ರೂಪಾ ಅಯ್ಯರ್ Vs ಟೇಶಿ ವೆಂಕಟೇಶ್; ನಿರ್ದೇಶಕರ ಸಂಘದಲ್ಲಿ ವಿವಾದಗಳು ಒಂದಲ್ಲಾ ಎರಡಲ್ಲಾ
ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಬಗ್ಗೆ ಹಲವು ಆರೋಪ ಕೇಳಿಬಂದಿದೆ. ಬರೀ ಅಧ್ಯಕ್ಷರೆಂದು ಹೇಳಿಕೊಂಡು ಓಡಾಡೋದಲ್ಲ. ಅಧ್ಯಕ್ಷರಾದವರಿಗೆ ಅದರ ಬಗ್ಗೆ ಅರಿವು ಕೂಡ ಇರಬೇಕು ಎಂದು ನಾಗೇಂದ್ರ ಅರಸ್ ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಂಘದ ಅಧ್ಯಕ್ಷರಾಗಿರುವ ಟೇಶಿ ವೆಂಕಟೇಶ್ ಮತ್ತು ಆಡಳಿತಾಧಿಕಾರಿ ರೂಪಾ ಅಯ್ಯರ್ ನಡುವೆ ಜಟಾಪಟಿ ಏರ್ಪಟ್ಟಿದೆ. ಸಂಘಕ್ಕೆ ಆಡಳಿತಾಧಿಕಾರಿಯ ನೇಮಕವೇ ಕಾನೂನು ಬಾಹಿರ ಎಂದು ಟೇಶಿ ವೆಂಕಟೇಶ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ರೂಪಾ ಅಯ್ಯರ್ ಅವರು, ‘ಅಧ್ಯಕ್ಷರಾಗಿ ಟೇಶಿ ವೆಂಕಟೇಶ್ ಆಯ್ಕೆಯು ಬೈಲಾ ಪ್ರಕಾರ ನಡೆದಿಲ್ಲ’ ಎಂದು ಆರೋಪಿಸಿದ್ದಾರೆ. ಒಟ್ಟಾರೆ ಆರೋಪ-ಪ್ರತ್ಯಾರೋಪಗಳಿಗೆ ಸಂಬಂಧಿಸಿದಂತೆ ಹಲವು ನಿರ್ದೇಶಕರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೂಪಾ ಅಯ್ಯರ್ ಅವರು, ‘ಸದ್ಯ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಿಲ್ಲ. ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ಪ್ರತಿಕ್ರಿಯಿಸುತ್ತೇನೆ. ಹಿರಿಯ ನಿರ್ದೇಶಕರ ಸಮ್ಮುಖದಲ್ಲಿ ಮಾತಾಡುತ್ತೇನೆ’ ಎಂದು ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಟೇಶಿ ವೆಂಕಟೇಶ್ ವಿರುದ್ಧ ನಾಗೇಂದ್ರ ಅರಸ್ ವಾಗ್ದಾಳಿ ನಡೆಸಿದ್ದಾರೆ.
‘ಚಿತ್ರರಂಗಕ್ಕೆ ಒಳ್ಳೆಯದಾಗಲಿ ಎಂದು ರೂಪಾ ಅಯ್ಯರ್ ಕೆಲಸ ಮಾಡ್ತಿದ್ದಾರೆ. ಟೇಶಿ ವೆಂಕಟೇಶ್‌ಗೆ ಅದನ್ನು ಸಹಿಸುವುದಕ್ಕೆ ಆಗಲ್ಲ. ಹೀಗಾಗಿ ರೂಪಾ ಅಯ್ಯರ್‌ರನ್ನು ವಿರೋಧ ಮಾಡ್ತಿದ್ದಾರೆ. ಸಂಘದಲ್ಲಿ ನಿರ್ಮಾಪಕರು ಏನಾದರೂ ಸಹಾಯ ಕೇಳಿದ್ರೆ ಟೇಶಿ ವೆಂಕಟೇಶ್ ಬಹಳ ಕೀಳು ಮಟ್ಟದಲ್ಲಿ ನಿಂದಿಸುತ್ತಾರೆ. ಬರೀ ಅಧ್ಯಕ್ಷರೆಂದು ಹೇಳಿಕೊಂಡು ಓಡಾಡೋದಲ್ಲ. ಅಧ್ಯಕ್ಷರಾದವರಿಗೆ ಅದರ ಬಗ್ಗೆ ಅರಿವು ಕೂಡ ಇರಬೇಕು’ ಎಂದು ನಾಗೇಂದ್ರ ಅರಸ್ ಹೇಳಿದ್ದಾರೆ.
