AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hoysala: ‘ಹೊಯ್ಸಳ’ ಹೆಸರಿನ ಬಗ್ಗೆ ಡಾಲಿ ಮಾತು, ಪ್ರಚಾರವೂ ಜೋರು

ಡಾಲಿ ಧನಂಜಯ್ ನಟನೆಯ ಹೊಯ್ಸಳ ಸಿನಿಮಾ ಈ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿದೆ. ಸಿನಿಮಾ ಪ್ರಚಾರವನ್ನು ಚಿತ್ರತಂಡ ಜೋರಾಗಿ ಮಾಡುತ್ತಿದೆ. ಈ ಸಿನಿಮಾದ ಹೆಸರು ಹಾಗೂ ಇತರೆ ವಿಶೇಷತೆಗಳ ಬಗ್ಗೆ ಡಾಲಿ ಮಾತನಾಡಿದ್ದಾರೆ.

Hoysala: 'ಹೊಯ್ಸಳ' ಹೆಸರಿನ ಬಗ್ಗೆ ಡಾಲಿ ಮಾತು, ಪ್ರಚಾರವೂ ಜೋರು
ಹೊಯ್ಸಳ ಪ್ರಚಾರದಲ್ಲಿ ಡಾಲಿ-ಅಮೃತಾ
ಮಂಜುನಾಥ ಸಿ.
|

Updated on:Mar 13, 2023 | 11:18 PM

Share

ಡಾಲಿ ಧನಂಜಯ್ (Daali Dhananjay) ನಟನೆಯ 25 ನೇ ಸಿನಿಮಾ ಹೊಯ್ಸಳ (Hoysala) ಹವಾ ಜೋರಾಗಿದೆ. ಸಿನಿಮಾದ ಟೀಸರ್ ಕೆಲವು ಹಾಡುಗಳು ಬಿಡುಗಡೆ ಆಗಿ ಸದ್ದು ಮಾಡಿವೆ. ಇದೀಗ ಚಿತ್ರತಂಡವು ಪ್ರಚಾರಕ್ಕಾಗಿ ರಾಜ್ಯ ಪ್ರವಾಸದಲ್ಲಿ ತೊಡಗಿದ್ದು ಪ್ರಸ್ತುತ ಉತ್ತರ ಕರ್ನಾಟಕದ ಊರುಗಳನ್ನು ಸುತ್ತುತ್ತಿದ್ದಾರೆ.

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಟ ಡಾಲಿ ಧನಂಜಯ್, ”ನಾವು ಚಿತ್ರದ ಶೀರ್ಷಿಕೆಯನ್ನು ರಾಮು ಫಿಲ್ಮಸ್ ಜೋತೆ ಮಾತನಾಡಿ ಪಡೆದುಕೊಂಡೆವು. ಆದರೇ ಇದೇ ಹೆಸರಿನಲ್ಲಿ ಇನ್ನೊಂದು ಸಿನಿಮಾ ಸೆನ್ಸಾರ್ ಆಗಿದೆಯಂತೆ. ಹಾಗಾಗಿ ನಾನು ಚಿತ್ರದಲ್ಲಿ ಗುರುದತ್ ಹೊಯ್ಸಳ ಹೆಸರಿನಲ್ಲಿ ಕಾಣಿಸಿಕೊಂಡಿದ್ದು, ಇದೇ ಹೆಸರಿನಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ದರಾಗಿದ್ದೇವೆ. ಈ ಸಿನಿಮಾಗಾಗಿ ನಾನು ಕಾಯತಾ ಇದ್ದು, ತುಂಬಾ ವಿಷಯಗಳ ಬಗ್ಗೆ ಚಿತ್ರ ಮಾತನಾಡುತ್ತದೆ’ ಎಂದಿದ್ದಾರೆ.

