
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾದಿಂದ ಸಖತ್ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ತುಳುನಾಡಿನ ದೈವಗಳ ಬಗ್ಗೆ ತೋರಿಸಲಾಗಿದೆ. ಸಿನಿಮಾ ಯಶಸ್ವಿ ಆದ ಬಳಿಕ ರಿಷಬ್ ಶೆಟ್ಟಿ (Rishab Shetty), ನಿರ್ಮಾಪಕ ವಿಜಯ್ ಕಿರಗಂದೂರು ಮುಂತಾದವರು ಹರಕೆ ತೀರಿಸಿದ್ದಾರೆ. ಆ ಸಂದರ್ಭದಲ್ಲಿ ದೈವ ನರ್ತಕ ನಡೆದುಕೊಂಡ ರೀತಿಯ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ಶುರುವಾಗಿದೆ. ಈ ಕುರಿತು ದೈವಾರಾಧಕ ತಮ್ಮಣ್ಣ ಶೆಟ್ಟಿ (Thammanna Shetty) ಅವರು ಟಿವಿ9 ಜೊತೆ ಮಾತನಾಡಿದ್ದಾರೆ.
‘ಕಾಂತಾರದಿಂದ ಈಗ ದೈವಗಳು ಬೀದಿಗೆ ಬಂದಿವೆ. ಕಾಂತಾರದ ಹೆಸರಿನಲ್ಲಿ ಆಗಿರುವ ಹರಕೆಯಿಂದ ಸಂಪೂರ್ಣ ದೈವಾರಾಧನೆ ಮುಗಿಯಿತು ಅಂತ ತಿಳಿದುಕೊಳ್ಳುವ ಮಟ್ಟಕ್ಕೆ ಬಂದಿದೆ. ಯಾಕೆಂದರೆ, ಅಲ್ಲಿ ಮೊನ್ನೆ ನಡೆದ ಹರಕೆಯ ಕೋಲ ನಿಯಮ ಪ್ರಕಾರ ಆಗಿಲ್ಲ. ಹರಕೆಗೂ ಒಂದು ವ್ಯವಸ್ಥೆಗಳನ್ನು ಅಂದಿನ ಕಾಲದಲ್ಲೇ ಮಾಡಿದ್ದಾರೆ. ಹರಕೆಯ ನೇಮ ಎಂಬುದು ಇಲ್ಲ’ ಎಂದು ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.
‘ಧರ್ಮ ನೇಮ ಇದೆ, ಸಂಕ್ರಮಣ ಕೊಡುವಂತಹ ನಿಯಮ ಇದೆ. ನವರಾತ್ರಿ ಪೂಜೆ ಅಂತ ಇದೆ. ಅದೆಲ್ಲವೂ ಹರಕೆಯ ಭಾಗಗಳು. ಆದರೆ ಹರಕೆಯ ನೇಮ ಎಂಬುದು ಇಲ್ಲ. ಧರ್ಮ ನೇಮ ಅಂತ ಒಬ್ಬ ಗುತ್ತಿನವನು ಆಯ್ಕೆ ಆಗಬೇಕಿದ್ದರೆ ಅವನು ಧರ್ಮ ಕೊಟ್ಟು ಮಾಡುವಂತಹ ನಿಯಮ ಇದೆ. ಒಂದು ವೇಳೆ ಅವರು ಮೊನ್ನೆ ಧರ್ಮ ನೇಮವೇ ಮಾಡಿದಿದ್ದರೆ ಆ ಸಮಯ ಕೂಡ ಧರ್ಮ ನೇಮದ್ದಲ್ಲ. ಅವರು ಮಾಡಿದ್ದು ದೈವಾರಾಧನೆ ನಿಯಮಕ್ಕೆ ವಿರುದ್ಧ’ ಎಂದಿದ್ದಾರೆ ತಮ್ಮಣ್ಣ ಶೆಟ್ಟಿ.
‘ಮಂಗಳೂರು ಪರಿಸರದ ಈ ಭಾಗದಲ್ಲಿ ಎಲ್ಲಿಯಾದರೂ ಉದ್ದೇಶಿತವಾದಂತಹ ಹರಕೆ ಸಂಬಂಧಿತ ದೈವ ಕಾರ್ಯಗಳು ಆಗಬೇಕಿದ್ದರೆ ಕದ್ರಿ ಮಂಜುನಾಥ ದೇವರ ಕೊಡಿ ಏರಿ, ಸಂಬಂಧಿತ ಗ್ರಾಮ ದೈವಗಳೆಲ್ಲವೂ ಹಾಲು ಸ್ವೀಕರಿಸಿ, ಆ ದೈವದಲ್ಲಿ ನೀವು ಒಪ್ಪಿಗೆ ಪಡೆದು ಅದರ ನಂತರ ನೀವು ನಿಮ್ಮ ಮನೆಯಲ್ಲಿ ಅಥವಾ ಬೇರೆ ಕಡೆಗಳಲ್ಲಿ ಮಾಡುವುದು ನಿಯಮ. ಇಲ್ಲಿ ರಿಷಬ್ ಶೆಟ್ಟಿ ಅವರಿಗೆ ಡೇಟ್ ಇದೆ ಎಂಬ ಕಾರಣಕ್ಕೆ ಮಂಜುನಾಥನನ್ನು ಬದಿಗೆ ಇಟ್ಟು ನೇಮ ಮಾಡಿದವರು ಇವರು’ ಎಂದು ತಮ್ಮಣ್ಣ ಶೆಟ್ಟಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ; ರಿಷಬ್ಗೆ ಅಭಯ ನೀಡಿದ ದೈವ
‘ಅವರು ಮಾಡಿದ ನೇಮದಲ್ಲಿ ದೈವನರ್ತಕ ಹಾಕಿದ ಬಟ್ಟೆ ಮತ್ತು ಹಾವಭಾವ ಎಲ್ಲವೂ ದೈವಾರಾಧನೆಗೆ ವಿರುದ್ಧ. ದೈವಾರಾಧನೆಯಲ್ಲಿ ಬಿಳಿಯ ಬಟ್ಟೆ ಮಾತ್ರ ಹಾಕುವಂಥದ್ದು. ಡ್ಯಾನ್ಸರ್ಗಳು ಹಾಕುವಂತಹ ಬಟ್ಟೆಗಳನ್ನು ಹಾಕಬಾರದು’ ಎಂದು ತಮ್ಮಣ್ಣ ಶೆಟ್ಟಿ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರು ದೈವದ ಕಾರಣಕ್ಕಾಗಿ ಮತ್ತೆ ವಿವಾದ ಮಾಡಿಕೊಂಡಿದ್ದಾರೆ. ಇದಕ್ಕೆ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:15 pm, Tue, 9 December 25