ಈ ಕನ್ನಡ ಸಿನಿಮಾ ನೋಡಿದರೆ ಸಿಗುತ್ತೆ 100 ರುಪಾಯಿ, ಕಂಡೀಷನ್ಸ್ ಅಪ್ಲೈ
Daredevil Musthafa: ಡೇರ್ಡೆವಿಲ್ ಮುಸ್ತಾಫಾ ಕನ್ನಡ ಸಿನಿಮಾವನ್ನು ಮೊದಲ ವಾರವೇ ವೀಕ್ಷಿಸಿದವರಿಗೆ 100 ರುಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ! ಆದರೆ ಕೆಲವು ನಿಯಮಗಳು ಅನ್ವಯ.
ಸಿನಿಮಾ (Movie) ನೋಡಲು ಹಣ ಖರ್ಚಾಗುತ್ತದೆ. ಆದರೆ ಇಲ್ಲೊಂದು ಕನ್ನಡ ಸಿನಿಮಾ (Kannada Cinema) ನೋಡಿದರೆ 100 ರುಪಾಯಿ ಸಿಗಲಿದೆ! ಆದರೆ ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ಪೂರ್ಣಚಂದ್ರ ತೇಜಸ್ವಿ ಬರೆದಿರುವ ಡೇರ್ಡೆವಿಲ್ ಮುಸ್ತಾಫಾ (Daredevil Musthafa) ಕತೆಯನ್ನು ಸಮಾನ ಮನಸ್ಕ, ಪ್ರತಿಭಾವಂತ ಯುವತಂಡವೊಂದು ಅದೇ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಇತರೆ ಸಾಹಿತ್ಯ ಕೃತಿಗಳ ಸಿನಿಮಾದಂತೆ ಗಂಭೀರ ಸಿನಿಮಾದ ಬದಲಾಗಿ ಎಲ್ಲರಿಗೂ ಸಲ್ಲುವ ಹಾಸ್ಯಮಯ, ಸದಭಿರುಚಿಯ ಸಿನಿಮಾ ಮಾಡಿದ್ದಾರೆ. ಸಿನಿಮಾ ಮೇ 19 ರಂದು ಬಿಡುಗಡೆ ಆಗಲಿದ್ದು, ಮೊದಲ ವಾರ ಸಿನಿಮಾ ನೋಡಿದವರಿಗೆ 100 ರುಪಾಯಿ ಕ್ಯಾಷ್ಬ್ಯಾಕ್ ಸಿಗಲಿದೆ. ಈ 100 ರುಪಾಯಿ ಕ್ಯಾಶ್ಬ್ಯಾಕ್ ಪಡೆಯಲು ಏನು ಮಾಡಬೇಕು? ಚಿತ್ರತಂಡ ನೀಡಿರುವ ವಿವರ ಇಲ್ಲಿದೆ.
ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ನೋಡಲಿಚ್ಛಿಸುವವರು ಇರುವೆ (iruve.com) ಗೆ ತೆರಳಿ ಅಲ್ಲಿ 50 ರುಪಾಯಿ ನೀಡಿ ಡೇರ್ಡೆವಿಲ್ ಮುಸ್ತಾಫಾ ಸಿನಿಮಾದ ಬ್ಯಾಡ್ಜ್ ಒಂದನ್ನು ಖರೀದಿಸಬೇಕು. ಖರೀದಿ ಆದ ಕೂಡಲೇ ಒಂದು ಧನ್ಯವಾದದ ಮೆಸೇಜ್ ಜೊತೆಗೆ ಆನ್ಲೈನ್ ಡಿಜಿಟಲ್ ಬ್ಯಾಡ್ಜ್ ಹಾಗೂ ಒಂದು ಕೂಪನ್ ಕೋಡ್ ನೀವು ನೀಡಿರುವ ಇ-ಮೇಲ್ ವಿಳಾಸಕ್ಕೆ ಬರುತ್ತದೆ. ಅದಾದ ಬಳಿಕ ಬ್ಯಾಡ್ಜ್ ಖರೀದಿಸಿರುವವರು ತಮ್ಮ ಹತ್ತಿರದ ಯಾವುದೇ ಚಿತ್ರಮಂದಿರದಲ್ಲಾದರೂ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಮೊದಲ ವಾರವೇ ನೋಡಬೇಕು ಅಂದರೆ ಮೇ 19 ರಿಂದ ಮೇ 25 ರ ಒಳಗೆ ಸಿನಿಮಾ ನೋಡಬೇಕು.
