ಉತ್ತರ ಪ್ರದೇಶದಲ್ಲಿ ರಾಬರ್ಟ್​ ಶೂಟಿಂಗ್​ಗೆ ಹೋದಾಗ ನನ್ನನ್ನು ಸ್ವಾಗತಿಸೋಕೆ ಗನ್​ಮೆನ್​ಗಳು ಬಂದಿದ್ರು; ದರ್ಶನ್​

| Updated By: ಸಾಧು ಶ್ರೀನಾಥ್​

Updated on: Feb 25, 2021 | 2:21 PM

ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಗನ್​ಮೆನ್​ ವಿಚಾರವೂ ಒಂದು. ಆ ಸ್ವಾರಸ್ಯಕರ ಘಟನೆ ಬಗ್ಗೆ ಇಲ್ಲಿದೆ ಮಾಹಿತಿ.

ಉತ್ತರ ಪ್ರದೇಶದಲ್ಲಿ ರಾಬರ್ಟ್​ ಶೂಟಿಂಗ್​ಗೆ ಹೋದಾಗ ನನ್ನನ್ನು ಸ್ವಾಗತಿಸೋಕೆ ಗನ್​ಮೆನ್​ಗಳು ಬಂದಿದ್ರು; ದರ್ಶನ್​
ದರ್ಶನ್​
Follow us on

ದರ್ಶನ್​ ನಟನೆಯ, ಇನ್ನೇನು ಪ್ರದರ್ಶನ ಕಾಣಬೇಕಿರುವ ರಾಬರ್ಟ್​ ಸಿನಿಮಾ ಉತ್ತರ ಪ್ರದೇಶದಲ್ಲಿ ಕೂಡ ಚಿತ್ರೀಕರಣಗೊಂಡಿದೆ. ಉತ್ತರ ಪ್ರದೇಶಕ್ಕೆ ತೆರಳಿದಾಗ ನಡೆದ ಅದ್ಭುತ ಘಟನೆ ಬಗ್ಗೆ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶನ್​ ಹೇಳಿಕೊಂಡಿದ್ದಾರೆ. 2 ಲಸ್ಸಿಗೆ ದರ್ಶನ್​ ಬರೋಬ್ಬರಿ 2,000 ಸಾವಿರ ರೂಪಾಯಿ ನೀಡಿದ್ದರಂತೆ! ಅಷ್ಟಕ್ಕೂ ಹೀಗೆ ಆಗಿದ್ದೇಕೆ ಎನ್ನುವ ಬಗ್ಗೆ ಮಾತನಾಡಿದ್ದಾರೆ.

ಸೌರವ್​ ಅನ್ನೋ ನನ್ನ ಗೆಳೆಯನಿದ್ದ. ನಾನು ಮತ್ತು ಆತ ನಾಟಕ ಮಾಡುವಾಗ ಮಹಾಭಾರತದಲ್ಲಿ ವಿಲನ್​ಗಳು​. ನಂತರ ಒಟ್ಟಿಗೆ ಒಂದೆರಡು ಸಿನಿಮಾದಲ್ಲಿ ನಟಿಸಿದ್ದೆವು. ಆದರೆ, ಅವನಿಗೆ ಸಿನಿಮಾ ಕೈ ಹತ್ತಲಿಲ್ಲ. ಕೊನೆಯದಾಗಿ ಇಬ್ಬರೂ ಒಟ್ಟಿಗೆ ಸಂಗೊಳ್ಳಿ ರಾಯಣ್ಣ ಸಿನಿಮಾ ಮಾಡಿದೆವು. ಇದು ನನ್ನ ಕೊನೆಯ ಸಿನಿಮಾ ಎಂದು ಹೇಳಿ, ಆತ ಲಖನೌಗೆ ಹೋದ. ಅಲ್ಲಿ ಈಗ ಗಣಿಗಾರಿಕೆ ಸಂಬಂಧಿಸಿ ಏನೋ ಮಾಡಿಕೊಂಡಿದ್ದಾನೆ ಎಂದು ಮಾತು ಆರಂಭಿಸಿದರು ದರ್ಶನ್.

