‘ಇದಕ್ಕೆ ಉತ್ತರ ಕೊಡುತ್ತೇನೆ’; ತೇಜೋವಧೆ ಮಾಡಿದ ಮಾಧ್ಯಮಕ್ಕೆ ರಕ್ಷಿತ್​ ಶೆಟ್ಟಿ ಖಡಕ್​ ಎಚ್ಚರಿಕೆ

ಬಿಟ್ಟು ಹೋದವರು ನನ್ನಿಂದ, ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆಯೇ ಹೊರತು, ಯಾರೂ ಕಳೆದುಕೊಂಡು ಹೋಗಿಲ್ಲ.  ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೀನಿ ಎಂದು ರಕ್ಷಿತ್​ ಪತ್ರದಲ್ಲಿ ಬರೆದುಕೊಂಡಿದ್ದಾರೆ.

‘ಇದಕ್ಕೆ ಉತ್ತರ ಕೊಡುತ್ತೇನೆ’; ತೇಜೋವಧೆ ಮಾಡಿದ ಮಾಧ್ಯಮಕ್ಕೆ ರಕ್ಷಿತ್​ ಶೆಟ್ಟಿ ಖಡಕ್​ ಎಚ್ಚರಿಕೆ
ರಕ್ಷಿತ್​ ಶೆಟ್ಟಿ
Rajesh Duggumane

|

Jul 01, 2021 | 6:46 PM

ರಕ್ಷಿತ್​ ಶೆಟ್ಟಿ ಅವರು ಸ್ಯಾಂಡಲ್​ವುಡ್​ನಲ್ಲಿ ಯಶಸ್ವಿ ನಟನಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ನಟನೆಯ ‘ಕಿರಿಕ್​ ಪಾರ್ಟಿ’ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈಗ ಅವರ ವಿರುದ್ಧ ಖಾಸಗಿ ಮಾಧ್ಯಮವೊಂದು ಇಲ್ಲ ಸಲ್ಲದ ಆರೋಪ ಮಾಡಿ ಸುದ್ದಿ ಪ್ರಸಾರ ಮಾಡಿದೆ. ಇದಕ್ಕೆ ರಕ್ಷಿತ್​ ಶೆಟ್ಟಿ ಬೇಸರ ಹೊರ ಹಾಕಿದ್ದಾರೆ. ಅಲ್ಲದೆ, ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ.

‘ನನ್ನ ವೃತ್ತಿ ಜೀವನದಲ್ಲಿ ಯಾರೆಲ್ಲಾ ನನ್ನ ಜೊತೆ ಕೆಲಸ ಮಾಡಿದ್ದಾರೋ, ಅವರಲ್ಲಿ ಶೇಕಡ 90ರಷ್ಟು ಜನ ಇಂದಿಗೂ ನನ್ನ ಜೊತೆಯಲ್ಲೇ ಇದ್ದಾರೆ. ಬಿಟ್ಟು ಹೋದವರು ನನ್ನಿಂದ, ನನ್ನ ಕೆಲಸದಿಂದ ಏನಾದರೂ ಪಡೆದುಕೊಂಡು ಹೋಗಿದ್ದಾರೆಯೇ ಹೊರತು, ಯಾರೂ ಕಳೆದುಕೊಂಡು ಹೋಗಿಲ್ಲ.  ಕಳೆದುಕೊಂಡವರಿಗೆ ಮುಂದೆ ಹೋಗಿ ಸಹಾಯ ಮಾಡಿದ್ದೀನಿ, ಅಥವಾ ಅವರಿಗೆ ಭುಜ ಕೊಟ್ಟು ನಿಂತಿದ್ದೀನಿ. ಇದಕ್ಕೆ ನನ್ನ ಜೊತೆ ಕೆಲಸ ಮಾಡಿದ ಪ್ರತಿಯೊಬ್ಬ ಲೈಟ್​ ಆಫೀಸರ್​ ಇಂದ ಹಿಡಿದು, ತಾಂತ್ರಿಕ ವರ್ಗ, ನಿರ್ದೇಶಕರು ಹಾಗೂ ಪ್ರತಿಯೊಬ್ಬ ನಿರ್ಮಾಪಕರು ಸಾಕ್ಷಿ. ನಾನು ಇದೆಲ್ಲದರ ಬಗ್ಗೆ ಎಲ್ಲೂ ಮಾತನಾಡಲು ಬಯಸುವುದಿಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಹಾಗಂತ ನಿಜ ಸುಳ್ಳಾಗುವುದಿಲ್ಲ’ ಎಂದು ರಕ್ಷಿತ್​ ಮಾತು ಆರಂಭಿಸಿದ್ದಾರೆ.

