ಗೋವಾ, ಗೋಕರ್ಣದಲ್ಲಿ ‘ಕ್ಲಾಸ್ ಆಫ್ ಮೈಸೂರು’ ಸಿನಿಮಾಗೆ ಮೊದಲ ಹಂತದ ಶೂಟಿಂಗ್

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ಆಚರಿಸಿಕೊಂಡಿದ್ದ ‘ಕ್ಲಾಸ್ ಆಫ್ ಮೈಸೂರು’ ಸಿನಿಮಾಗೆ ಈಗ ಮೊದಲ ಹಂತದ ಶೂಟಿಂಗ್ ಮುಗಿದಿದೆ. ‘ಯಥಾಭವ’ ಖ್ಯಾತಿಯ ಗೌತಮ್ ಬಸವರಾಜು ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗದಲ್ಲಿ ಅನೇಕ ಹಿರಿಯ ಕಲಾವಿದರು ಇದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

ಗೋವಾ, ಗೋಕರ್ಣದಲ್ಲಿ ‘ಕ್ಲಾಸ್ ಆಫ್ ಮೈಸೂರು’ ಸಿನಿಮಾಗೆ ಮೊದಲ ಹಂತದ ಶೂಟಿಂಗ್
Class Of Mysore Movie Team

Updated on: Apr 06, 2026 | 3:20 PM

ಅನೇಕ ಹಿರಿಯ ಕಲಾವಿದರು ಅಭಿನಯಿಸುತ್ತಿರುವ ‘ಕ್ಲಾಸ್ ಆಫ್ ಮೈಸೂರು’ (Class of Mysore) ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಒಂದು ನಿರೀಕ್ಷೆ ಇದೆ. ಈ ಚಿತ್ರದ ಪಾತ್ರವರ್ಗ ಮತ್ತು ಶೀರ್ಷಿಕೆ ಗಮನ ಸೆಳೆದಿದೆ. ರಂಗಾಯಣ ರಘು, ದತ್ತಣ್ಣ (Dattanna), ಶರತ್ ಲೋಹಿತಾಶ್ವ ಮುಂತಾದ ಹಿರಿಯ ನಟರು ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿವೆ. ಆ ಬಗ್ಗೆ ‘ಕ್ಲಾಸ್ ಆಫ್ ಮೈಸೂರು’ ಸಿನಿಮಾ ತಂಡ ಮಾಹಿತಿ ಹಂಚಿಕೊಂಡಿದೆ.

ಒಂದಷ್ಟು ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿರುವ ‘ಕ್ಲಾಸ್ ಆಫ್ ಮೈಸೂರು’ ಚಿತ್ರಕ್ಕೆ ಗೋವಾ ಹಾಗೂ ಗೋಕರ್ಣದ ಸುಂದರ ಲೊಕೇಷನ್​ಗಳಲ್ಲಿ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮಾಡಲಾಗಿದೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ದತ್ತಣ್ಣ, ಮಹಾಂತೇಶ್, ತಬಲನಾಣಿ, ವೈಜನಾಥ್ ಬಿರಾದಾರ್ ಮುಂತಾದವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

‘ಕ್ಲಾಸ್ ಆಫ್ ಮೈಸೂರು’ ಚಿತ್ರವು ಹಾಸ್ಯ ಭರಿತ ಕಥೆಯನ್ನು ಹೊಂದಿರಲಿದೆ. ಅದರ ಜೊತೆಗೆ ಸಂಸ್ಕೃತಿ ಮತ್ತು ಭಾವನೆಗಳನ್ನು ಒಟ್ಟುಗೂಡಿಸಿದ ಕಥೆ ಇದೆ ಎಂದು ಚಿತ್ರತಂಡ ಹೇಳಿದೆ. ಹಿರಿಯ ನಾಗರಿಕರ ಕುರಿತ ಕಥಾವಸ್ತು ಇರುವ ಸಿನಿಮಾ ಆದ್ದರಿಂದ ಇದು ಡಿಫರೆಂಟ್ ಎನಿಸಿಕೊಂಡಿದೆ. ಸೆಟ್ಟೇರಿದ ದಿನದಿಂದಲೂ ಈ ಸಿನಿಮಾ ಗಮನ ಸೆಳೆಯುತ್ತಿದೆ.

ಈ ಸಿನಿಮಾದ ಪಾತ್ರವರ್ಗದಲ್ಲಿ ಹಿರಿಯ ನಟಿ ತಾರಾ ಅನುರಾಧಾ ಕೂಡ ಇದ್ದಾರೆ. ಅಲ್ಲದೇ ಹಿರಿಯ ಹಾಗೂ ಅನುಭವಿ ಕಲಾವಿದರ ಸಮಾಗಮ ಆಗಿದೆ. ಸಹ ನಿರ್ಮಾಪಕರೂ ಆಗಿರುವ ವಿಜಯೇಂದ್ರ ಸೂರ್ಯವಂಶಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೋ ಕೋಸ್ಟಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಎಸ್.ಕೆ. ರಾವ್ ಅವರು ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ: ‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು

ನಾಗಾರ್ಜುನ ಶರ್ಮ ಅವರು ಸಾಹಿತ್ಯ ಬರೆದಿದ್ದಾರೆ. ಮಾಸ್ತಿ ಅವರ ಸಂಭಾಷಣೆ, ಉಲ್ಲಾಸ್ ಹೈದರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಎರಡನೇ ಹಂತದ ಚಿತ್ರೀಕರಣವನ್ನು ಶೀಘ್ರದಲ್ಲೇ ಆರಂಭಿಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಗೌತಮ್ ಬಸವರಾಜು ಅವರು ಈ ಸಿನಿಮಾದ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ‘ಮಾಕ್ಟ್ ಎಂಟರ್‌ಟೈನ್‌ಮೆಂಟ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ತಯಾರಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us