AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೇರ್​ಡೆವಿಲ್​ ಮುಸ್ತಾಫಾ ಮಸ್ತ್​ ಟೀಸರ್​; ರೆಟ್ರೋ ಕಥೆಗೆ ಆಧುನಿಕತೆಯ ಟಚ್​ ಕೊಟ್ಟ ಹೊಸ ಟೀಮ್​

ತೇಜಸ್ವಿ ಅವರ 65 ಅಭಿಮಾನಿಗಳು ಸೇರಿಕೊಂಡು ‘ಡೇರ್​ಡೆವಿಲ್​ ಮುಸ್ತಾಫಾ’ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ. ಶಶಾಂಕ್​ ಸೋಗಾಲ್​ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಡೇರ್​ಡೆವಿಲ್​ ಮುಸ್ತಾಫಾ ಮಸ್ತ್​ ಟೀಸರ್​; ರೆಟ್ರೋ ಕಥೆಗೆ ಆಧುನಿಕತೆಯ ಟಚ್​ ಕೊಟ್ಟ ಹೊಸ ಟೀಮ್​
ಡೇರ್​ಡೆವಿಲ್​ ಮುಸ್ತಾಫಾ ಪೋಸ್ಟರ್​
TV9 Web
| Edited By: |

Updated on: Sep 10, 2021 | 3:33 PM

Share

ಯುವಜನತೆ ಹೆಚ್ಚು ಇಷ್ಟಪಡುವ ಕನ್ನಡದ ಲೇಖಕರಲ್ಲಿ ಅಗ್ರಸ್ಥಾನ ಇರುವುದು ಪೂರ್ಣಚಂದ್ರ ತೇಜಸ್ವಿ ಅವರಿಗೆ ಎನ್ನಬಹುದು. ಹೊಸ ತಲೆಮಾರಿನ ಓದುಗರಿಗೆ ತೇಜಸ್ವಿಯವರ ಕಥೆಗಳು ತುಂಬಾ ಇಷ್ಟ ಆಗುತ್ತವೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ತೇಜಸ್ವಿಯವರ ಹುಟ್ಟುಹಬ್ಬದ (ಸೆ.9) ಪ್ರಯುಕ್ತ ‘ಡೇರ್​ಡೆವಿಲ್​ ಮುಸ್ತಾಫಾ’ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ತೇಜಸ್ವಿ ಬರೆದ ಅದೇ ಹೆಸರಿನ ಸಣ್ಣ ಕಥೆ ಆಧರಿಸಿ ಈ ಚಿತ್ರ ಸಿದ್ಧವಾಗುತ್ತಿದೆ. ವಿನೂತನ ಶೈಲಿಯಲ್ಲಿ ಮೂಡಿಬಂದಿರುವ ಇದರ ಟೀಸರ್​ಗೆ ಸಿನಿಪ್ರಿಯರಿಂದ ಮೆಚ್ಚುಗೆ ಸಿಗುತ್ತಿದೆ. ರೆಟ್ರೋ ಕಾಲದ ಕಥೆಗೆ ಆಧುನಿಕತೆಯ ಟಚ್​ ನೀಡುವ ರೀತಿಯಲ್ಲಿ ಈ ಟೀಸರ್​ ತಯಾರಾಗಿದೆ.

ಶಶಾಂಕ್​ ಸೋಗಾಲ್​ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರಗಳನ್ನು ಪರಿಚಯಿಸುವುದು ಅಥವಾ ಕಥೆಯ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಡುವುದು ಟೀಸರ್​ನ ಉದ್ದೇಶ ಆಗಿರುತ್ತದೆ. ಅದಕ್ಕೆ ‘ಡೇರ್​ಡೆವಿಲ್​ ಮುಸ್ತಾಫಾ’ ತಂಡ ಹೊಸ ಉಪಾಯ ಮಾಡಿದೆ. ಈ ಕಥೆಯಲ್ಲಿನ ಪಾತ್ರಗಳು ಇನ್​ಸ್ಟಾಗ್ರಾಮ್​ ಖಾತೆ ಹೊಂದಿದ್ದರೆ ಹೇಗಿರುತ್ತದೆ ಎಂಬ ಕಾನ್ಸೆಪ್ಟ್​ನೊಂದಿಗೆ ಎಲ್ಲ ಪಾತ್ರಗಳ ಪರಿಚಯ ಮಾಡಿಕೊಡಲಾಗಿದೆ. ಸಹಾಯಕ ನಿರ್ದೇಶಕ ಅಭಿಮನ್ಯ ನೀಡಿದ ಐಡಿಯಾ ಇಟ್ಟುಕೊಂಡು, ಅದನ್ನು ಕಾರ್ಯರೂಪಕ್ಕೆ ತರಲು ಇಡೀ ತಂಡ ಶ್ರಮಿಸಿದೆ.