ಮುಂದುವರೆದು, ”ರತ್ನನ ಪ್ರಪಂಚ’ ಆದಮೇಲೆ ಕೆ.ಆರ್.ಜಿ ಸ್ಟುಡಿಯೋ ಜೊತೆ ಕನೆಕ್ಟ್ ಆಗಿ ಒಂದಿಷ್ಟು ಸಿನಿಮಾ ಮಾಡುವ ಪ್ಲ್ಯಾನ್ ಮಾಡಿಕೊಂಡೆವು. ಆಗ ಈ ಚಿತ್ರದ ಕಥೆ ಬಂತು. ಕಥೆ ಕೇಳಿದಾಗ ತುಂಬಾ ಇಷ್ಟವಾಯ್ತು. ನಂತರ ಗೊತ್ತಾಯ್ತು ಇದು ನನ್ನ ಅಭಿನಯದ 25ನೇ ಸಿನಿಮಾ ಅಂತ. ನನಗೂ ಸಮಾಜಕ್ಕೆ ಎನಾದರೂ ಸಂದೇಶ ಹೇಳುವ ಸಿನಿಮಾ ಮಾಡಬೇಕು ಎನಿಸಿತ್ತು. ಅದರಂತೆಯೇ ಫ್ಯಾಮಿಲಿ ಜೊತೆ ಕುಳಿತು ನೋಡುವ ಕಥೆ ನಂಗೆ ‘ಹೊಯ್ಸಳ’ದಲ್ಲಿ ಸಿಕ್ಕಿತು. ಇದರಲ್ಲಿ ಒಂದು ಸೀರಿಯಸ್ ಅಂಶವನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಒಳ್ಳೆ ಮೆಸೇಜ್ ಇರುವ ಕಮರ್ಷಿಯಲ್ ಸಿನಿಮಾ ಇದಾಗಿರಲಿದೆ” ಎಂದಿದ್ದಾರೆ.

ಸಿನಿಮಾದ ಮತ್ತೋರ್ವ ನಟ ನವೀನ ಶಂಕರ್ ಮಾತನಾಡಿ ‘ಇದೇ ಮೊದಲಬಾರಿ ನಾನು ಬಹಳ ಕಂಪರ್ಟ್​ ಆಗಿ ನಟನೆ ಮಾಡಿದ್ದೇನೆ. ಈ ಸಿನಿಮಾದ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇಲ್ಲಿ ನಾನು ಬಲಿ ಹೆಸರಿನ ಪಾತ್ರ ಮಾಡಿದ್ದು ರಗಡ್ ಲುಕ್‌ನಲ್ಲಿ ವಿಲನ್ ಅದಾಗಿರಲಿದೆ. ಧನಂಜಯ್ ‘ಹೆಡ್ಡಬುಷ್’ ಸಿನಿಮಾಗೆ ಕರೆದಿದ್ದರು ಆದರೆ ನಟಿಸಲು ಆಗಿರಲಿಲ್ಲ. ಈಗ ಗೆಳೆಯನ ಜೊತೆ ನಟನೆ ಮಾಡಿದ್ದು ಖುಷಿ ಇದೆ. ನಿರ್ಮಾಪಕರು ಕರೆದು ಅವಕಾಶ ಕೊಟ್ಟರು. ಪಾತ್ರ ಅದ್ಭುತವಾಗಿ ಬಂದಿದ್ದು, ಒಳ್ಳೆ ಜರ್ನಿ ನೀಡುವ ಸಿನಿಮಾ ಇದು ನಂಗೆ. ಅಪ್ಪಟ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಎಲ್ಲಾ ಪಾತ್ರಗಳಿಗೂ ಗಟ್ಟಿತನ ಇದೆ’ ಎಂದರು.

