
‘ಚಂದ್ರಹಾಸ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹರೀಶ್ ಹಿರಿಯೂರು ಅವರು ನಾಯಕ ನಟನಾಗಿ ಅಭಿನಯಿಸಿರುವ ಈ ಸಿನಿಮಾಗೆ ಆನಂದ್ ಕಲಕಬಂಡಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಬಸನಗೌಡ ಪಟೀಲ್ ಅವರು ‘ಅಮರಶ್ರೀ ಕಂಬೈನ್ಸ್’ ಬ್ಯಾನರ್ ಮೂಲಕ ಬಂಡವಾಳ ಹೂಡಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ‘ಚಂದ್ರಹಾಸ’ ಚಿತ್ರತಂಡ ಇದೀಗ ಟ್ರೇಲರ್ ಬಿಡುಗಡೆ ಮಾಡಿದೆ. ಅಕ್ಟೋಬರ್ 23ರಂದು ಈ ಸಿನಿಮಾ ರಿಲೀಸ್ ಆಗಲಿದೆ.
ಬಹುತೇಕ ಎಲ್ಲರೂ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ. ಆದರೆ ನಟನೆ ಅವರಿಗೆ ಹೊಸದೇನಲ್ಲ. ಯಾಕೆಂದರೆ ಎಲ್ಲರೂ ರಂಗಭೂಮಿಯಲ್ಲಿ ಪಳಗಿದವರು. ನಾಯಕ ಹರೀಶ್ ಹಿರಿಯೂರು ರಂಗಭೂಮಿ ಜೊತೆಗೆ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದವರು. ಇದೀಗ ಮೊದಲ ಬಾರಿಗೆ ಹೀರೋ ಆಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
ಚಂದ್ರ ಎನ್ನುವ ಗೆಳೆಯ ಜೊತೆಯಲ್ಲಿದ್ದರೆ, ಜೀವನ ನಗುವಿನಿಂದ ಕೂಡಿರುತ್ತೆ ಎನ್ನುವುದು ಈ ಸಿನಿಮಾದ ಒನ್ ಲೈನ್ ಸ್ಟೋರಿ. ಹಾಗಾಗಿ ‘ಚಂದ್ರಹಾಸ’ ಎಂದು ಶೀರ್ಷಿಕೆ ಇಡಲಾಗಿದೆ. ಕಾಮಿಡಿ, ಗೆಳೆತನ, ಎಮೋಷನ್, ಮಧ್ಯಮ ವರ್ಗದವರ ಜೀವನ ಜಂಜಾಟ ಎಲ್ಲವೂ ಈ ಸಿನಿಮಾದಲ್ಲಿ ಇರಲಿದೆ. ಟ್ರೇಲರ್ ರಿಲೀಸ್ ಮಾಡಿ ಮಾತನಾಡಿದ ನಿರ್ದೇಶಕ ಆನಂದ್, ‘ಚಂದ್ರಹಾಸ ಕಥೆ ಸುಮ್ಮನೆ ಹುಟ್ಟಿದ್ದಲ್ಲ. ಸಿನಿಮಾದ ಹಲವಾರು ಪಾತ್ರಗಳು ಜೀವನದಲ್ಲಿ ನೋಡಿದ ಪಾತ್ರಗಳೇ ಆಗಿವೆ. ಪ್ರತಿಯೊಬ್ಬರು ಕಾಡುವಂತಹ ಸಿನಿಮಾ ಇದು. ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ’ ಎಂದರು.
ಬಸವಂತಗೌಡ ಪಾಟೀಲ್ ನಿರ್ಮಿಸಿರುವ ಈ ಚಿತ್ರಕ್ಕೆ ಬಸಣ್ಣ ಕಮತ್ತರ್ ಸಹ-ನಿರ್ಮಾಪಕರಾಗಿದ್ದಾರೆ. ನಾಯಕ ಹರೀಶ್ ಅವರಿಗೆ ಜೋಡಿಯಾಗಿ ನಟಿ ಛಾಯಾಶ್ರೀ ಉಮೇಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಿಂಗರಾಜು ಮಂಡ್ಯ, ಸಂತೋಷ್ ಕೆರಿ, ಸೂರ್ಯಕಲ, ಕಳಕಪ್ಪ ತಲವಾರ್, ಜ್ಯೋತಿ ಮಂಗಳೂರು ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ಆಡಿಷನ್ಗೆ ರಿಷಬ್ ಗೆಟಪ್ನಲ್ಲೇ ಬಂದ ಸ್ಪರ್ಧಿ; ಜಗ್ಗೇಶ್ ಶಾಕ್
ನಾಯಕಿ ಛಾಯಾಶ್ರೀ ಮಾತನಾಡಿ, ‘ಶ್ರೀದೇವಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾಸಿಟಿವ್ ಜೊತೆಗಿನ ನೆಗೆಟಿವ್ ಶೇಡ್ ಕೂಡ ಇದೆ. ನಟನಾ ತಂಡದಿಂದ ಬಂದಿದ್ದು ನಾನು, ಮಂಡ್ಯ ರಮೇಶ್ ಸರ್ ನನ್ನ ಗುರುಗಳು’ ಎಂದು ಹೇಳಿದರು. ನಾಯಕ ಹರೀಶ್ ಮಾತನಾಡಿ, ‘ಈ ಸಿನಿಮಾ ಮೂಲಕ ನನಗೆ ರಂಗರತ್ನ ಎನ್ನುವ ಬಿರುದು ಕೊಟ್ಟಿದ್ದಾರೆ. ರಂಗಭೂಮಿಯಿಂದ ಬಂದವನಾಗಿದ್ದರಿಂದ ಇದು ನನಗೆ ಬಹಳ ಖುಷಿಯಾಯಿತು’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.