ಜಾಮೀನು ಸಿಕ್ಕರೂ ಹೊರಬರಲಾಗುತ್ತಿಲ್ಲ ಅನುಕುಮಾರ್, ಜಗದೀಶ್: ಸಿಗುತ್ತಾ ದರ್ಶನ್ ನೆರವು
Darshan case: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಏಳು ಮಂದಿ ಆರೋಪಿಗಳಿಗೆ ಕಳೆದ ಶುಕ್ರವಾರ ಜಾಮೀನು ದೊರೆತಿದೆ. ಅವರಲ್ಲಿ ಕೆಲವರು ಸ್ಥಿತಿವಂತರಾಗಿದ್ದು ಅವರಿಗೆ ಜಾಮೀನು ಬಾಂಡ್ ಮತ್ತು ಶೂರಿಟಿಯನ್ನು ಹೊಂದಿಸುವುದು ಸಮಸ್ಯೆ ಆಗಿಲ್ಲ. ಆದರೆ ಜಾಮೀನು ದೊರೆತಿರುವ ಅನುಕುಮಾರ್ ಮತ್ತು ಜಗದೀಶ್ ಅವರಿಗೆ ಶೂರಿಟಿ ಒದಗಿಸುವುದು ಕಷ್ಟವಾಗಿದ್ದು ಇನ್ನೂ ಜೈಲಿನಲ್ಲೇ ಇದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಅವರಿಗೆ ಜಾಮೀನು ದೊರೆತಿದೆ. ಅದೇ ದಿನ ಅನುಕುಮಾರ್, ಜಗದೀಶ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೋಷ್ ಅವರಿಗೂ ಜಾಮೀನು ದೊರೆಯಿತು. ಜಾಮೀನು ದೊರೆತವರಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಹೊರಬಂದಿದ್ದಾರೆ. ಸ್ಟೋನಿ ಬ್ರೂಕ್ ಮಾಲೀಕ ಪ್ರದೋಶ್, ದರ್ಶನ್ ಆಪ್ತರಾದ ನಾಗರಾಜು ಮತ್ತು ಲಕ್ಷ್ಮಣ್ ಅವರಿಗೆ ಜಾಮೀನಿಗೆ ನೀಡಬೇಕಾದ ಬಾಂಡ್ ಹಾಗೂ ಇತರೆ ಶೂರಿಟಿಗಳನ್ನು ಒದಗಿಸುವುದು ಸಮಸ್ಯೆ ಆಗಿಲ್ಲ. ಆದರೆ ಜಗದೀಶ್ ಮತ್ತು ಅನುಕುಮಾರ್ ಅವರಿಗೆ ಜಾಮೀನಿಗೆ ಶೂರಿಟಿ ಒದಗಿಸುವುದು ಸಮಸ್ಯೆ ಆಗಿದೆ.
ಜಗದೀಶ್ ಮತ್ತು ಅನುಕುಮಾರ್ ಇಬ್ಬರೂ ಚಿತ್ರದುರ್ಗದವರಾಗಿದ್ದು ಬಡ ಕುಟುಂಬದವರು. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಲು ಚಿತ್ರದುರ್ಗ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಜಗ್ಗು ಬಳಸಿಕೊಂಡಿದ್ದ. ಅನುಕುಮಾರ್ ಹಾಗೂ ಜಗದೀಶ್ ಇಬ್ಬರ ಕುಟುಂಬದವರು ಸ್ಥಿತಿವಂತರಲ್ಲ. ಈಗ ಈ ಇಬ್ಬರಿಗೂ ಜಾಮೀನು ದೊರೆತಿದೆ ಆದರೆ ಬಿಡುಗಡೆ ಗೊಳ್ಳಲು ನೀಡಬೇಕಾಗಿರುವ ಶೂರಿಟಿ, ಬಾಂಡ್ಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.
