ಶೀಘ್ರವೇ ತೆರೆಗೆ ಬರಲಿದೆ ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’; ಅಪ್​ಡೇಟ್​ ನೀಡಿದ ಚಿತ್ರತಂಡ

| Updated By: ಮದನ್​ ಕುಮಾರ್​

Updated on: Jan 04, 2022 | 7:30 AM

Chiranjeevi Sarja: ಚಿರಂಜೀವಿ ಸರ್ಜಾ ಅಭಿನಯದ ‘ರಾಜಮಾರ್ತಾಂಡ’ ಚಿತ್ರಕ್ಕೆ ಕೊನೇ ಹಂತದ ಕೆಲಸಗಳು ಮಾತ್ರ ಬಾಕಿ ಇವೆ. ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರಬೇಕು ಎಂಬ ಆಶಯದೊಂದಿಗೆ ಚಿತ್ರತಂಡ ಕೆಲಸ ಮಾಡುತ್ತಿದೆ.

ಶೀಘ್ರವೇ ತೆರೆಗೆ ಬರಲಿದೆ ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’; ಅಪ್​ಡೇಟ್​ ನೀಡಿದ ಚಿತ್ರತಂಡ
ಚಿರಂಜೀವಿ ಸರ್ಜಾ
Follow us on

ಚಿರಂಜೀವಿ ಸರ್ಜಾ (Chiranjeevi Sarja) ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕಾದ ನಷ್ಟ. ಹೃದಯಾಘಾತದಿಂದ ನಿಧನರಾಗುವುದಕ್ಕೂ ಮುನ್ನ ಅವರು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ಪೈಕಿ ‘ರಾಜಮಾರ್ತಾಂಡ’ ಸಿನಿಮಾ (Rajamarthanda Kannada Movie) ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಟೀಸರ್​ ಮೂಲಕ ಭಾರಿ ಹೈಪ್​ ಕೂಡ ಸೃಷ್ಟಿ ಮಾಡಿತ್ತು. ಆದರೆ ಆ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುಕ್ಕೂ ಮುನ್ನವೇ ಚಿರಂಜೀವಿ ಸರ್ಜಾ ವಿಧಿವಶರಾದರು. ಈಗ ಆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಕುರಿತು ಚಿತ್ರತಂಡದಿಂದ ಅಪ್​ಡೇಟ್​ ಸಿಕ್ಕಿದೆ. ಚಿರಂಜೀವಿ ಸರ್ಜಾ ಅವರನ್ನು ಮತ್ತೆ ಬೆಳ್ಳಿಪರದೆ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅಂಥವರಿಗೆಲ್ಲ ಇಲ್ಲಿದೆ ಗುಡ್​ ನ್ಯೂಸ್​. ಶೀಘ್ರದಲ್ಲೇ ಈ ಚಿತ್ರವನ್ನು ಸೆನ್ಸಾರ್​ ಮಂಡಳಿ ಸದಸ್ಯರು ವೀಕ್ಷಿಸಲಿದ್ದಾರೆ.

‘ರಾಜಮಾರ್ತಾಂಡ’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಬರದಿಂದ ಸಾಗುತ್ತಿವೆ. ಕೊನೇ ಹಂತದ ಕೆಲಸಗಳು ಮಾತ್ರ ಬಾಕಿ ಇವೆ. ಚಿರಂಜೀವಿ ಸರ್ಜಾ ಅವರ ಪಾತ್ರಕ್ಕೆ ಅವರ ಸಹೋದರ ಧ್ರುವ ಸರ್ಜಾ ಅವರು ಧ್ವನಿ ನೀಡಲಿದ್ದಾರೆ. ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರಬೇಕು ಎಂಬ ಆಶಯದೊಂದಿಗೆ ಚಿತ್ರತಂಡ ಕೆಲಸ ಮಾಡುತ್ತಿದೆ.

ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ‘ಟಗರು’ ಖ್ಯಾತಿಯ ತ್ರಿವೇಣಿ ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರಾ, ಶಂಕರ್ ಅಶ್ವಥ್, ವಿನೀತ್ ಕುಮಾರ್ ಮುಂತಾದವರು ಈ ಚಿತ್ರದ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿರಂಜೀವಿ ಸರ್ಜಾ ಅವರ ನಿಧನಕ್ಕೂ ಮುನ್ನ ‘ರಾಜಮಾರ್ತಾಂಡ’ ಚಿತ್ರೀಕರಣ ಪೂರ್ತಿಯಾಗಿತ್ತು. ಹಾಗಾಗಿ ಇದನ್ನು ಅವರು ಶೂಟಿಂಗ್​ ಮುಗಿಸಿದ್ದ ಕೊನೆಯ ಚಿತ್ರ ಎನ್ನಬಹುದು.‌

ಗೀತರಚನಕಾರರಾಗಿ ಜನಪ್ರಿಯರಾಗಿರುವ ಜೆ.ಕೆ. ರಾಮ್​ ನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶ್ರೀಮಾದೇಶ್ವರ ಪ್ರೊಡಕ್ಷನ್ಸ್ ಮೂಲಕ ಪ್ರಣವ್ ಗೌಡ ಎನ್., ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮ ವಿಶ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ‘ರಾಜಮಾರ್ತಾಂಡ’ ಚಿತ್ರದ ಮೆರುಗು ಹೆಚ್ಚಿದೆ. ಜೆ.ಕೆ. ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ, ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ‘ರಾಜಮಾರ್ತಾಂಡ’ ಸಿನಿಮಾ ಮೂಡಿಬಂದಿದೆ.

ಇದನ್ನೂ ಓದಿ:

‘ಚಿರಂಜೀವಿಗೆ ಯಾವಾಗಲೂ ಭಾನುವಾರ ವಿಶೇಷವಾಗಿತ್ತು’; ಕಾರಣ ವಿವರಿಸಿದ ಮೇಘನಾ

ಕ್ರಿಸ್​ಮಸ್​ ಆಚರಿಸಿದ ಚಿರು ಪುತ್ರ ರಾಯನ್​; ಮೇಘನಾ ರಾಜ್​ ಹಂಚಿಕೊಂಡ ಫೋಟೋಗಳು ಇಲ್ಲಿವೆ