ಪ್ರತಿ ದಿನ 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ದೂರದ ಊರುಗಳಿಂದ ಬರುವ ಜನರು ಸರದಿ ಸಾಲಿನಲ್ಲಿ ನಿಂತು ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ. ಸಮಾಧಿ ಎದುರಿನಲ್ಲಿ ನಿಂತು ಕಣ್ಣೀರು ಸುರಿಸುತ್ತಿದ್ದಾರೆ. ಅನೇಕರಿಗೆ ಅಪ್ಪು ಎಂದರೆ ದೇವರ ಸಮಾನ. ಹಾಗಾಗಿ ಅವರ ಸಮಾಧಿ ಎದುರು ಮದುವೆ ಆಗಲು ಕೆಲವರು ನಿರ್ಧರಿಸಿದ್ದಾರೆ. ಆದರೆ ಅಂಥ ಜೋಡಿಗಳಿಗೆ ರಾಜ್ಕುಮಾರ್ ಕುಟುಂಬದವರು ಒಂದು ಕಂಡೀಷನ್ ಹಾಕಿದ್ದಾರೆ. ಈ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
‘ಪೊಲೀಸರದ್ದು ಕೆಲವೊಂದು ನಿಯಮಗಳು ಇರುತ್ತವೆ. ಕೆಲವರು ಅಪ್ರಾಪ್ತರಾಗಿರುತ್ತಾರೆ. ನಂತರ ಅವರ ಕಡೆಯವರು ಬಂದು ಗಲಾಟೆ ಮಾಡುತ್ತಾರೆ. ಟಿವಿಯಲ್ಲಿ ಒಂದು ಮದುವೆ ನೋಡಿದ ಬಳಿಕ ಅನೇಕರು ಬರಲು ಆರಂಭಿಸುತ್ತಾರೆ. ಮದುವೆ ಆಗಲು ಬಯಸುವ ಜೋಡಿಗಳ ಜೊತೆಗೆ ಅವರ ತಂದೆ-ತಾಯಿ ಮತ್ತು ಕುಟುಂಬದವರು ಬಂದರೆ ಅನುಮತಿ ಕೊಡಬಹುದು’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
‘ಇಂದು (ನ.6) ಒಂದು ಜೋಡಿ ಬಂದು ಅನುಮತಿ ಕೇಳಿದರು. ಆದರೆ ನಾವು ಒಪ್ಪಿಗೆ ಕೊಡಲಿಲ್ಲ. ಅವರು ಒಂದೊಂದು ಸಲ ಒಂದೊಂದು ರೀತಿ ಹೇಳುತ್ತಿದ್ದಾರೆ. ತಂದೆ-ತಾಯಿ ಕರೆದುಕೊಂಡು ಬನ್ನಿ ಅಂತ ಹೇಳಿದ್ದೇವೆ’ ಎಂದು ರಾಘವೇಂದ್ರ ರಾಜ್ಕುಮಾರ್ ತಿಳಿಸಿದ್ದಾರೆ.
ಬಳ್ಳಾರಿಯಿಂದ ಬಂದಿರುವ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಪುನೀತ್ ರಾಜ್ಕುಮಾರ್ ಸಮಾಧಿ ಎದುರು ಮದುವೆ ಆಗಲು ನಿರ್ಧರಿಸಿದ್ದಾರೆ. ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಇಬ್ಬರಿಗೂ ಪುನೀತ್ ರಾಜ್ಕುಮಾರ್ ಎಂದರೆ ಅಪಾರ ಅಭಿಮಾನ. ಅದೇ ಕಾರಣಕ್ಕೆ ಅಪ್ಪು ಸಮಾಧಿ ಎದುರು ಮದುವೆ ಆಗಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ರಾಜ್ ಕುಟುಂಬದವರ ಅನುಮತಿ ಪಡೆಯಲು ಕಾದಿದ್ದಾರೆ.
‘ಜಾತಕ ತೋರಿಸಿ, ದೇವಸ್ಥಾನದಲ್ಲಿ ಮದುವೆ ಆಗುವುದು ಸಹಜ. ಹಾಗಂತ ದೇವಸ್ಥಾನದಲ್ಲಿ ಮದುವೆ ಆದವರು ಜೀವನ ಪರ್ಯಂತ ಚೆನ್ನಾಗಿ ಇರುತ್ತಾರೆ ಎಂದು ಹೇಳೋಕಾಗಲ್ಲ. ಪುನೀತ್ ಮಾಡಿದ ಸಮಾಜ ಸೇವೆ ನೋಡಿದರೆ ಅವರಿಗಿಂತ ದೊಡ್ಡ ದೇವರು ಯಾರೂ ಇಲ್ಲ ಎನಿಸುತ್ತದೆ’ ಎಂದು ಗಂಗಾ ಹೇಳಿದ್ದಾರೆ.
ಇದನ್ನೂ ಓದಿ:
ಪುನೀತ್ ಸಾವಿನ ಬಗ್ಗೆ ಮೂಡಿದೆ ಅನುಮಾನ; ವೈದ್ಯರ ವಿರುದ್ಧ ದೂರು ದಾಖಲು
Puneeth Rajkumar: ‘ಪುನೀತ್ ಅತಿಯಾಗಿ ಜಿಮ್ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