ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಬಂಧನವಾಗಿ ಈಗಾಗಲೇ ಎರಡು ತಿಂಗಳಿಗೂ ಹೆಚ್ಚು ಸಮಯವಾಗಿದೆ. ದರ್ಶನ್ ಇನ್ನೂ ಕನಿಷ್ಠ ಎರಡು-ಮೂರು ತಿಂಗಳು ಹೊರಗೆ ಬರುವುದು ಅನುಮಾನ ಎನ್ನಲಾಗುತ್ತಿದೆ. ಈ ನಡುವೆ ಕೆಲ ದಿನಗಳ ಹಿಂದೆ ಕೆಲ ದರ್ಶನ್ ಅಭಿಮಾನಿಗಳು, ನಾವು ದರ್ಶನ್ ಹೊರಗೆ ಬರುವವರೆಗೆ ಇನ್ಯಾವ ನಟರ ಸಿನಿಮಾವನ್ನೂ ಸಹ ನೋಡುವುದಿಲ್ಲ ಎಂದಿದ್ದರು. ಇದೀಗ ದರ್ಶನ್ ಅವರೇ ನಟಿಸಿದ್ದ ಹಳೆಯ ಸೂಪರ್ ಹಿಟ್ ಸಿನಿಮಾ ಮರು ಬಿಡುಗಡೆ ಆಗಲಿದೆ.
ದರ್ಶನ್ ನಟನೆಯ ‘ಕರಿಯ’ ಸಿನಿಮಾ ಆಗಸ್ಟ್ 30ರಂದು ಮರು ಬಿಡುಗಡೆ ಆಗುತ್ತಿದೆ. 2003ರ ಜನವರಿ ತಿಂಗಳಲ್ಲಿ ಈ ಸಿನಿಮಾ ಮೊದಲ ಬಾರಿ ಬಿಡುಗಡೆ ಆಗಿತ್ತು. ಖ್ಯಾತ ನಿರ್ದೇಶಕ ಪ್ರೇಮ್ ಅವರ ಮೊದಲ ಸಿನಿಮಾ ಇದು. ದರ್ಶನ್ಗೆ ಸಹ ನಾಯಕನಾಗಿ ಇದು ಐದನೇ ಸಿನಿಮಾ ಮತ್ತು ಮೊದಲ ಬಲು ದೊಡ್ಡ ವಿಜಯ ತಂದುಕೊಟ್ಟ ಸಿನಿಮಾ. ಆಗಿನ ಕಾಲಕ್ಕೆ ಈ ಸಿನಿಮಾ 700 ದಿನಗಳ ಪ್ರದರ್ಶನ ಕಂಡಿತ್ತು. ದರ್ಶನ್ ಅನ್ನು ರೌಡಿಸಂ ಸಿನಿಮಾಗಳ ಬ್ರ್ಯಾಂಡ್ ಅಂಬಾಸಿಡರ್ ಮಾಡಿಬಿಟ್ಟಿತು.
ಆಗಸ್ಟ್ 30 ರಂದು ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಈ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಕನ್ನಡದಲ್ಲಿ ಈವರೆಗೆ ಬಿಡುಗಡೆ ಆಗಿರುವ ರೌಡಿಸಂ ಕತೆಯುಳ್ಳ ಸಿನಿಮಾಗಳ ಪೈಕಿ ಕೆಲವೇ ಅತ್ಯುತ್ತಮ ಸಿನಿಮಾಗಳಲ್ಲಿ ಇದೂ ಸಹ ಒಂದು. ಸಿನಿಮಾದ ಹಾಡುಗಳು, ಆಕ್ಷನ್, ಸಿನಿಮಾದ ನಿರೂಪಣೆ ಆಗಿನ ಸಮಯಕ್ಕೆ ವಿನೂತನ ಎನಿಸಿತ್ತು. ಅಲ್ಲದೆ ಕೆಲವು ನಿಜವಾದ ರೌಡಿಗಳನ್ನು, ನಿಜವಾದ ರೌಡಿ ಅಡ್ಡಗಳಲ್ಲಿಯೇ ಸಿನಿಮಾದ ಚಿತ್ರೀಕರಣ ಮಾಡಿಸಲಾಗಿತ್ತು.
ಇದನ್ನೂ ಓದಿ:ದರ್ಶನ್ ಪ್ರಕರಣದ ತನಿಖೆಗೆ ಈವರೆಗೆ ಖರ್ಚಾದ ಹಣ ಎಷ್ಟು?
ದರ್ಶನ್ ಜೈಲು ಸೇರಿದ ಬಿಡುಗಡೆ ಆಗುತ್ತಿರುವ ಎರಡನೇ ಸಿನಿಮಾ ಇದು. ಕೆಲ ವಾರದ ಹಿಂದೆ ದರ್ಶನ್ ನಟನೆಯ ‘ಶಾಸ್ತ್ರಿ’ ಸಿನಿಮಾ ಮರು ಬಿಡುಗಡೆ ಆಗಿತ್ತು. ಆ ಸಿನಿಮಾ ಉತ್ತಮ ಕಲೆಕ್ಷನ್ ಅನ್ನೇ ಮಾಡಿತ್ತು. ಇದೀಗ ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಈ ಸಿನಿಮಾ ಸಹ ಉತ್ತಮ ಕಲೆಕ್ಷನ್ ಅನ್ನೇ ಮಾಡುವ ನಿರೀಕ್ಷೆ ಇದೆ. ಅಂದಹಾಗೆ ‘ಕರಿಯ’ ಸಿನಿಮಾ ಮರು ಬಿಡುಗಡೆ ಆಗುತ್ತಿರುವ ದಿನದಂದೆ ರಿಷಬ್ ಶೆಟ್ಟಿ ನಿರ್ಮಿಸಿ, ಪ್ರಮೋದ್ ಶೆಟ್ಟಿ ನಟಿಸಿರುವ ‘ಲಾಫಿಂಗ್ ಬುದ್ಧ’ ಸಿನಿಮಾ ಸಹ ಬಿಡುಗಡೆ ಆಗುತ್ತಿದ್ದು, ‘ಕರಿಯ’ ಸಿನಿಮಾದ ಮರು ಬಿಡುಗಡೆ, ‘ಲಾಫಿಂಗ್ ಬುದ್ಧ’ ಸಿನಿಮಾದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ದರ್ಶನ್ ಜೈಲಿಗೆ ಹೋಗಿರುವುದನ್ನು ಪರೋಕ್ಷವಾಗಿ ಕೆಲವರು ಲಾಭ ಗಳಿಕೆಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಸಹ ಕೇಳಿ ಬರುತ್ತಿವೆ. ದರ್ಶನ್ ಜೈಲಿನಲ್ಲಿರುವ ಕಾರಣ ಅವರ ಸಿನಿಮಾಗಳನ್ನು ಮರು ಬಿಡುಗಡೆ ಮಾಡಿ, ಅಭಿಮಾನಿಗಳು ಸೆಂಟಿಮೆಂಟ್ ಅನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳುವ ಹುನ್ನಾರವೆಂದೂ ಸಹ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