ನಟ ದರ್ಶನ್ (Darshan) ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಹಲವು ಸಿನಿಮಾಗಳಲ್ಲಿ ನಟಿಸಿ ತೂಗುದೀಪ ಫೇಮಸ್ ಆಗಿದ್ದರು. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇತ್ತು. ಅವರ ಮಗನಾಗಿ ಜನಿಸಿದ್ದು ದರ್ಶನ್. ಅವರು ಲೈಟ್ಬಾಯ್ ಆಗಿ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಸ್ಟಾರ್ ಹೀರೋ ಆದರು. ದರ್ಶನ್ 18 ವರ್ಷದವನಿದ್ದಾಗಲೇ ತೂಗುದೀಪ ಶ್ರೀನಿವಾಸ್ ಅವರು ನಿಧನ ಹೊಂದಿದರು. ಹೀಗಾಗಿ, ಅಪ್ಪನ ಮಾರ್ಗದರ್ಶನ ದರ್ಶನ್ಗೆ ಸರಿಯಾಗಿ ಸಿಗಲೇ ಇಲ್ಲ. ಈ ಕೊರಗು ದರ್ಶನ್ ಅವರಿಗೆ ಯವಾಗಲೂ ಇತ್ತು. ಈ ಕೊರಗನ್ನು ಫ್ಯಾನ್ಸ್ ನೀಗಿಸಬೇಕಿತ್ತು. ಆದರೆ, ದರ್ಶನ್ ಮಾಡಿದ್ದೆಲ್ಲ ಸರಿ ಎಂದರು ಅಭಿಮಾನಿಗಳು. ಇದೇ ದರ್ಶನ್ಗೆ ಮುಳುವಾಗಿದೆ.
ನಟ ದರ್ಶನ್ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ತಂದೆ ಇಲ್ಲದ ಕೊರಗಿನ ಬಗ್ಗೆ ಹೇಳಿದ್ದರು. ಜೊತೆಗೆ ಅಭಿಮಾನಿಗಳು ನನ್ನನ್ನು ತಿದ್ದುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದರು. ‘ಇವತ್ತು ನನಗೆ ತಂದೆ ಇಲ್ಲ. ನನಗೆ ಹೇಳೋರು ಯಾರೂ ಇಲ್ಲ ಎಂಬಂತಾಗಿದೆ. ನಾನು ಆಡಿದ್ದೇ ಆಟ ಆಗಿಬಿಟ್ಟಿದೆ. ಅವರು ಹಲವು ವರ್ಷ ಚಿತ್ರಂಗದಲ್ಲಿದ್ದರು. ತಪ್ಪು ಒಪ್ಪು ಗೊತ್ತಿರುತ್ತಿತ್ತು. ಆದರೆ, ತಪ್ಪು ಮಾಡ್ತಿದೀಯಾ ಎಂದು ಹೇಳಲು ಯಾರೂ ಇಲ್ಲ. ನನ್ನ ಅದೃಷ್ಟಕ್ಕೆ ಅಭಿಮಾನಿಗಳು ಇದ್ದಾರೆ. ಅವರು ನನ್ನ ತಪ್ಪನ್ನು ತಿದ್ದುತ್ತಾರೆ. ಸಂದರ್ಶನ ನೋಡಿ ಕರೆ ಮಾಡಿ ಮಾಡಿಯೇ ಮಾಡುತ್ತಾರೆ. ಅದರಿಂದ ನಾನು ತಿದ್ದುಕೊಳ್ಳುತ್ತೇನೆ’ ಎಂದಿದ್ದರು ದರ್ಶನ್.
ದರ್ಶನ್ ಅವರ ಅಭಿಮಾನಿಗಳು ಈಗ ಬದಲಾಗಿದ್ದಾರೆ. ಮೊದಲಿನ ರೀತಿಯಲ್ಲಿ ಇಲ್ಲ. ದರ್ಶನ್ ಏನೇ ಮಾಡಿದರೂ ಅದನ್ನು ಸರಿ ಎಂದೇ ಹೇಳುತ್ತಾರೆ. ಈಗ ನಡೆದಿರೋ ಕೊಲೆ ಘಟನೆ ಒಳ್ಳೆಯ ಉದಾಹರಣೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸುದ್ದಿ ಬಿತ್ತರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಅವರು ಕಿಡಿಕಾರುತ್ತಿದ್ದಾರೆ. ಕೆಲವು ಮಾಧ್ಯಮ ವರದಿಗಾರರ ಮೇಲೆ ಹಲ್ಲೆ ಮಾಡಿದ ಘಟನೆಯೂ ನಡೆದಿದೆ.
ಇದನ್ನೂ ಓದಿ: ‘ಎಷ್ಟೂ ಅಂತ ತಡ್ಕೋತಾರೆ?’; ಕೊಲೆ ಕೇಸ್ನಲ್ಲಿ ದರ್ಶನ್ನ ಬೆಂಬಲಿಸಿ ಮಾತನಾಡಿದ ಪರಭಾಷಾ ನಟಿ
‘ನಮ್ಮ ಬಾಸ್ ಏನೆ ಮಾಡಿದರೂ ಅದನ್ನು ನಾವು ಬೆಂಬಲಿಸುತ್ತೇವೆ’ ಎಂದು ಕೆಲವರು ಓಪನ್ ಆಗಿ ಹೇಳಿಕೆ ನೀಡಿದ್ದಾರೆ. ‘ನಮ್ಮ ಬಾಸ್ ಕುಡಿದ ಏಟಲ್ಲಿ ಒಂದೆರಡು ಪೆಟ್ಟು ಕೊಟ್ಟಿರಬಹುದು’ ಎಂದು ಕೆಲ ಅಭಿಮಾನಿಗಳು ದರ್ಶನ್ನ ಸಮರ್ಥಿಸಿಕೊಂಡಿದ್ದಿದೆ. ಹೀಗಾಗಿ, ದರ್ಶನ್ ಮಾಡಿದ್ದು ತಪ್ಪು ಎಂದು ಹೇಳಿರುವ ಅಭಿಮಾನಿಗಳು ಹುಡುಕಿದರೂ ಒಬ್ಬರಾದರೂ ಸಿಗುತ್ತಾರೋ ಇಲ್ಲವೋ. ಇನ್ನು, ಸಿನಿಮಾ ಶೂಟಿಂಗ್ ಎನ್ನುವ ರೀತಿ ಪೊಲೀಸ್ ಠಾಣೆಯ ಮುಂದೆ, ಕೋರ್ಟ್ ಮುಂದೆ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ನೆರೆಯುತ್ತಿದ್ದಾರೆ. ದರ್ಶನ್ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಭಿಮಾನಿಗಳು ನನ್ನ ಪರವಾಗಿದ್ದಾರಲ್ಲ ಎನ್ನುವ ಧೈರ್ಯ ದರ್ಶನ್ಗೆ ಸಿಕ್ಕಿರುತ್ತದೆ. ಹೀಗಾಗಿ, ಇಲ್ಲಿ ತಿದ್ದಿಕೊಳ್ಳುವ ಪ್ರಮೇಯವೇ ಬರುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.