‘ಸಿನಿಮಾ ನಿರ್ದೇಶಕರ ಸಂಘಕ್ಕೆ ಚುನಾವಣೆಯೇ ನಡೆದಿಲ್ಲ. ಚುನಾವಣೆ ಮಾಡದೆ 2 ಲಕ್ಷಕ್ಕೆ ಟೇಶಿ ವೆಂಕಟೇಶ್ ಡೀಲ್ ಮಾಡಿಕೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ನಾಗೇಂದ್ರ ಪ್ರಸಾದ್ ರಾಜೀನಾಮೆ ನೀಡಬೇಕಿತ್ತು. ಬಳಿಕ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಅದ್ಯಾವುದೂ ಮಾಡದೇ ಟೇಶಿ ವೆಂಕಟೇಶ್‌ರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಸಭೆಗೆ ಬಂದಿದ್ದ 80 ಜನರ ಪೈಕಿ ಕೆಲವರಿಂದ ಮಾತ್ರ ಆಯ್ಕೆ ನಡೆದಿದೆ. ಚುನಾವಣೆ ಮಾಡುವಂತೆ ರೂಪಾ ಅಯ್ಯರ್ ಹೇಳಿದ್ದರು. ಆದರೆ ರೂಪಾ ಅಯ್ಯರ್ ಮಾತನ್ನು ಯಾರೂ ಕೇಳಿರಲಿಲ್ಲ. ನಿರ್ದೇಶಕರ ಸಂಘಕ್ಕೆ ನಾವೆಲ್ಲಾ ರಾಜೀನಾಮೆಯೇ ಕೊಟ್ಟಿಲ್ಲ. ನಾವು ರಾಜೀನಾಮೆ ನೀಡದೆ ಹೊಸಬರನ್ನು ಆಯ್ಕೆ ಮಾಡಿದ್ದಾರೆ’ ಎಂದು ಕೆಲವು ನಿರ್ದೇಶಕರು ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೆ.ಜೆ. ಶ್ರೀನಿವಾಸ್, ನಾಗೇಂದ್ರ ಅರಸ್, ಮಳವಳ್ಳಿ ಸಾಯಿಕಷ್ಣ ಮಂತಾದವರು ಭಾಗಿ ಆಗಿದ್ದರು. ‘ಸಿನಿಮಾ ಬಜಾರ್’ ಯೋಜನೆ ಹೆಸರಲ್ಲಿ ಟೇಶಿ ವೆಂಕಟೇಶ್ ಅವರು ನಿರ್ಮಾಪಕರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪ ಸಹ ಎದುರಾಗಿದೆ.
‘ಅಂತಾರಾಷ್ಟ್ರೀಯ ಮಟ್ಟದ ಖರೀದಿದಾರರು ಬರುತ್ತಾರೆ. ನಮ್ಮ ಸಿನಿಮಾಗಳನ್ನ ಬೇರೆಯವರು ಖರೀದಿಸುತ್ತಾರೆ ಎಂದು ವೆಂಕಟೇಶ್ ಹೇಳಿದ್ದರು. ಖಾಸಗಿ ಹೋಟೆಲ್‌ನಲ್ಲಿ ಕಾರ್ಯಕ್ರಮ ಕೂಡ ಮಾಡಿದ್ದರು. ನಿರ್ಮಾಪಕರೆಲ್ಲಾ 50 ಸಾವಿರಕ್ಕೂ ಹೆಚ್ಚು ಹಣ ಕೊಟ್ಟಿದ್ದಾರೆ. ಆದರೆ ಈವರೆಗೆ ಯಾರ ಸಿನಿಮಾ ಕೂಡ ಮಾರಾಟವಾಗಿಲ್ಲ. ಅವರು ಅಂತಾರಾಷ್ಟ್ರೀಯ ಖರೀದಿದಾರರನ್ನು ಕರೆಸಿರಲಿಲ್ಲ. ಮುಂಬೈನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವರು ಬಂದಿದ್ರು’ ಎಂದು ನಿರ್ಮಾಪಕ ಜೆ.ಜೆ. ಶ್ರೀನಿವಾಸ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:
ಡಾ. ರಾಜ್, ಅಂಬರೀಷ್ಗೆ ಸಿಕ್ಕ ಸ್ಥಾನ ವಿಷ್ಣುವರ್ಧನ್ಗೆ ಯಾಕಿಲ್ಲ? ಸಾಕ್ಷಿ ಸಹಿತ ಪ್ರಶ್ನೆ ಕೇಳಿದ ಅನಿರುದ್ಧ್
‘ಕನ್ನಡ ಚಿತ್ರರಂಗ ಅತಿ ಕಳಪೆ’ ಎಂದವರಿಗೆ ಚೇತನ್ ಬೆಂಬಲ; ಖಡಕ್ ಎಚ್ಚರಿಕೆ ಕೊಟ್ಟ ರಕ್ಷಿತ್ ಶೆಟ್ಟಿ