ಪುನೀತ್ ರಾಜ್ಕುಮಾರ್ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ಮಾಯ; ಕಾರಣ ಏನು?
ಪುನೀತ್ ರಾಜ್ಕುಮಾರ್ ಅವರ ಟ್ವಿಟರ್ ಖಾತೆಗೆ ಬ್ಲೂಟಿಕ್ ಸಿಕ್ಕಿತ್ತು. ಈಗ ಅವರು ನಿಧನ ಹೊಂದಿ ಅನೇಕ ತಿಂಗಳಾಗಿದೆ. ಅವರ ಟ್ವಿಟರ್ ಆ್ಯಕ್ಟೀವ್ ಇಲ್ಲದ ಕಾರಣ ಬ್ಲೂಟಿಕ್ ತೆಗೆಯಲಾಗಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರು ನಿಧನಹೊಂದಿ ವರ್ಷ ಕಳೆಯುತ್ತಾ ಬಂದಿದೆ. ಮುಂಬರುವ ಅಕ್ಟೋಬರ್ 29ಕ್ಕೆ ಅವರು ನಿಧನ ಹೊಂದಿ ಒಂದು ವರ್ಷ ತುಂಬಲಿದೆ. ಅವರು ಇಲ್ಲ ಎಂಬ ನೋವು ಬಹುವಾಗಿ ಕಾಡುತ್ತಿದೆ. ರಾಜ್ ಕುಟುಂಬಕ್ಕಂತೂ ಈ ಸತ್ಯವನ್ನು ಒಪ್ಪಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಈ ಮಧ್ಯೆ ಪುನೀತ್ ರಾಜ್ಕುಮಾರ್ ಅವರ ಟ್ವಿಟರ್ (Twitter) ಖಾತೆಯಿಂದ ಬ್ಲೂಟಿಕ್ (ವೆರಿಫೈಡ್ ಖಾತೆಗೆ ನೀಡುವ ಬ್ಯಾಡ್ಜ್) ತೆಗೆದು ಹಾಕಲಾಗಿದೆ. ಈ ಬಗ್ಗೆ ಫ್ಯಾನ್ಸ್ ಅಸಮಾಧಾನ ಹೊರಹಾಕುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಈ ಮೊದಲು ಟ್ವಿಟರ್ ಬಳಕೆ ಮಾಡುತ್ತಿರಲಿಲ್ಲ. ಸೋಶಿಯಲ್ ಮೀಡಿಯಾ ಜಗತ್ತು ವಿಸ್ತಾರಗೊಂಡ ಹಿನ್ನೆಲೆಯಲ್ಲಿ ಫ್ಯಾನ್ಸ್ ಜತೆ ಸಂಪರ್ಕದಲ್ಲಿರಲು ಅವರು ಟ್ವಿಟರ್ ಬಳಕೆ ಆರಂಭಿಸಿದ್ದರು. ಅವರಿಗೆ ಟ್ವಿಟರ್ನಿಂದ ಬ್ಲೂಟಿಕ್ ಕೂಡ ಸಿಕ್ಕಿತ್ತು. ಈಗ ಅವರು ನಿಧನ ಹೊಂದಿ ಅನೇಕ ತಿಂಗಳಾಗಿದೆ. ಅವರ ಟ್ವಿಟರ್ ಆ್ಯಕ್ಟೀವ್ ಇಲ್ಲದ ಕಾರಣ ಬ್ಲೂಟಿಕ್ ತೆಗೆಯಲಾಗಿದೆ.
ಟ್ವಿಟರ್ ತನ್ನದೇ ಆದ ನಿಯಮಗಳನ್ನು ಹೊಂದಿದೆ. ಪರಿಶೀಲಿಸಿದ ಟ್ವಿಟರ್ ಖಾತೆ ನಿಷ್ಕ್ರಿಯವಾಗಿದ್ದರೆ ಬ್ಲೂಟಿಕ್ ಬ್ಯಾಡ್ಜ್ ಅನ್ನು ತೆಗೆದುಹಾಕುತ್ತದೆ. ಸಾಮಾನ್ಯವಾಗಿ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಟ್ವಿಟರ್ನಲ್ಲಿ ಯಾವುದೇ ಚಟುವಟಿಕೆ ಇಲ್ಲದೆ ಇದ್ದರೆ ಟ್ವಿಟರ್ ಈ ರೀತಿ ಮಾಡುತ್ತದೆ.
ಇದನ್ನೂ ಓದಿ: ಪುನೀತ್ ಕನಸಿನ ಪ್ರಾಜೆಕ್ಟ್ ‘ಗಂಧದಗುಡಿ’ ಸಾಕ್ಷ್ಯಚಿತ್ರದ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್ಡೇಟ್
ಈ ಮೊದಲು ಎಂ.ಎಸ್. ಧೋನಿ ಅವರಿಗೂ ಟ್ವಿಟರ್ ಇದೇ ರೀತಿ ಮಾಡಿತ್ತು. ಅವರು ಟ್ವಿಟರ್ನಲ್ಲಿ ಆ್ಯಕ್ಟೀವ್ ಇಲ್ಲ ಎಂಬ ಕಾರಣಕ್ಕೆ ಬ್ಲೂಟಿಕ್ ತೆಗೆದು ಹಾಕಿತ್ತು. ನಂತರ ಧೋನಿ ಟೀಂ ಮರಳಿ ಮನವಿ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಬ್ಲೂಟಿಕ್ ಮರಳಿ ನೀಡಿತ್ತು.
ಸಿನಿಮಾ ವಿಚಾರಕ್ಕೆ ಬರುವುದಾದರೆ, ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದುವುದಕ್ಕೂ ಮೊದಲು ಕೆಲ ಚಿತ್ರಗಳಲ್ಲಿ ನಟಿಸುತ್ತಿದ್ದರು. ಈ ಪೈಕಿ ಕೆಲ ಸಿನಿಮಾಗಳ ಕೆಲಸಗಳು ಅರ್ಧಕ್ಕೆ ನಿಂತಿವೆ. ಇನ್ನೂ ಕೆಲ ಚಿತ್ರಗಳ ಕೆಲಸಗಳು ಪೂರ್ಣಗೊಂಡಿವೆ. ಆ ಪೈಕಿ ‘ಜೇಮ್ಸ್’ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಡಾರ್ಲಿಂಗ್ ಕೃಷ್ಣ ನಟನೆಯ ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಆಗಸ್ಟ್ನಲ್ಲಿ ತೆರೆಗೆ ಬರುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಪುನೀತ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.
Published On - 9:57 pm, Wed, 13 July 22