ಕಾನ್ಸೆಪ್ಟ್​ಗೆ ಸೂಕ್ತವಾಗುವಂತಹ ಸಾಹಿತ್ಯವನ್ನು ನಿರ್ದೇಶಕರೇ ರಚಿಸಿದ್ದು, ಅದಕ್ಕೆ ಅಚ್ಚುಕಟ್ಟಾಗಿ ನವನೀತ್​ ಶಾಮ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ಗ್ರಾಫಿಕ್ಸ್​ ಮತ್ತು ಆ್ಯನಿಮೇಷನ್​ ಜವಾಬ್ದಾರಿಯನ್ನು ವಿಶಾಲ್​ ನಿಭಾಯಿಸಿದ್ದಾರೆ. ಎಲ್ಲರ ಟೀಮ್​ ವರ್ಕ್​ ಫಲವಾಗಿ ‘ಡೇರ್​ಡೆವಿಲ್​’ ಮುಸ್ತಾಫಾ ಟೀಸರ್​ ಆಕರ್ಷಕವಾಗಿ ಮೂಡಿಬಂದಿದೆ. ಪುನೀತ್ ರಾಜ್​ಕುಮಾರ್​ ಅವರ ಪಿಆರ್​ಕೆ ಆಡಿಯೋ ಮೂಲಕ ಟೀಸರ್​ ಬಿಡುಗಡೆ ಆಗಿದ್ದು, ಜನಮನ ಗೆಲ್ಲುತ್ತಿದೆ.

ಈ ಸಿನಿಮಾದಲ್ಲಿ ಆದಿತ್ಯ ಆಶ್ರೀ, ಅಭಯ್​, ಸುಪ್ರೀತ್​ ಭಾರದ್ವಜ್​, ಆಶಿತ್​, ಶ್ರೀವತ್ಸ, ಪ್ರೇರಣಾ, ಎಂಎಸ್​ ಉಮೇಶ್​, ಮಂಡ್ಯ ರಮೇಶ್​, ಮೈಸೂರು ಆನಂದ್​, ಸುಂದರ್​ ವೀಣಾ, ಹರಿಣಿ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ವಿಜಯ್​ ಶೋಭರಾಜ್​, ಚೈತ್ರಾ ಶೆಟ್ಟಿ, ಕಾರ್ತಿಕ್​ ಪತ್ತಾರ್​, ಕೃಷ್ಣೇಗೌಡ, ಮಹಾದೇವ ನಟಿಸಿದ್ದಾರೆ. ಚಿತ್ರಕ್ಕೆ ಬಹುತೇಕ ಶೂಟಿಂಗ್​ ಮುಗಿದಿದೆ. ಆದಷ್ಟು ಬೇಗ ರಿಲೀಸ್​ ಮಾಡುವ ಗುರಿ ಇಟ್ಟುಕೊಂಡು ‘ಡೇರ್​ಡೆವಿಲ್​ ಮುಸ್ತಾಫಾ’ ತಂಡ ಕೆಲಸ ಮಾಡುತ್ತಿದೆ. ತೇಜಸ್ವಿ ಅವರ 65 ಅಭಿಮಾನಿಗಳು ಸೇರಿಕೊಂಡು ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. ಕನ್ನಡದಲ್ಲಿ ಇದು ಮೊದಲ ಪ್ರಯತ್ನ.

ಇದನ್ನೂ ಓದಿ:

ಕೈಕೋಳ ತೊಟ್ಟು ಬಂದ ಶಿವಾಜಿ ಸುರತ್ಕಲ್​; ಸೂಪರ್​ ಹಿಟ್​ ಚಿತ್ರದ ಸೀಕ್ವೆಲ್​ಗೆ ಸಿದ್ಧತೆ

Vikrant Rona: ವಿಕ್ರಾಂತ್​ ರೋಣ ಗೆಟಪ್​ನಲ್ಲಿ ಕಂಗೊಳಿಸುತ್ತಿರುವ ಗಣೇಶ; ಹೇಗಿದೆ ನೋಡಿ ಸುದೀಪ್​ ಸಿನಿಮಾ ಕ್ರೇಜ್​