ಈ ಬಗ್ಗೆ ಮಾತನಾಡಿರುವ ಜಗದೀಶ್ ಅವರ ತಾಯಿ, ಸುಲೋಚನಮ್ಮ, ‘ಶ್ಯೂರಿಟಿ ಕೊಡಲು ಯಾರೂ ಇಲ್ಲದ ಕಾರಣ ಬಿಡುಗಡೆ ಆಗಿಲ್ಲ, ಸಂಬಂಧಿ ಮೂರ್ತಿ ಅವರೊಟ್ಟಿಗೆ ಜಮೀನಿನ ಪಹಣಿ ತೆಗೆದುಕೊಂಡು ಬೆಂಗಳೂರಿಗೆ ಹೋಗಿದ್ದೆವು ಒಬ್ಬರ ಶೂರಿಟಿ ಆಗಲ್ಲ, ಮೂರು ಜನರ ಶೂರಿಟಿ ಬೇಕು ಎಂದು ಹೇಳಿ ವಾಪಸ್ ಕಳಿಸಿದ್ದಾರೆ. ಕೊಲೆ ಕೇಸ್ ಆಗಿರುವ ಕಾರಣ ಶ್ಯೂರಿಟಿಗೆ ಯಾರೂ ಬರುತ್ತಿಲ್ಲ ಜೈಲಿನಿಂದ ಜಗದೀಶ್ ಬಿಡುಗಡೆಗೆ ದರ್ಶನ್ ವ್ಯವಸ್ಥೆ ಮಾಡಬೇಕು, ಬೆಂಗಳೂರಿಗೆ ಹೋಗಿ ಬರಲು ಸಹ ನಮ್ಮ ಬಳಿ ಹಣವಿಲ್ಲ ದುಡಿಯುವ ಮಗ ಜೈಲು ಸೇರಿದ ಬಳಿಕ ಕಷ್ಟ ಅನುಭವಿಸಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ:ಪವಿತ್ರಾ ಗೌಡ ಜಾಮೀನು ಆದೇಶದ ಮಹತ್ವ ವಿವರಿಸಿದ ವಕೀಲೆ ಶಿಲ್ಪಾ
ಇನ್ನು ಅನುಕುಮಾರ್ ಮನೆಯವರ ಸ್ಥಿತಿಯೂ ಇದೇ ಆಗಿದೆ. ಅನುಕುಮಾರ್ ಬಂಧನವಾದಾಗ ಆಘಾತದಿಂದ ಅವರ ತಂದೆ ನಿಧನ ಹೊಂದಿದ್ದರು. ಆ ಬಳಿಕ ಅವರ ಮನೆಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಅವರ ತಾಯಿ ಹೂ ಕಟ್ಟಿ ಮಾರುವ ಕೆಲಸ ಮಾಡುತ್ತಾರೆ. ಇದರ ಜೊತೆಗೆ ಕೂಲಿ ಕೆಲಸಕ್ಕೂ ಹೋಗುತ್ತಾರೆ ಆದರೆ ಈಗ ಒಂದು ಲಕ್ಷದ ಬಾಂಡ್ ಮತ್ತು ಶೂರಿಟಿ ನೀಡಬೇಕೆಂದು ಹೇಳಲಾಗಿದೆ ಆದರೆ ಅಷ್ಟು ಬಾಂಡ್ ಮತ್ತು ಮೂವರ ಶೂರಿಟಿ ಒದಗಿಸುವುದು ಕಷ್ಟವಾಗಿದೆ.
ಇದೇ ಪ್ರಕರಣದಲ್ಲಿ ಹಣದ ಆಸೆಗೆ ಕೊಲೆ ನಾವೇ ಮಾಡಿದ್ದೆಂದು ಒಪ್ಪಿಕೊಂಡಿದ್ದ ಜೈಲು ಸೇರಿದ್ದ ಮೂವರಿಗೆ ಜಾಮೀನು ದೊರೆತಾಗಲೂ ಸಹ ಅವರಿಗೂ ಬಾಂಡ್ ಮತ್ತು ಶೂರಿಟಿ ಒದಗಿಸಲು ಸಾಧ್ಯವಾಗಿರಲಿಲ್ಲ. ಜಾಮೀನು ಸಿಕ್ಕು ವಾರಕ್ಕೂ ಹೆಚ್ಚು ದಿನಗಳ ಬಳಿಕ ಆ ಮೂವರು ಆರೋಪಿಗಳು ಬಿಡುಗಡೆ ಆಗಿದ್ದರು. ಈಗ ಜಗದೀಶ್ ಮತ್ತು ಅನುಕುಮಾರ್ಗೂ ಇದೇ ಸ್ಥಿತಿ ನಿರ್ಮಾಣ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Tue, 17 December 24