ದೂರು ದಾಖಲಾಗಿದೆ.

ಆಕ್ಷೇಪಾರ್ಹ ಹೇಳಿಕೆ, ನಟ ಉಪೇಂದ್ರ ವಿರುದ್ಧ ದಲಿತಪರ ಸಂಘಟನೆಗಳ ಪ್ರತಿಭಟನೆ, ದೂರು ದಾಖಲು
ಉಪೇಂದ್ರ
ರಾಚಪ್ಪಾಜಿ ನಾಯ್ಕ್
| Updated By: ಮಂಜುನಾಥ ಸಿ.|

Updated on:Aug 13, 2023 | 4:33 PM

Share

ನಟ, ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ (Upendra) ಅವರ ಮಾತೊಂದು ವಿವಾದಕ್ಕೆ ಕಾರಣವಾಗಿದ್ದು, ಉಪೇಂದ್ರ ಹೇಳಿಕೆ ಖಂಡಿಸಿ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ನಟನ ವಿರುದ್ಧ ದೂರು ದಾಖಲಾಗಿದೆ. ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆಯಾಗಿ ನಾಲ್ಕು ವರ್ಷವಾದ ಕಾರಣ ‘ಪ್ರಜಾಕೀಯ ದಿನ’ ಆಚರಣೆ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ನಟ ಉಪೇಂದ್ರ ಮಾತಿನ ನಡುವೆ ಅಸೂಕ್ಷ್ಮತೆಯಿಂದ ಬಳಸಿದ ಗಾದೆ ಮಾತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಲೈವ್​ ವಿಡಿಯೋನಲ್ಲಿ ಮಾತನಾಡಿದ್ದ ನಟ ಉಪೇಂದ್ರ, ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ತಮ್ಮದೇ ವಾರಗೆಯ ಇತರೆ ಕೆಲವು ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಮತಗಳನ್ನು ಯಾವುದೇ ಪ್ರಚಾರವಿಲ್ಲದೆ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು. ಬಳಿಕ ಮಾತು ಮುಂದುವರೆಸಿ ಯಾವುದೋ ಮಾತಿಗೆ ‘ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ’ ಎಂದು ಹೊಲೆಗೇರಿಯನ್ನು ತುಚ್ಛವಾಗಿ ಕಾಣುವ ಗಾದೆಯೊಂದನ್ನು ಹೇಳಿದ್ದರು. ಉಪೇಂದ್ರರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಉಪೇಂದ್ರ ಅವರ ಹೇಳಿಕೆ ಖಂಡಿಸಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್ ಅವರು ಸಿಕೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ಸ್ವೀಕರಿಸಿರುವ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Budhivanta 2: ‘ಬುದ್ಧಿವಂತ 2’ ಚಿತ್ರದ ಮೂಲಕ ಬರಲಿದ್ದಾರೆ ಉಪೇಂದ್ರ; ಭಿನ್ನ ಗೆಟಪ್​ನಲ್ಲಿ ರಿಯಲ್ ಸ್ಟಾರ್ ಎಂಟ್ರಿ

ಅದರ ಬೆನ್ನಲ್ಲೆ ರಾಮನಗರದಲ್ಲಿ ಉಪೇಂದ್ರ ವಿರುದ್ಧ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ರಾಮನಗರದ ಹಾರೋಹಳ್ಳಿಯ ವೃತ್ತದಲ್ಲಿ‌ ಪ್ರತಿಭಟನೆ ನಡೆಸಿದ ಸಮತಾ ಸೈನಿಕ ದಳ ಮತ್ತು ದಲಿತ ಪರ ಒಕ್ಕೂಟದ ಸದಸ್ಯರು ಉಪೇಂದ್ರ ಅವರ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿದ್ದಾರೆ. ಸಮತಾ ಸೈನಿಕ ದಳದ ರಾಜ್ಯ ಯುವ ಘಟಕದ ಅಧ್ಯಕ್ಷ ಗೋವಿಂದಯ್ಯ, ಬೆನಚುಕಲ್ ದೊಡ್ಡಿ ರುದ್ರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು ಉಪೇಂದ್ರ ಕಂಡಲ್ಲಿ ಮುಖಕ್ಕೆ ಮಸಿ ಬಳಿಯುವ ಎಚ್ಚರಿಕಯನ್ನು ಅವರು ನೀಡಿದ್ದಾರೆ. ಉಪೇಂದ್ರರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನಿನ್ನೆ (ಆಗಸ್ಟ್ 12) ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ತಮ್ಮ ಲೈವ್ ವಿಡಿಯೋವನ್ನು ಡಿಲೀಟ್ ಮಾಡಿದ ಉಪೇಂದ್ರ, ”ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು, ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ ಮತ್ತು ಈ ಮಾತಿಗೆ ಕ್ಷಮೆಯಿರಲಿ” ಎಂದು ಕ್ಷಮಾಪಣೆ ಕೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Sun, 13 August 23