ಚಿತ್ರದ ನಾಯಕಿ ಅಮೃತ ಅಯ್ಯಂಗಾರ್ ಮಾತನಾಡಿ, ‘ಧನಂಜಯ ಜೊತೆ ನಂಗೆ ಇದು ಮೂರನೇ ಸಿನಿಮಾ. ಇದರಲ್ಲಿ ನಾನು ಗಂಗಾ ಹೆಸರಿನ ಪೊಲೀಸ್ ಆಫೀಸರ್ ಹೆಂಡತಿ ಪಾತ್ರ ಮಾಡಿದ್ದೇನೆ. ಜೊತೆಗೆ ನಾನು ಭರತನಾಟ್ಯ ಟೀಚರ್ ಆಗಿರುತ್ತೇನೆ. ಈ ಪಾತ್ರ ಮಾಡುವುದು ನಂಗೆ ಚಾಲೆಂಜಿಂಗ್ ಆಗಿತ್ತು. ಈ ಚಿತ್ರ ಒಳ್ಳೆ ಪೊಲೀಸ್ ಸ್ಟೋರಿ ಫೀಲ್ ಕೊಡುತ್ತದೆ’ ಎಂದು ಹೇಳಿದರು. ನಟ ಅವಿನಾಶ್ ಮಾತನಾಡಿ ‘ಇದರಲ್ಲಿ ನಾನು ವಿಲನ್ ಪಾತ್ರ ಮಾಡಿದ್ದು, ಅದ್ಭುತವಾಗಿ ಬಂದಿದೆ. ನಿರ್ದೇಶಕರು ನಂಗೆ ಕಥೆ ಹೇಳುವಾಗ ನಾನಾ ಪಾಟೇಕರ್ ತರಾ ಪಾತ್ರ ಇರುತ್ತದೆ ಎಂದು ಹೇಳಿದ್ದರು. ಈ ಪೊಲೀಸ್ ಸ್ಟೋರಿ ಸಿನಿಮಾ ಅದ್ಭುತವಾಗಿ ಬಂದಿದ್ದು, ನಾನಿಲ್ಲಿ ದಾದಾ ಪಾತ್ರ ಮಾಡಿದ್ದೇನೆ’ ಎನ್ನುವರು.

ಇದೇ ಸಂದರ್ಭದಲ್ಲಿ ನಿರ್ಮಾಪಕ ಯೋಗಿ ಜಿ. ರಾಜ್ ಮಾತನಾಡಿ ‘ಧನು ಜೊತೆ ಸಿನಿಮಾ ಮಾಡಲು ಸಿದ್ದರಾದಾಗ ನಿರ್ದೇಶಕರು ಕಥೆ ಹೇಳಿದ್ರು. ಕಥೆ ತುಂಬಾ ಚನ್ನಾಗಿದೆ ಅನಿಸಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರ ಇದೇ ಮಾರ್ಚ್ 30 ರಂದು ವಿಶ್ವಾದ್ಯಂತ ಕನ್ನಡ ಭಾಷೆಯಲ್ಲಿಯೇ ರಿಲೀಸ್ ಆಗಲಿದೆ. ಇದರಲ್ಲಿ ನಾಯಕನ ಹೆಸರು ಗುರುದೇವ ಹೊಯ್ಸಳ ಅಂತ ಇರುತ್ತದೆ. ಕಥೆ ಬೆಳಗಾವಿ ಭಾಗದಲ್ಲಿ ನಡೆಯುತ್ತದೆ’ ಎಂದರು. ನಿರ್ದೇಶಕ ವಿಜಯ್ ಎನ್ ‘ಈ ಚಿತ್ರವನ್ನು ಪೊಲೀಸ್ ಡಿಪಾರ್ಟ್ಮೆಂಟ್‌ಗೆ ಅರ್ಪಣೆ ಮಾಡಲಾಗುತ್ತಿದೆ’ ಎಂದಷ್ಟೇ ಹೇಳಿದರು.

ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಯೋಗಿ. ಜಿ. ರಾಜ್ ಹಾಗೂ ಕಾರ್ತಿಕ್ ಗೌಡ ಅವರು ನಿರ್ಮಿಸಿರುವ ‘ಹೊಯ್ಸಳ’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಮಾರ್ಚ್ 30ರಂದು ವಿಶ್ವದಾದ್ಯಂತ ಕನ್ನಡ ಭಾಷೆಯಲ್ಲಿಯೇ ಬಿಡುಗಡೆಯಾಗಲಿದೆ. ಈಗಾಗಲೇ ಟೀಸರ್, ಹಾಡುಗಳಿಂದ ಪ್ರೇಕ್ಷಕರ ಹೃದಯ ಗೆದ್ದಿರುವ ‘ಹೊಯ್ಸಳ’ ತಂಡದಿಂದ ಸದ್ಯದಲ್ಲಿಯೇ ಟ್ರೇಲರ್ ಕೂಡ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:17 pm, Mon, 13 March 23