‘ಬಾಸ್’ ಸಿನಿಮಾಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್, ವಿಜಯಲಕ್ಷ್ಮಿ

ಜೂ.19ರಂದು ಬಿಡುಗಡೆ ಆಗಬೇಕಿದ್ದ ‘ಬಾಸ್’ ಸಿನಿಮಾಗೆ ಈಗ ಆತಂಕ ಶುರುವಾಗಿದೆ. ಈ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ದರ್ಶನ್ ಮತ್ತು ವಿಜಯಲಕ್ಷ್ಮಿ ದರ್ಶನ್ ಅವರು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಜೂನ್ 17ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ. ಆ ಬಗ್ಗೆ ಇಲ್ಲಿದೆ ವಿವರ..

‘ಬಾಸ್’ ಸಿನಿಮಾಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್, ವಿಜಯಲಕ್ಷ್ಮಿ
Darshan, Vijayalakshmi

Updated on: Jun 16, 2026 | 5:36 PM

ವಿ. ಲವ ನಿರ್ದೇಶನದ ‘ಬಾಸ್’ ಸಿನಿಮಾ (Boss Movie) ಈಗಾಗಲೇ ಸಾಕಷ್ಟು ಸುದ್ದಿ ಆಗಿದೆ. ತನಿಷ್ ಶಿವಣ್ಣ ನಟನೆಯ ಈ ಚಿತ್ರದ ಟೀಸರ್ ಬಿಡುಗಡೆ ಆದ ದಿನದಿಂದಲೂ ವಿವಾದ ಶುರು ಆಗಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ ಎಂಬುದನ್ನು ಟೀಸರ್​ನಲ್ಲಿ ಉಲ್ಲೇಖಿಸಲಾಗಿತ್ತು. ಟೀಸರ್ ನೋಡಿದರೆ ನಟ ದರ್ಶನ್ (Darshan) ಕೇಸ್ ರೀತಿಯೇ ಈ ಸಿನಿಮಾದ ಕಥೆ ಇದೆ ಎಂಬ ಅನುಮಾನ ಮೂಡುತ್ತದೆ. ಆ ಕಾರಣದಿಂದ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರು ‘ಬಾಸ್’ ಸಿನಿಮಾದ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಮೊದಲು ಸೆಷನ್ಸ್ ಕೋರ್ಟ್​​ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು ‘ಬಾಸ್’ ಸಿನಿಮಾಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿ ಅವರ ಅರ್ಜಿ ವಜಾಗೊಂಡಿತು. ಅದರಿಂದ ಚಿತ್ರತಂಡಕ್ಕೆ ಬಲ ಸಿಕ್ಕಂತೆ ಆಗಿತ್ತು. ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡದವರು ಆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಈಗ ‘ಬಾಸ್’ ಚಿತ್ರತಂಡಕ್ಕೆ ಮತ್ತೆ ವಿಘ್ನ ಎದುರಾಗುವ ಸಾಧ್ಯತೆ ಇದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ 19ರಂದು ‘ಬಾಸ್’ ಸಿನಿಮಾ ಬಿಡುಗಡೆ ಆಗಬೇಕು. ಈಗಾಗಲೇ ಚಿತ್ರತಂಡದವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಜೂನ್ 19ರಂದು ಸಿನಿಮಾ ರಿಲೀಸ್ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಕೂಡ ನೀಡಲಾಗಿದೆ. ಆದರೆ ಚಿತ್ರದ ಬಿಡುಗಡೆಗೆ ಕೆಲವೇ ದಿನ ಬಾಕಿ ಇರುವಾಗ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಹೈಕೋರ್ಟ್​ ಮೊರೆ ಹೋಗಿದ್ದಾರೆ.

‘ಬಾಸ್’ ಸಿನಿಮಾದ ಟೀಸರ್:

‘ಬಾಸ್’ ಸಿನಿಮಾದ ಬಿಡುಗಡೆಗೆ ತಡೆ ನೀಡಬೇಕು ಎಂದು ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಅದರ ವಿಚಾರಣೆ ಜೂನ್ 17ರಂದು ನಡೆಯಲಿದೆ. ನ್ಯಾಯಾಲಯ ನೀಡುವ ತೀರ್ಪಿನ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ. ಇದು ದರ್ಶನ್ ಜೀವನದ ಕಥೆ ಅಲ್ಲ ಎಂದು ‘ಬಾಸ್’ ಚಿತ್ರತಂಡ ಹೇಳುತ್ತಲೇ ಬಂದಿದೆ. ಆದರೆ ಟೀಸರ್​ನಲ್ಲಿ ಹೋಲಿಕೆಗಳು ಕಾಣಿಸುತ್ತಿವೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್: ಪ್ರತಿ ದಿನ ವಿಚಾರಣೆಗೆ ಕೋರ್ಟ್ ಸೂಚನೆ; ದರ್ಶನ್ ಪರ ವಕೀಲರ ಮನವಿ ತಿರಸ್ಕಾರ

ಸೆನ್ಸಾರ್ ಮಂಡಳಿಯಿಂದ ಈ ಸಿನಿಮಾಗೆ ಪ್ರಮಾಣಪತ್ರ ಸಿಕ್ಕಿದೆ. ಯು/ಎ ಪ್ರಮಾಣಪತ್ರವನ್ನು ನೀಡಲಾಗಿದೆ. ‘ಬಾಸ್’ ಸಿನಿಮಾದ ಬಿಡುಗಡೆಗೆ ಈ ಮೊದಲು ಸೆಷನ್ಸ್ ಕೋರ್ಟ್ ನೀಡಿದ್ದ ಅನುಮತಿಯನ್ನು ಈಗ ಹೈಕೋರ್ಟ್ ಎತ್ತಿ ಹಿಡಿಯುತ್ತಾ ಅಥವಾ ಚಿತ್ರಕ್ಕೆ ತಡೆ ನೀಡುತ್ತಾ ಎಂಬುದನ್ನು ತಿಳಿಯಲು ಸಿನಿಪ್ರಿಯರು ಮತ್ತು ದರ್ಶನ್ ಅವರ ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us