ಜೈಲಧಿಕಾರಿಗಳ ಬಳಿ ಮತ್ತೊಂದು ಬೇಡಿಕೆ ಇಟ್ಟ ದರ್ಶನ್, ಆದರೆ ನಿರಾಕರಣೆ
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಮನೆ ಊಟ, ಬೆಡ್, ಬೆಡ್ಶೀಟ್ಗಾಗಿ ಹೈಕೋರ್ಟ್ ವರೆಗೆ ಹೋಗಿದ್ದ ದರ್ಶನ್ ತೂಗುದೀಪ ಈಗ ಬಳ್ಳಾರಿ ಜೈಲಿನಲ್ಲೂ ಬೇಡಿಕೆಗಳನ್ನು ಮುಂದುವರೆಸಿದ್ದಾರೆ. ಆದರೆ ಜೈಲು ಸಿಬ್ಬಂದಿ ದರ್ಶನ್ ಬೇಡಿಕೆಯನ್ನು ನಿರಾಕರಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್, ಕಳೆದ ಮೂರು ತಿಂಗಳಿನಿಂದಲೂ ಜೈಲು ವಾಸ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಅನ್ನು, ಅಲ್ಲಿ ರಾಜಾತಿಥ್ಯ ಸ್ವೀಕರಿಸಿ ಜೈಲನ್ನು ರೆಸಾರ್ಟ್ ಮಾಡಿಟ್ಟುಕೊಂಡ ಕಾರಣಕ್ಕೆ ಈಗ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ಶಿಸ್ತಿನ ನಿಯಮಗಳನ್ನು ಪಾಲಿಸಬೇಕಿದ್ದು. ಕೆಲವು ಸಮಸ್ಯೆಗಳು ದರ್ಶನ್ಗೆ ಕಾಡುತ್ತಿವೆ. ಕೆಲವು ಸೌಲಭ್ಯಗಳಿಗಾಗಿ ದರ್ಶನ್ ಜೈಲಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದಾಗ ಮನೆ ಆಹಾರ, ಬೆಡ್ ಮತ್ತು ಬೆಡ್ಶೀಟ್, ಪುಸ್ತಕಗಳಿಗಾಗಿ ದರ್ಶನ್ ಬೇಡಿಕೆ ಇಟ್ಟಿದ್ದರು, ಹೈಕೋರ್ಟ್ ಮೆಟ್ಟಿಲು ಸಹ ಏರಿದರು. ಆದರೆ ಅಲ್ಲಿ ಆ ಸೌಲಭ್ಯಗಳ್ಯಾವುವೂ ಸಿಕ್ಕಿರಲಿಲ್ಲ. ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್ಗೆ ಯಾವ ಸೌಲಭ್ಯವೂ ಇಲ್ಲದಾಗಿದೆ. ಇಲ್ಲಿ ತೀರ ಇತ್ತೀಚೆಗಷ್ಟೆ ಹಳೆಯ ಟಿವಿ ಒಂದನ್ನು ನೀಡಲಾಗಿದೆ. ಇದೀಗ ದರ್ಶನ್ ಮತ್ತೊಂದು ಸೌಲಭ್ಯಕ್ಕೆ ಮನವಿ ಮಾಡಿದ್ದಾರೆ, ಆದರೆ ಜೈಲು ಅಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ.
ದರ್ಶನ್ ಜೈಲು ಸೇರಿದಾಗಿನಿಂದಲೂ ಅವರಿಗೆ ನಿದ್ದೆ ಸಮಸ್ಯೆ ಕಾಡುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗಲೂ ಸಹ ಬೆಡ್, ಹಾಸಿಗೆ, ದಿಂಬುಗಳು ಇಲ್ಲದೆ ನಿದ್ದೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಬಳ್ಳಾರಿಯಲ್ಲೂ ಅದೇ ಸಮಸ್ಯೆ ಆಗಿದೆ. ಹಾಗಾಗಿ ತಮಗೆ ಮೃದುವಾದ ದಿಂಬಿನ ವ್ಯವಸ್ಥೆ ಮಾಡುವಂತೆ ಜೈಲಧಿಕಾರಿಗಳ ಬಳಿ ದರ್ಶನ್ ಕೇಳಿಕೊಂಡಿದ್ದಾರೆ. ಆದರೆ ಜೈಲು ಅಧಿಕಾರಿಗಳು ಹೊಸ ಮೃದುವಾದ ದಿಂಬು ನೀಡಲು ನಿರಾಕರಿಸಿದ್ದು, ಜೈಲಿನಲ್ಲಿ ಯಾವುದು ಲಭ್ಯವಿದೆಯೋ ಅದನ್ನಷ್ಟೆ ನೀಡಲು ಸಾಧ್ಯ ಎಂದಿದ್ದಾರೆ.
ಇದನ್ನೂ ಓದಿ:ಜಾಮೀನು ಪಡೆಯಲು ದರ್ಶನ್ಗೆ ಮುಳುವಾಗುತ್ತಾ ಆ ಒಂದು ಸನ್ನೆ?
ಹನುಮಾನ್ ಚಾಲೀಸ
ಇನ್ನು ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಗೆ ಅನಾಮಿಕ ವ್ಯಕ್ತಿಯೊಬ್ಬರು ಹನುಮಾನ್ ಚಾಳೀಸವನ್ನು ಕಳಸಿಕೊಟ್ಟಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಹನುಮಾನ್ ಚಾಳೀಸವನ್ನು ದರ್ಶನ್ಗೆ ಪಾರ್ಸಲ್ ಕಳಸಿದ್ದಾರೆ. ಹನುಮನ ಆರ್ಶೀವಾದ ನಿಮ್ಮ ಮೇಲಿರಲು ಪುಸ್ತಕ ಓದಿರಿ ಒಳ್ಳೆದಾಗುತ್ತೆ ಎಂದು ಪುಸ್ತಕ ಕಳಿಸಿರುವ ವ್ಯಕ್ತಿ ಬರೆದಿದ್ದಾರೆ.
ಪರಪ್ಪನ ಅಗ್ರಹಾರ
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ಗೆ ರಾಜಾತಿಥ್ಯ ನೀಡಿದ್ದ ವಿಚಾರವಾಗಿ ಜೈಲು ಸಿಬ್ಬಂದಿ ಮೇಲೆ ತನಿಖೆ ನಡೆಯುತ್ತಿದೆ. ಸಿಸಿಬಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ ಸಿಸಿಬಿ ಪೊಲೀಸರಿಗೆ ಜೈಲಧಿಕಾರಿಗಳು ಸೂಕ್ತ ಮಾಹಿತಿ ನೀಡದೆ ಸಮಸ್ಯೆ ಮಾಡುತ್ತಿದ್ದಾರೆ. ದರ್ಶನ್ ಬ್ಯಾರಕ್ ಬಳಿ ಡ್ಯೂಟಿಗೆ ಹಾಕಿದ್ದವರ ಮಾಹಿತಿಯನ್ನು ಜೈಲಧಿಕಾರಿಗಳು ನೀಡುತ್ತಿಲ್ಲ, ಡ್ಯೂಟಿ ಡೈರಿಯನ್ನು ಸಹ ಸರಿಯಾಗಿ ಮೇಂಟೇನ್ ಮಾಡಿಲ್ಲ, ಹಾಗಾಗಿ ಯಾರು ಡ್ಯೂಟಿಯಲ್ಲಿದ್ದರು ಎಂಬುದು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