ಚಲನಚಿತ್ರ ನಿರ್ದೇಶಕರ ಸಂಘದ ಗೊಂದಲ: ನಾಳೆ ರೂಪಾ ಅಯ್ಯರ್ ಸುದ್ದಿಗೋಷ್ಠಿ
ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಏರ್ಪಟ್ಟಿರುವ ಗೊಂದಲಕ್ಕೆ ಸಂಬಂಧಪಟ್ಟಂತೆ ನಿರ್ದೇಶಕರ ಸಂಘದ ಆಡಳಿತಾಧಿಕಾರಿ ರೂಪಾ ಅಯ್ಯರ್ ಅವರು ನಾಳೆ ಬೆಳಗ್ಗೆ 11ಗಂಟೆಗೆ ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ. ಈ ವೇಳೆ ಕನ್ನಡದ ಕೆಲ ಹಿರಿಯ ನಿರ್ದೇಶಕರೂ ಭಾಗಿಯಾಗಲಿದ್ದಾರೆ.
ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಗೊಂದಲ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಲು ಚಲನಚಿತ್ರ ಸಂಘದ ಆಡಳಿತಾಧಿಕಾರಿ ರೂಪಾ ಅಯ್ಯರ್ ನಾಳೆ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಕರೆದಿದ್ದಾರೆ. ಕನ್ನಡದ ಕೆಲ ಹಿರಿಯ ನಿರ್ದೇಶಕರ ಸಮ್ಮುಖದೊಂದಿಗೆ ಅವರು ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಆರೋಪಗಳಿಗೆ ಉತ್ತರ ನೀಡುವ ಸಾಧ್ಯತೆಯಿದೆ. ರೂಪಾ ಅಯ್ಯರ್ ಜೊತೆಗೆ ಹಿರಿಯ ನಿರ್ದೇಶಕರಾದ ಭಗವಾನ್, ರಾಜೇಂದ್ರಸಿಂಗ್ ಬಾಬು, ಜೋ ಸೈಮನ್, ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ ಮೊದಲಾದವರು ಭಾಗಿಯಾಗಲಿದ್ದಾರೆ.
ಘಟನೆಯ ಹಿನ್ನೆಲೆ:
ಚಲನಚಿತ್ರ ಸಂಘ ಈಗ ಗೊಂದಲದ ಗೂಡಾಗಿದೆ. ಕಾರಣ, ಕೆಲ ದಿನಗಳ ಹಿಂದಷ್ಟೆ ನಿರ್ದೇಶಕ ಟೆಶಿ ವೆಂಕಟೇಶ್ ಸುದ್ದಿಗೋಷ್ಟಿ ಮಾಡಿ ರೂಪಾ ಅಯ್ಯರ್ ಮೇಲೆ ಆರೋಪ ಮಾಡಿದ್ದರು. ಸರ್ಕಾರ ನಿರ್ದೇಶಕರ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಿದ್ದೇ ಕಾನೂನು ಬಾಹಿರ ಎಂದು ಗಂಭೀರ ಆರೋಪ ಮಾಡಿದ್ದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ್ದ ರೂಪಾ ಅಯ್ಯರ್, ಟೇಶಿ ವೆಂಕಟೇಶ್ ಅವರ ಅಧ್ಯಕ್ಷ ಪಟ್ಟ ಕಾನೂನು ಪ್ರಕಾರ ನಡೆದೇ ಇಲ್ಲ ಎಂದು ಪ್ರತ್ಯಾರೋಪ ಮಾಡಿದ್ದರು. ಜೊತೆಗೆ ಕೆಲ ದಿನಗಳಲ್ಲೇ ಹಿರಿಯ ನಿರ್ದೇಶಕರೊಂದಿಗೆ ಸುದ್ದಿಗೋಷ್ಠಿ ನಡೆಸಿ ಎಲ್ಲವಕ್ಕೂ ಉತ್ತರಿಸುತ್ತೇನೆ ಎಂದಿದ್ದರು. ಆ ಸುದ್ದಿಗೋಷ್ಠಿ ನಾಳೆ ಬೆಳಗ್ಗೆ ನಡೆಯಲಿದೆ.