ಸಿನಿಮಾ ನೋಡಿದ ಬಳಿಕ ಸಿನಿಮಾ ಟಿಕೆಟ್, ಕೂಪನ್ ಕೋಡ್ ಮತ್ತು ಯುಪಿಐ ಐಡಿಯನ್ನು ಚಿತ್ರತಂಡ ನೀಡಿರುವ ಮೊಬೈಲ್ ಸಂಖ್ಯೆಗೆ ವಾಟ್ಸ್ಆಪ್ ಮಾಡಿದರೆ ಚಿತ್ರತಂಡವು 100 ರುಪಾಯಿ ಹಣವನ್ನು ನೀವು ಕಳಿಸಿರುವ ಯುಪಿಐ ಐಡಿಗೆ ಕಳಿಸುತ್ತದೆ. ಅಂದಹಾಗೆ ಈ ಡಿಜಿಟಲ್ ಬ್ಯಾಡ್ಜ್ ಅಥವಾ ಕೂಪನ್ ಕೋಡ್ ಸಿನಿಮಾ ಟಿಕೆಟ್ ಅಲ್ಲ. ನೀವು ಚಿತ್ರಮಂದಿರದಲ್ಲಿ ಅಥವಾ ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಿಯೇ ಡೇರ್ಡೆವಿಲ್ ಮುಸ್ತಾಫಾ ಸಿನಿಮಾ ನೋಡಬೇಕು. ಅದೂ ಮೊದಲ ವಾರದಲ್ಲಿಯೇ.
ಇದನ್ನೂ ಓದಿ:ಪೂಚಂತೆಯ ‘ಡೇರ್ಡೆವಿಲ್ ಮುಸ್ತಾಫಾ’ ಸಿನಿಮಾ ಆದ ಕತೆ: ಈ ಸಿನಿಮಾಕ್ಕೆ ನೂರು ಜನ ನಿರ್ಮಾಪಕರು!
ಸಿನಿಮಾದ ನಿರ್ದೇಶಕ ಶಶಾಂಕ ಸೋಗಾಲ ಹೇಳಿರುವಂತೆ, ಈ ಡಿಜಿಟಲ್ ಬ್ಯಾಡ್ಜ್, ಪ್ರೇಕ್ಷಕರ ಚಿತ್ರತಂಡಕ್ಕೆ ನೀಡುವ ಭರವಸೆ. ಮೊದಲ ವಾರ ನಮ್ಮ ಸಿನಿಮಾವನ್ನು ಹೆಚ್ಚು ಜನ ನೋಡಿದರಷ್ಟೆ ಎರಡು ಹಾಗೂ ಮೂರನೇ ವಾರಗಳಿಗೆ ಚಿತ್ರಮಂದಿರಗಳನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯ. ಕಂಟೆಂಟ್ ಆಧರಿತ ಸಿನಿಮಾಕ್ಕೆ ಪ್ರೇಕ್ಷಕರ ಭರವಸೆ ಬಹಳ ಮುಖ್ಯ. ಒಟಿಟಿಯಲ್ಲಿ ಬರುತ್ತದೆ ಆಗ ಸಿನಿಮಾ ನೋಡಿಕೊಳ್ಳೋಣ ಎಂದುಕೊಳ್ಳದೆ, ಚಿತ್ರಮಂದಿರದಲ್ಲಿಯೇ ನಾವು ನಿಮ್ಮ ಸಿನಿಮಾ ನೋಡುತ್ತೇವೆ ಎಂದು ಪ್ರೇಕ್ಷಕ ಭರವಸೆ ನೀಡಲು ಈ ಬ್ಯಾಡ್ಜ್ ಖರೀದಿ ಮಾಡಬೇಕು.
ನಾವು ಈ ಸಿನಿಮಾ ಮಾಡಿರುವುದೇ ದೊಡ್ಡ ಪರದೆಗಾಗಿ. ಅತ್ಯುತ್ತಮ ದೃಶ್ಯಗಳು, ಶಬ್ದ ವಿನ್ಯಾಸ, ಹಿನ್ನೆಲೆ ಸಂಗೀತಗಳಿಗಾಗಿ ಸಾಕಷ್ಟು ಶ್ರಮವಹಿಸಿದ್ದೇವೆ. ದೊಡ್ಡ ಪರದೆಯಲ್ಲಿ ಸಿನಿಮಾ ನೋಡಿದರೆ ಮಾತ್ರವೇ ಇವುಗಳ ಅನುಭವ ಸೂಕ್ತವಾಗಿ ಅನುಭೂತಿ ಪಡೆಯಲು ಸಾಧ್ಯ ಎಂದಿದ್ದಾರೆ ಶಶಾಂಕ ಸೋಗಾಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