ನಟ ‘ಕ್ರೇಜಿ ಸ್ಟಾರ್’ ರವಿಚಂದ್ರನ್ (Crazy Star Ravichandran) ಅವರ ಮನೆಯಲ್ಲಿ ಶೀಘ್ರವೇ ಶುಭಕಾರ್ಯ ನಡೆಯಲಿದೆ. ಈ ಬಗ್ಗೆ ಮಾಹಿತಿ ಕೇಳಿಬಂದಿದೆ. ರವಿಚಂದ್ರನ್ ಹಾಗೂ ಸುಮತಿ ದಂಪತಿಯ ಹಿರಿಯ ಪುತ್ರ ಮನೋರಂಜನ್ (Manoranjan Ravichandran) ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಆಗಸ್ಟ್ 21 ಹಾಗೂ 22ರಂದು ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹುಡುಗಿ ಜೊತೆ ಮನೋರಂಜನ್ ಮದುವೆ (Manoranjan Ravichandran Marriage) ಆಗಲಿದ್ದಾರೆ ಎನ್ನಲಾಗಿದೆ. ವಧುವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ. ‘ಕ್ರೇಜಿ ಸ್ಟಾರ್’ ಪುತ್ರನ ಮದುವೆ ಸುದ್ದಿ ತಿಳಿದು ಅಭಿಮಾನಿಗಳು ಖುಷಿ ಆಗಿದ್ದಾರೆ.
ರವಿಚಂದ್ರನ್ ಅವರ ಇಡೀ ಕುಟುಂಬವೇ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದೆ. ಅವರ ಇಬ್ಬರು ಗಂಡು ಮಕ್ಕಳು ಹೀರೋ ಆಗಿ ಬ್ಯುಸಿಯಾಗಿದ್ದಾರೆ. ಮನೋರಂಜನ್ ರವಿಚಂದ್ರನ್ ಅವರು 2017ರಲ್ಲಿ ‘ಸಾಹೇಬ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ‘ಬೃಹಸ್ಪತಿ’ ಚಿತ್ರದಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದರು. 2021ರಲ್ಲಿ ಅವರ ‘ಮುಗಿಲು ಪೇಟೆ’ ಸಿನಿಮಾ ತೆರೆಕಂಡಿತು. ಈ ವರ್ಷ ‘ಪ್ರಾರಂಭ’ ಚಿತ್ರ ಬಿಡುಗಡೆ ಆಯಿತು. ಸಿನಿಮಾ ಕೆಲಸಗಳ ನಡುವೆಯೇ ಅವರು ಜೀವನದ ಬಹುಮುಖ್ಯ ಘಟವನ್ನು ತಲುಪಲು ಸಜ್ಜಾಗಿದ್ದಾರೆ.
ರವಿಚಂದ್ರನ್ ಅವರಿಗೆ ಮೂವರು ಮಕ್ಕಳು. 2019ರಲ್ಲಿ ಅವರ ಮಗಳ ಮದುವೆ ಅದ್ದೂರಿಯಾಗಿ ನೆರವೇರಿತು. ಈಗ ಪುತ್ರ ಮನೋರಂಜನ್ ವಿವಾಹದ ಬಗ್ಗೆ ಸುದ್ದಿ ಕೇಳಿಬಂದಿದೆ. ಈ ಕುರಿತು ಕುಟುಂಬದಿಂದ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ನಿರೀಕ್ಷಿಸಲಾಗುತ್ತಿದೆ. ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಅವರು ಚಿತ್ರರಂಗಕ್ಕೆ ಈಗತಾನೇ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಸಿನಿಮಾ ‘ತ್ರಿವಿಕ್ರಮ’ ಇತ್ತೀಚೆಗೆ ತೆರೆಕಂಡಿತು.
ಬ್ಯಾಕ್ ಟು ಬ್ಯಾಕ್ ಸಿನಿಮಾ ಕೆಲಸಗಳಲ್ಲಿ ರವಿಚಂದ್ರನ್ ಬ್ಯುಸಿ ಆಗಿದ್ದಾರೆ. ಕಿರುತೆರೆ ಕಾರ್ಯಕ್ರಮಗಳ ಜಡ್ಜ್ ಆಗಿಯೂ ಅವರು ಸಕ್ರಿಯರಾಗಿದ್ದಾರೆ. ಅನೇಕ ಸಿನಿಮಾ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬಂದು ಹೊಸಬರ ಚಿತ್ರಗಳಿಗೆ ಅವರು ಬೆನ್ನು ತಟ್ಟುತ್ತಿದ್ದಾರೆ. ಇದೆಲ್ಲದರ ನಡುವೆ ಅವರ ಮಗನ ಮದುವೆಗೆ ತಯಾರಿ ಜೋರಾಗಿದೆ ಎನ್ನಲಾಗಿದೆ.
Published On - 10:14 am, Wed, 13 July 22