‘ಕನ್ನಡದ ಒಂದು ನ್ಯೂಸ್​ ಚಾನೆಲ್​  ಕಳೆದ ಎರಡು ವರ್ಷಗಳಲ್ಲಿ ನನ್ನ ಬಗ್ಗೆ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ನಾನು ಈ ಎಲ್ಲಾ ತೇಜೋವಧೆಯ ಪ್ರಯತ್ನಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದೆ. ಕಾರಣ ಇದಕ್ಕೆಲ್ಲ ನನ್ನ ಕೆಲಸ ಉತ್ತರ ಕೊಡುತ್ತದೆ ಎಂಬ ನಂಬಿಕೆ ಇತ್ತು. ಈಗ ಮತ್ತೊಮ್ಮೆ ಈ ಸುದ್ದಿ ವಾಹಿನಿಯು, ಮಾಧ್ಯಮದ ನೈತಿಕ ಜವಾಬ್ದಾರಿಗಳನ್ನು ಮರೆತು, ವೈಯುಕ್ತಿಕ ದಾಳಿ ನಡೆಸಿ, ನನ್ನ ವ್ಯಕ್ತಿತ್ವಕ್ಕೆ ಮತ್ತೆ ಮಸಿ ಬಳಿಯುವ ಕೀಳು ಮಟ್ಟದ ಕೆಲಸಕ್ಕೆ ಇಳಿದಿದ್ದಾರೆ’ ಎಂದು ರಕ್ಷಿತ್​ ಬೇಸರ ಹೊರ ಹಾಕಿದ್ದಾರೆ.

‘ಈ ಬಾರಿ ಇದನ್ನು ನಿರ್ಲಕ್ಷಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಉತ್ತರ ಕೊಡುತ್ತೇನೆ, ಆದರೆ ಹತ್ತು ದಿನಗಳ ಬಳಿಕ. ಅಲ್ಲಿಯವರೆಗೆ ನಾನು ಕೆಲಸ ಮಾಡಿದ ಪ್ರತಿಯೊಂದು ಸಿನಿಮಾದ ಕುರಿತು, ಯಾವ ಯಾವ ಸತ್ಯ ಹೊರಗೆ ಬರುತ್ತದೋ, ಅವರವರ ಬಾಯಿಯಿಂದಲೇ ಹೊರಬರಲಿ. ನಾನು ಕಾದು ನೋಡುತ್ತೇನೆ. ನನ್ನ ಉತ್ತರ ಜುಲೈ 11ರಂದು ಕಾದು ನೋಡಿ. Truth is mighty and must prevail. ನನ್ನ ಎಲ್ಲಾ ಏಳು ಬೀಳುಗಳಲ್ಲಿ ನನ್ನ ಜೊತೆಗಿದ್ದ ನನ್ನ ಆತ್ಮೀಯರಿಗೂ, ಹಿತೈಷಿಗಳಿಗೂ, ಅಭಿಮಾನಿ ಬಳಗಕ್ಕೂ ಚಿರಋಣಿ’ ಎಂದು ರಕ್ಷಿತ್​ ಪತ್ರ ಅಂತ್ಯಗೊಳಿಸಿದ್ದಾರೆ.

ಇದನ್ನೂ ಓದಿ: ರಕ್ಷಿತ್​ ಶೆಟ್ಟಿ ‘777 ಚಾರ್ಲಿ’ಯಲ್ಲಿ ನಟಿಸಿದ ಶ್ವಾನ ಎಷ್ಟು ಬ್ರಿಲಿಯಂಟ್​ ಗೊತ್ತಾ? ಟ್ರೇನರ್​ ಬಿಚ್ಚಿಟ್ಟ ಅಚ್ಚರಿಯ ವಿಚಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada