
ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ (The Devil) ಡಿಸೆಂಬರ್ 11ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ಸದ್ದು ಮಾಡುತ್ತಿದೆ. ಆದರೆ ಈ ಸಂದರ್ಭದಲ್ಲಿ ದರ್ಶನ್ (Darshan) ಅವರು ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ತಮ್ಮ ಸೆಲ್ನಲ್ಲಿ ಟಿವಿ ಅಳವಡಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಕೋರ್ಟ್ ಅನುಮತಿ ನೀಡಿತ್ತು. ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗುವುದಕ್ಕೂ ಒಂದು ದಿನ ಮುನ್ನ ದರ್ಶನ್ ಸೆಲ್ನಲ್ಲಿ ಟಿವಿ ಅಳವಡಿಸಲಾಗಿದೆ.
ಕೋರ್ಟ್ ಸೂಚನೆಯ ಮೇರೆಗೆ ಆರೋಪಿ ದರ್ಶನ್ಗೆ ಟಿವಿ ಭಾಗ್ಯ ಸಿಕ್ಕಿದೆ. ದರ್ಶನ್ ಬ್ಯಾರಕ್ನಲ್ಲಿ ಜೈಲು ಸಿಬ್ಬಂದಿ ಟಿವಿ ಅಳವಡಿಸಿದ್ದಾರೆ. ‘ದಿ ಡೆವಿಲ್’ ಸಿನಿಮಾ ಬಿಡುಗಡೆಯ ಹಿಂದಿನ ದಿನವೇ ಟಿವಿ ಭಾಗ್ಯ ಸಿಕ್ಕಿರುವುದರಿಂದ ತಮ್ಮ ಸಿನಿಮಾಗೆ ಜನರ ರೆಸ್ಪಾನ್ಸ್ ಹೇಗಿದೆ ಎಂಬುದನ್ನು ತಿಳಿಯಲು ಅವರಿಗೆ ಅನುಕೂಲ ಆಗಿದೆ. ಟಿವಿ ಜೊತೆಗೆ ಸಿಸಿಟಿವಿ ಕೂಡ ಅಳವಡಿಸಲಾಗಿದೆ.
ಸಿಸಿಟಿವಿ ಅಳವಡಿಸುವ ಮೂಲಕ ದರ್ಶನ್ ಬ್ಯಾರಕ್ನಲ್ಲಿ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ. ಡಿಸೆಂಬರ್ 3ರಂದು ಟಿವಿ ಬೇಕೆಂದು ಆರೋಪಿ ಲಕ್ಷ್ಮಣ್ ಮನವಿ ಮಾಡಿದ್ದರು. ‘ಜೈಲಿನಲ್ಲಿ ನಮಗೆ ತಲೆಕೆಡ್ತಿದೆ, ಹಾಗಾಗಿ ಟಿವಿ ಅಳವಡಿಸಬೇಕು’ ಎಂದು ಮನವಿ ಮಾಡಿದ್ದರು. ಈಗ ಕೋರ್ಟ್ ಸೂಚನೆ ಮೇರೆಗೆ ಆರೋಪಿಗಳ ಸೆಲ್ನಲ್ಲಿ ಟಿವಿ ವ್ಯವಸ್ಥೆ ಕಲ್ಪಿಸಲಾಗಿದೆ.
ಒಂದು ವೇಳೆ ದರ್ಶನ್ ಹೊರಗಡೆ ಇದ್ದಿದ್ದರೆ ಅವರ ಪಾಲಿಗೆ ಡಿಸೆಂಬರ್ 11ರ ದಿನ ಮಹತ್ವದ್ದಾಗಿರುತ್ತಿತ್ತು. ಎಲ್ಲ ಚಿತ್ರಮಂದಿರಗಳ ಎದುರು ದರ್ಶನ್ ಅವರ ಕಟೌಟ್ ನಿಲ್ಲಿಸಲಾಗಿದೆ. ಅಭಿಮಾನಿಗಳು ‘ದಿ ಡೆವಿಲ್’ ಸಿನಿಮಾದ ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಜೈಲಿನಲ್ಲಿ ಇರುವ ಕಾರಣದಿಂದ ಅಭಿಮಾನಿಗಳೇ ಮುಂದೆ ನಿಂತು ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪಿವಿಆರ್ ಐನಾಕ್ಸ್ನಲ್ಲಿ ‘ದಿ ಡೆವಿಲ್’ ಸಿನಿಮಾ ಬುಕಿಂಗ್ ಶುರುವಾಗಲು ವಿಳಂಬ ಯಾಕೆ?
ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಚನಾ ರೈ ಅವರು ನಾಯಕಿಯಾಗಿ ನಟಿಸಿದ್ದಾರೆ. ಶರ್ಮಿಳಾ ಮಾಂಡ್ರೆ, ಮಹೇಶ್ ಮಂಜ್ರೇಕರ್, ಗಿಲ್ಲಿ ನಟ, ಅಚ್ಯುತ್ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಹಾಡುಗಳು ಹಿಟ್ ಆಗಿವೆ. ಮೊದಲ ದಿನ ಈ ಸಿನಿಮಾ ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.