ರಾಬರ್ಟ್​ ಸಿನಿಮಾ ಶೂಟಿಂಗ್​ಗೆ ಉತ್ತರ ಪ್ರದೇಶಕ್ಕೆ ಹೋದಾಗ ಸೌರವ್ ಸಿಕ್ಕಿದ್ದ. ನಾನು ಹೋಗಿ ನೋಡಿದರೆ ಅಚ್ಚರಿಗೊಂಡಿದ್ದೆ. ಏಕೆಂದರೆ, ಆತನ ಕಾರಿನ ಹಿಂದೆ ನಾಲ್ಕೈದು ಗನ್​ಮೆನ್​ಗಳನ್ನು ಕರೆದುಕೊಂಡು ಬಂದಿದ್ದ. ನಾನು ಇದೆಲ್ಲ ಏಕೆ ಎಂದು ಕೇಳಿದ್ದೆ. ನೀನು ಮೈಸೂರು ಮಹಾರಾಜ. ನಿನಗೆ ಇಷ್ಟೂ ಮಾಡದಿದ್ದರೆ ಹೇಗೆ ಎಂದು ಮರು ಪ್ರಶ್ನೆ ಹಾಕಿದ್ದ. ಕೊನೆಗೆ ಲಖನೌ ಬಿರಿಯಾನಿ ತಿನ್ನೋಣ ಎಂದಿದ್ದೆ. ಒಂದು ಹೋಟೆಲ್​ಗೆ​ ಹೋಗಿದ್ದೆವು. ಅಲ್ಲಿ, ಹೋಗುತ್ತಿದ್ದಂತೆ ಗನ್​ಮೆನ್​ಗಳು ಎಲ್ಲ ಗ್ರಾಹಕರನ್ನು ಹೊಟೆಲ್​ನಿಂದ ಹೊರ ಹಾಕಿದ್ದರು. ನಂತರ ನಾವು ಕೂತು ಬಿರಿಯಾನಿ ತಿಂದೆವು. ನಂಗೆ ಹೋಟೆಲ್​ನವರು ಬೈದರೆ ಎನ್ನುವ ಭಯ ಕಾಡುತ್ತಿತ್ತು ಎಂದು ದರ್ಶನ್​ ಹೇಳಿದ್ದಾರೆ.

ಕೊನೆಗೆ ಲಸ್ಸಿ ಕುಡಿಯೋಣ ಎಂದಿದ್ದೆ. ಹೊರಗೆ ಹೋದಾಗ ನಮ್ಮನ್ನು ಗನ್​ಮೆನ್​ಗಳು ಸುತ್ತುವರಿದು ಕಾಯುತ್ತಾ ನಿಂತಿದ್ದರು. ಅಲ್ಲಿದ್ದ ಜನರೆಲ್ಲ ನಮ್ಮನ್ನೇ ನೋಡುತ್ತಿದ್ದರು. ಒಂದು ಲಸ್ಸಿಗೆ 20 ರೂಪಾಯಿ ಇತ್ತು. ನಮ್ಮ ಹತ್ತಿರ ಚಿಲ್ಲರೆ ಇರಲಿಲ್ಲ. ಹೀಗಾಗಿ 2 ಸಾವಿರ ಕೊಟ್ಟು, ಚಿಲ್ಲರೆ ನೀನೆ ಇಟ್ಕೊಳಪ್ಪ ಎಂದು ಹೇಳಿ ನಾವು ವಾಪಾಸು ಬಂದಿದ್ದವು. ಅಲ್ಲಿದ್ದ ಜನರು ನಮ್ಮನ್ನು ನೋಡುತ್ತಿರುವುದನ್ನು ನೋಡಿ ನನಗೆ ಯಾವಾಗ ಇಲ್ಲಿಂದ ಜಾಗ ಖಾಲಿ ಮಾಡುತ್ತೇನೋ ಎನ್ನಿಸಿಬಿಟ್ಟಿತ್ತು ಎಂದಿದ್ದಾರೆ ದರ್ಶನ್​.

ಇದನ್ನೂ ಓದಿ: ಅಭಿಮಾನಿ ಮುಂದೆ ದಾಸನಾದ ದರ್ಶನ್​: ಕಾರು ಫಾಲೋ ಮಾಡಿದವರ ಜತೆ ರಸ್ತೆಯಲ್ಲೇ ಕುಳಿತು ಮಾತನಾಡಿದ ಡಿ ಬಾಸ್