ಸಿನಿಮಾ ರಂಗದಲ್ಲಿ ನಾಯಕಿ ಆಗಿ ಮಿಂಚಿರೋ ಹರ್ಷಿಕಾ ಪೂಣಚ್ಚ (Harshika Poonacha) ಅವರು ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ಹೌದು, ಅವರು ಈಗ ಹೊಸ ಸಿನಿಮಾ ಒಂದನ್ನು ಘೋಷಣೆ ಮಾಡಿದ್ದಾರೆ. ಅದಕ್ಕೆ ‘ಚಿ: ಸೌಜನ್ಯ’ ಎನ್ನುವ ಟೈಟಲ್ ಇಟ್ಟಿದ್ದಾರೆ. ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ‘ಒಂದು ಹೆಣ್ಣಿನ ಕಥೆ’ ಎನ್ನುವ ಟ್ಯಾಗ್ಲೈನ್ ಕೊಡಲಾಗಿದೆ. ಸದ್ಯ ಈ ಪೋಸ್ಟರ್ ಸಾಕಷ್ಟು ಸಂಚಲನ ಮೂಡಿಸಿದೆ. ಸ್ಯಾಂಡಲ್ವುಡ್ ಅಂಗಳದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿವೆ. ಹರ್ಷಿಕಾ ಹೊಸ ಪ್ರಯತ್ನಕ್ಕೆ ಎಲ್ಲರೂ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಸೌಜನ್ಯ ಪ್ರಕರಣದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಹೀಗಿರುವಾಗಲೇ ಹರ್ಷಿಕಾ ಅವರು ‘ಚಿ: ಸೌಜನ್ಯ’ ಸಿನಿಮಾ ಟೈಟಲ್ ಅನೌನ್ಸ್ ಮಾಡಿರೋದು ಕುತೂಹಲ ಮೂಡಿಸಿದೆ. ಇದು ನೈಜ ಘಟನೆ ಆಧಾರಿತ ಕಾಲ್ಪನಿಕ ಕಥೆ ಎಂದು ಹರ್ಷಿಕಾ ಸ್ಪಷ್ಟವಾಗಿ ಹೇಳಿದ್ದಾರೆ.
‘ಚಿ: ಸೌಜನ್ಯ’ ಸಿನಿಮಾದ ಪೋಸ್ಟರ್ ಗಮನ ಸೆಳೆದಿದೆ. ಇದರಲ್ಲಿ ಬಾಲಕಿಯೊಬ್ಬಳು ಭಯದಿಂದ ಕೂಗುತ್ತಾ ನಿಂತಿದ್ದಾಳೆ. ಆಕೆಯ ಮುಖದ ಮೇಲೆ ಉಗುರಿನಿಂದ ಆದ ಗಾಯಗಳು ಇವೆ. ಅವಳ ಹಿಂದೆ ಒಂದಷ್ಟು ಪುರುಷರು ದಾಳಿಗೆ ರೆಡಿ ಆದವರಂತೆ ನಿಂತಿದ್ದಾರೆ. ದೇವಸ್ಥಾನದ ಕಳಶ ಇದೆ. ಒಂದಷ್ಟು ಮಂದಿ ತುಟಿಯ ಮೇಲೆ ಕೈ ಬೆರಳು ಇಟ್ಟು ಸುಮ್ಮನಿರುವಂತೆ ತೋರಿಸುತ್ತಿದ್ದಾರೆ.
‘ಚಿ: ಸೌಜನ್ಯ’ ಸಿನಿಮಾ ಟೈಟಲ್ ಕೆಳಭಾಗದಲ್ಲಿ ‘ಒಂದು ಹೆಣ್ಣಿನ ಕಥೆ’ ಟ್ಯಾಗ್ ಲೈನ್ ನೀಡಲಾಗಿದೆ. ‘ದೇಶದಲ್ಲಿ ನಡೆದ ಎಲ್ಲಾ ಘಟನೆಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಮಾಡಲಾಗುತ್ತಿರುವ ಕಾಲ್ಪನಿಕ ಕಥೆ’ ಎಂದು ಪೋಸ್ಟರ್ನಲ್ಲಿ ಹೇಳಲಾಗಿದೆ. ಸದ್ಯ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿಂದ ಶೂಟಿಂಗ್ ನಡೆಯಲಿದೆ. ಪ್ರಮುಖ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಳ್ಳಲಿದ್ದಾರೆ. ವಿಲನ್ ಪಾತ್ರಗಳಲ್ಲಿ ಉಗ್ರಂ ಮಂಜು, ಕಾಕ್ರೊಚ್ ಸುದೀ ಮತ್ತಿತರರು ಕಾಣಿಸಿಕೊಳ್ಳಲಿದ್ದಾರೆ. ಭುವನ್ ಪೊನ್ನಣ್ಣ , ಮಧು ಕಂಸಾಳೆ ಫಿಲಂಸ್ ಬ್ಯಾನರ್ ಹಾಗು ಗಣೇಶ್ ಮಹಾದೇವ್ ಅವರ ನೇತೃತ್ವದಲ್ಲಿ ನಿರ್ಮಿಸಲ್ಪಡುತ್ತಿದೆ. ಸ
ಇದನ್ನೂ ಓದಿ: ಕುಟುಂಬದೊಟ್ಟಿಗೆ ಕೊಲ್ಲೂರಿಗೆ ಬಂದು ಹರಕೆ ತೀರಿಸಿದ ನಟಿ ಹರ್ಷಿಕಾ ಪೂಣಚ್ಚ-ಭುವನ್
ಹರ್ಷಿಕಾ ಬಾಳಲ್ಲಿ ಇತ್ತೀಚೆಗೆ ಸಾಕಷ್ಟು ಖುಷಿಯ ವಿಚಾರಗಳು ನಡೆದಿವೆ. 2023ರಲ್ಲಿ ಇವರು ಭುವನ್ ಪೊನ್ನಣ್ಣ ಅವರನ್ನು ಮದುವೆ ಆದರು. ಆ ಬಳಿಕ ಅವರಿಗೆ ಮಗು ಜನಿಸಿದೆ. ಈಗ ಅವರು ನಿರ್ದೇಶನಕ್ಕೆ ಇಳಿಯುವ ಘೋಷಣೆ ಮಾಡಿದ್ದಾರೆ. ಈ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:37 pm, Thu, 20 March 25