ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು 2ನೇ ಆರೋಪಿ ಆಗಿದ್ದು, ಅವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ದರ್ಶನ್ ಅವರಿಗೆ ಜಾಮೀನು ಸಿಕ್ಕಿದ್ದರೂ ಕೂಡ ಕೆಲವು ನಿರ್ಬಂಧಗಳು ಇವೆ. ಗಂಭೀರ ಪ್ರಕರಣದಲ್ಲಿ ಅವರು ಆರೋಪಿ ಆಗಿರುವ ಕಾರಣ ಗನ್ ಬಳಸಲು ನಿರ್ಬಂಧ ವಿಧಿಸಲಾಗಿದೆ. ಹೌದು, ಸೆಲೆಬ್ರಿಟಿ ಆಗಿರುವ ಕಾರಣದಿಂದ ದರ್ಶನ್ ಅವರು ತಮ್ಮ ರಕ್ಷಣೆಗಾಗಿ ಗನ್ ಲೈಸೆನ್ಸ್ ಪಡೆದಿದ್ದರು. ಆದರೆ ಈಗ ಅವರು ಪೊಲೀಸ್ ಠಾಣೆಗೆ ಗನ್ ಸರೆಂಡರ್ ಮಾಡಿದ್ದಾರೆ. ಇತ್ತೀಚೆಗೆ ಅವರ ಗನ್ ಲೈನ್ಸ್ ಕ್ಯಾನ್ಸಲ್ ಮಾಡಲಾಗಿದೆ.
ಈ ಮೊದಲು ದರ್ಶನ್ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ತಮಗೆ ಗನ್ ಅವಶ್ಯಕತೆ ಇದೆ ಎಂದು ದರ್ಶನ್ ಅವರು ಉತ್ತರ ನೀಡಿದ್ದರು. ಹಾಗಿದ್ದರೂ ಕೂಡ ದರ್ಶನ್ ನೀಡಿದ ಸಮಜಾಯಿಷಿಯನ್ನು ಪೊಲೀಸರು ಒಪ್ಪಿಕೊಂಡಿಲ್ಲ. ಮುಂದಿನ ಆದೇಶದವರೆಗೆ ದರ್ಶನ್ ಅವರ ಗನ್ ಲೈಸೆನ್ಸ್ ಅಮಾನತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಮನೆಗೆ ನೋಟಿಸ್ ನೀಡಲು ರಾಜರಾಜೇಶ್ವರಿ ನಗರ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರಿಗೆ ಲೈಸೆನ್ಸ್ ಗನ್ ಸರೆಂಡರ್ ಮಾಡಿದ್ದಾರೆ ದರ್ಶನ್.
ಕೊಲೆ ಕೇಸ್ನಲ್ಲಿ ದರ್ಶನ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಆದರೆ ಈಗಲೂ ಕೂಡ ದರ್ಶನ್ಗೆ ಸಂಕಷ್ಟ ತಪ್ಪಿಲ್ಲ. ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಕರ್ನಾಟಕ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಸದ್ಯದಲ್ಲೇ ಅದರ ವಿಚಾರಣೆ ನಡೆಯಲಿದೆ. ಜಾಮೀನು ರದ್ದಾದರೆ ಮತ್ತೆ ದರ್ಶನ್ ಜೈಲು ಸೇರುವ ಸಾಧ್ಯತೆ ಇರುತ್ತದೆ. ಈ ನಡುವೆ, ವಿಚಾರಣೆ ವೇಳೆ ಪೊಲೀಸರು ವಶಕ್ಕೆ ಪಡೆದ ಹಣವನ್ನು ವಾಪಸ್ ನೀಡಬೇಕು ಎಂದು ಕೂಡ ದರ್ಶನ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಣ ವಾಪಸ್ ಕೊಡಿಸಿ: ನ್ಯಾಯಾಲಯದ ಮೊರೆ ಹೋದ ದರ್ಶನ್
ಚಿತ್ರದುರ್ಗದಲ್ಲಿದ್ದ ರೇಣುಕಾ ಸ್ವಾಮಿಯನ್ನು ದರ್ಶನ್ ಸಹಚರರು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲಾಗಿತ್ತು. ಘಟನೆ ಸ್ಥಳದಲ್ಲಿ ದರ್ಶನ್, ಪವಿತ್ರಾ ಗೌಡ ಮುಂತಾದವರು ಇದ್ದರು. ರೇಣುಕಾ ಸ್ವಾಮಿ ಹತ್ಯೆ ಬಳಿಕ ಶವವನ್ನು ರಾಜಕಾಲುವೆಗೆ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ಅನೇಕರು ಸಾಕ್ಷಿಗಳಾಗಿದ್ದಾರೆ. ಒಂದು ವೇಳೆ ದರ್ಶನ್ ಗನ್ ಹೊಂದಿದ್ದರೆ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಗನ್ ಲೈಸೆನ್ಸ್ ರದ್ದು ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.