ಚಿತ್ರರಂಗಕ್ಕೆ ಒಳ್ಳೆಯದಾಗಲಿ ಎಂದು ರೂಪಾ ಅಯ್ಯರ್ ನಡೆಸುತ್ತಿರುವ ಕೆಲಸಗಳನ್ನು ಟೇಶಿ ವೆಂಕಟೇಶ್ ಸಹಿಸುತ್ತಿಲ್ಲ. ಆದ್ದರಿಂದ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಸಂಘದಲ್ಲಿ ನಿರ್ಮಾಪಕರು ಏನಾದರೂ ಸಹಾಯ ಕೇಳಿದರೆ ಬಹಳ ಕೀಳುಮಟ್ಟದಲ್ಲಿ ನಿಂದಿಸುತ್ತಾರೆ ಎಂದು ನಾಗೇಂದ್ರ ಅರಸ್ ಅವರು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದರೊಂದಿಗೆ ಅನೇಕ ನಿರ್ದೇಶಕರು ನಿರ್ದೇಶಕ ಸಂಘದ ಚುನಾವಣೆ ಕಾನೂನು ಪ್ರಕಾರ ನಡೆದಿಲ್ಲ ಎಂದು ಆರೋಪ ಮಾಡಿದ್ದಾರೆ. ಹಿಂದಿನ ಸಂಘವನ್ನು ವಿಸರ್ಜಿಸದೇ ಹೊಸ ಅಧ್ಯಕ್ಷರ ಆಯ್ಕೆ ನಡೆದಿದೆ. ಸದಸ್ಯರ ಅನುಮತಿ ಪಡೆಯದೇ ಅವಿರೋಧ ಆಯ್ಕೆ ನಡೆದಿದೆ ಎಂದು ಆರೋಪಿಸಲಾಗಿದೆ.
‘ಸಿನಿಮಾ ಬಜಾರ್’ ಯೋಜನೆ ಹೆಸರಿನಲ್ಲಿ ಟೇಶಿ ವೆಂಕಟೇಶ್ ಅವರು ಹಲವು ನಿರ್ಮಾಪಕರಿಗೆ ವಂಚನೆ ಮಾಡಿದ್ದಾರೆ ಎಂದು ನಿರ್ಮಾಪಕ ಜೆ.ಜೆ ಶ್ರೀನಿವಾಸ್ ಅವರು ಆರೋಪಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದ ಖರೀದಿದಾರರು ಬರುತ್ತಾರೆ. ನಮ್ಮ ಸಿನಿಮಾಗಳನ್ನ ಬೇರೆಯವರು ಖರೀದಿಸುತ್ತಾರೆ ಎಂದು ವೆಂಕಟೇಶ್ ಹೇಳಿದ್ದರು. ಖಾಸಗಿ ಹೋಟೆಲ್‌ನಲ್ಲಿ ಕಾರ್ಯಕ್ರಮ ಕೂಡ ಮಾಡಿದ್ದರು. ನಿರ್ಮಾಪಕರೆಲ್ಲಾ 50 ಸಾವಿರಕ್ಕೂ ಹೆಚ್ಚು ಹಣ ಕೊಟ್ಟಿದ್ದಾರೆ. ಆದರೆ ಈವರೆಗೆ ಯಾರ ಸಿನಿಮಾ ಕೂಡ ಮಾರಾಟವಾಗಿಲ್ಲ. ಅವರು ಅಂತಾರಾಷ್ಟ್ರೀಯ ಖರೀದಿದಾರರನ್ನು ಕರೆಸಿರಲಿಲ್ಲ. ಮುಂಬೈನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವರು ಬಂದಿದ್ರು’ ಎಂದು ನಿರ್ಮಾಪಕ ಜೆ.ಜೆ. ಶ್ರೀನಿವಾಸ್ ಆರೋಪ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆ ನಡೆಯುವ ಸುದ್ದಿಗೋಷ್ಠಿ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ರೂಪಾ ಅಯ್ಯರ್ Vs ಟೇಶಿ ವೆಂಕಟೇಶ್; ನಿರ್ದೇಶಕರ ಸಂಘದಲ್ಲಿ ವಿವಾದಗಳು ಒಂದಲ್ಲಾ ಎರಡಲ್ಲಾ
Published On - 5:35 pm, Thu, 8 July 21