25 ದಿನಗಳ ಸಂಭ್ರಮದಲ್ಲಿ ಉತ್ತರ ಕರ್ನಾಟಕದ ‘ಉಡಾಳ’ ಸಿನಿಮಾ
ಪೃಥ್ವಿ ಶಾಮನೂರು, ಹೃತಿಕಾ ಶ್ರೀನಿವಾಸ್ ನಟನೆಯ ‘ಉಡಾಳ’ ಸಿನಿಮಾ ನವೆಂಬರ್ 14ರಂದು ಬಿಡುಗಡೆ ಆಗಿತ್ತು. ಬಹುತೇಕ ಉತ್ತರ ಕರ್ನಾಟಕದ ಕಲಾವಿದರು ಹಾಗೂ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿರುವುದು ವಿಶೇಷ. ರವಿ ಶಾಮನೂರು ಮತ್ತು ಯೋಗರಾಜ್ ಭಟ್ ನಿರ್ಮಾಣದ ಈ ಚಿತ್ರ 25 ದಿನಗಳನ್ನು ಪೂರೈಸಿದ್ದು, ತಂಡಕ್ಕೆ ಖುಷಿಯಾಗಿದೆ.

ಉತ್ತರ ಕರ್ನಾಟಕದ ಭಾರಿ ದೊಡ್ಡ ಪಿಚ್ಚರ್ ಎಂದ ಟ್ಯಾಗ್ ಲೈನ್ ಮೂಲಕ ಹೊರಬಂದ ಅಪ್ಪಟ ಉತ್ತರ ಕರ್ನಾಟಕದ ಶೈಲಿಯ ‘ಉಡಾಳ’ ಸಿನಿಮಾ (Udaala Kannada Movie) ಈಗ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ. ಈ ಮೊದಲು ‘ಪದವಿ ಪೂರ್ವ’ ಸಿನಿಮಾವನ್ನು ನಿರ್ಮಿಸಿ ಗೆಲುವ ಕಂಡಿದ್ದ ದಾವಣಗೆರೆ ಮೂಲದ ರವಿ ಶಾಮನೂರು ಹಾಗೂ ಯೋಗರಾಜ್ ಭಟ್ (Yogaraj Bhat) ಅವರು ಈಗ ‘ಉಡಾಳ’ ಸಿನಿಮಾವನ್ನು ನಿರ್ಮಿಸಿ ಮತ್ತೊಮ್ಮೆ ಯಶಸ್ವಿ ಕಂಡಿದ್ದಾರೆ. 25 ದಿನಗಳನ್ನು ಪೂರೈಸಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ.
‘ಉಡಾಳ’ ಸಿನಿಮಾದಲ್ಲಿ ನಾಯಕನಾಗಿ ಪೃಥ್ವಿ ಶಾಮನೂರು ಅವರು ಅಭಿನಯಿಸಿದ್ದಾರೆ. ತಮ್ಮ ನಟನೆ, ನೃತ್ಯ, ಆ್ಯಕ್ಷನ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಅವರು ಚಿತ್ರರಂಗದ ಭರವಸೆಯ ನಟನಾಗಿ ಹೊರಹೊಮ್ಮಿದ್ದಾರೆ. ‘ಯಡಾಳ’ ಸಿನಿಮಾದ ಯಶಸ್ಸಿನಿಂದಾಗಿ ಅವರಿಗೆ ಹೊಸ ಅವಕಾಶಗಳು ಸಿಗುತ್ತಿವೆ. ಮುಂದಿನ ಸಿನಿಮಾಗಳ ಕಥೆಗಳ ಆಯ್ಕೆಯಲ್ಲಿ ಪೃಥ್ವಿ ಶಾಮನೂರು ಅವರು ತೊಡಗಿಕೊಂಡಿದ್ದಾರೆ.
ಈ ಸಿನಿಮಾಗೆ ಅಮೋಲ್ ಪಾಟೀಲ್ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಅವರು ಯಶಸ್ಸು ಕಂಡಿದ್ದಾರೆ. ಅವರ ಕೆಲಸಕ್ಕೆ ಚಿತ್ರರಂಗದಲ್ಲಿ ಉತ್ತಮ ಪ್ರಶಂಸೆ ಸಿಕ್ಕಿದೆ. ಪ್ರೇಕ್ಷಕರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ಅವರು ಭರವಸೆಯ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ.
‘ಉಡಾಳ’ ಸಿನಿಮಾಗೆ ಚೇತನ್ ಸೊಸ್ಕ ಅವರು ಸಂಗೀತ ನೀಡಿದ್ದಾರೆ. ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಮಧು ತುಂಬಕೆರೆ ಅವರು ಸಂಕಲನ ಮಾಡಿದ್ದಾರೆ. ಶಿವಕುಮಾರ್ ನೂರಂಬಡ ಅವರ ಛಾಯಾಗ್ರಹಣ, ಭಜರಂಗಿ ಮೋಹನ್ ಮತ್ತು ರಘು ಅವರ ನೃತ್ಯ ಸಂಯೋಜನೆ ಈ ಸಿನಿಮಾಗಿದೆ. ವಿನೋದ್ ಮತ್ತು ಅರ್ಜುನ್ ಅವರು ಸಾಹನ ನಿರ್ದೇಶನ ಮಾಡಿದ್ದಾರೆ. ಮಾಳು ನಿಪ್ಪನಾಳ, ಬಾಳು ಬೆಳಗುಂದಿ, ಜೆಸ್ಕರಣ್ ಸಿಂಗ್, ಚೇತನ್ ಸೊಸ್ಕ, ಸೃಷ್ಟಿ ಶಾಮನೂರು ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಯೋಗರಾಜ್ ಭಟ್ ಜತೆ ಭುವನ್ ಪೊನ್ನಣ್ಣ ಹೊಸ ಸಿನಿಮಾ ‘ಹಲೋ 123’
ಬಹುಪಾಲು ಉತ್ತರ ಕರ್ನಾಟಕದ ಕಲಾವಿದರು ಹಾಗೂ ತಂತ್ರಜ್ಞರು ‘ಉಡಾಳ’ ಸಿನಿಮಾಗೆ ಕೆಲಸ ಮಾಡಿದ್ದು ವಿಶೇಷ. ಅಮೋಲ್ ಪಾಟೀಲ್ ಹಾಗೂ ವೀರೇಶ್ ಪಿಎಂ ಅವರು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸಿನಿಮಾಗೆ ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ಅಭಿನಯಿಸಿದ್ದಾರೆ. ಬಿರಾದರ್, ಬಲರಾಜ್ ವಾಡಿ, ಹರೀಶ್ ಹಿರಿಯೂರ್, ವಾದಿರಾಜ್, ಸುಮಿತ್, ದಾನಪ್ಪ , ಪ್ರವೀಣ್ ಕುಮಾರ್ ಗಸ್ತಿ, ದಯಾನಂದ್ ಬೀಳಗಿ, ಮಾಳು ನಿಪ್ಪನಾಳ, ಗೋವಿಂದೇಗೌಡ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




