ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿರುವ ದರ್ಶನ್ ಈಗ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿ ಇರುವ ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಅವರಿಗೆ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದನ್ನು ವೈದ್ಯರು ನಿರ್ಧರಿಸಿದ್ದಾರೆ. ಆದರೆ ಕಾಯಿಲೆ ಮತ್ತು ಚಿಕಿತ್ಸೆ ಬಗ್ಗೆ ಯಾವುದೇ ಮಾಹಿತಿಯನ್ನು ಆಸ್ಪತ್ರೆಯ ಕಡೆಯಿಂದ ಬಹಿರಂಗಪಡಿಸಿಲ್ಲ. ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ.
ತೀವ್ರ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ನಡೆಯಲು ಕೂಡ ಕಷ್ಟಪಡುತ್ತಿದ್ದರು. ಅಲ್ಲಿನ ವೈದ್ಯರ ವರದಿ ಆಧಾರದ ಮೇಲೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತು. ಒಂದು ವಾರದೊಳಗೆ ದರ್ಶನ್ ಅವರ ಚಿಕಿತ್ಸೆಯ ಬಗ್ಗೆ ಮಾಹಿತಿಯನ್ನು ಕೋರ್ಟ್ಗೆ ನೀಡಬೇಕು ಎಂದು ಷರತ್ತು ವಿಧಿಸಲಾಗಿತ್ತು. ಇಂದು (ನವೆಂಬರ್ 6) ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗಿದೆ.
ದರ್ಶನ್ ಅವರ ಅನಾರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನೂ ಬಹಿರಂಗಪಡಿಸಬಾರದು ಎಂದು ಪತ್ನಿ ವಿಜಯಲಕ್ಷ್ಮಿ ಅವರು ಆಸ್ಪತ್ರೆಯವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ದರ್ಶನ್ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲು ಆಸ್ಪತ್ರೆ ಹಿಂದೇಟು ಹಾಕುತ್ತಿದೆ. ಸಾಧ್ಯವಾದಷ್ಟು ಸೀಕ್ರೆಟ್ ಕಾಪಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆಯೂ ಕುಟುಂಬದವರು ಆಲೋಚಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನಟ ದರ್ಶನ್ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ಚಿಕಿತ್ಸೆ ಪಡೆಯುವ ಸಲುವಾಗಿ 6 ವಾರಗಳ ಕಾಲ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಈಗಾಗಲೇ ಅವರಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಆದರೆ ಅಭಿಮಾನಿಗಳಿಗೆ ದರ್ಶನ್ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಮೂಲಗಳ ಪ್ರಕಾರ, ಸದ್ಯದಲ್ಲೇ ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಅದಕ್ಕೆ ಕುಟುಂಬದವರು ಒಪ್ಪಿಗೆ ನೀಡಿದ್ದಾರೆ. ಸರ್ಜರಿ ಬಳಿಕ ಅವರು ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗುವುದು ಬಾಕಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.