
ಬೆಂಗಳೂರು ಜೂನ್ 11: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಜೈಲು ಜೀವನದ ಕುರಿತು ಒಂದು ಕುತೂಹಲಕಾರಿ ಮಾಹಿತಿ ಹೊರ ಬಿದ್ದಿದೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಕೈತಪ್ಪಿದ ಬಳಿಕ ನಟ ದರ್ಶನ್ ಅವರು (Darshan) ಜೈಲಿನಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದರೆ, ಇತ್ತ ಎ1 ಆರೋಪಿ ಪವಿತ್ರಾ ಗೌಡ ಅವರು ಕಂಬಿ ಎಣಿಸುತ್ತಲೇ ತಮ್ಮ ಆತ್ಮಚರಿತ್ರೆ ಬರೆಯುವಲ್ಲಿ ಮಗ್ನರಾಗಿದ್ದಾರೆ. ಇಬ್ಬರು ಆರೋಪಿಗಳ ದಿನಚರಿ ಈಗ ಜೈಲಿನಲ್ಲಿ ಸಂಪೂರ್ಣ ವಿಭಿನ್ನವಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆ ವಿಳಂಬ ಆಗುತ್ತಿದೆ ಎಂದು ಆರೋಪಿಸಿ ದರ್ಶನ್ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಸಲ್ಲಿಕೆ ಮಾಡಿದ್ದರು. ಆದರೆ, ಕೋರ್ಟ್ ಇದಕ್ಕೆ ನಿರಾಕರಿಸಿದೆ. ಒಂದು ವರ್ಷದ ಒಳಗೆ ಪ್ರಮುಖ ಸಾಕ್ಷಿ ವಿಚಾರಣೆ ಪೂರ್ಣಗೊಳಿಸಲು ಕೆಳ ಹಂತದ ನ್ಯಾಯಾಲಯಕ್ಕೆ ಗಡುವು ನೀಡಿದೆ. ಒಂದೊಮ್ಮೆ ಒಂದು ವರ್ಷದ ಒಳಗೆ ವಿಚಾರಣೆ ಪೂರ್ಣಗೊಳ್ಳದೆ ಇದ್ದರೆ, ಆ ಬಳಿಕ ಜಾಮೀನಿಗೆ ದರ್ಶನ್ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಬದಲಾಗಲಿದ್ದಾರೆ ದರ್ಶನ್ ಕೇಸ್ ವಿಚಾರಣೆ ನಡೆಸುತ್ತಿರುವ ಜಡ್ಜ್; ಕಾರಣ ಇಲ್ಲಿದೆ
ಜಾಮೀನು ಸಿಗದ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ತೀವ್ರ ನಿರಾಶರಾಗಿದ್ದಾರೆ ಎನ್ನಲಾಗಿದೆ. ಇನ್ನು ಕನಿಷ್ಠ ಒಂದು ವರ್ಷದವರೆಗೆ ತಮಗೆ ಬೇಲ್ ಸಿಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಅವರು ಸದ್ಯ ಯಾರ ಜತೆಯೂ ಮಾತನಾಡದೆ ಸೈಲೆಂಟ್ ಆಗಿದ್ದಾರೆ. ತಾವಾಯಿತು, ತಮ್ಮ ಪಾಡಾಯ್ತು ಎನ್ನುವಂತೆ ಇರುತ್ತಿರುವ ದರ್ಶನ್ ಅವರು, ವಾರಕ್ಕೊಮ್ಮೆ ಜೈಲಾಡಳಿತ ನೀಡುವ ಮೂರ್ನಾಲ್ಕು ಪುಸ್ತಕಗಳನ್ನು ಓದುತ್ತಾ ಕಾಲ ಕಳೆಯುತ್ತಿದ್ದಾರೆ.
ಮತ್ತೊಂದೆಡೆ, ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಕಥೆಯೇ ಬೇರೆಯದ್ದಾಗಿದೆ. ಕಳೆದ ಒಂದು ತಿಂಗಳಿಂದಲೂ ಅವರು ಜೈಲಿನಲ್ಲಿ ಬಿಳಿ ಹಾಳೆ ಮತ್ತು ಪೆನ್ಸಿಲ್ ಪಡೆದು ತಮ್ಮ ಆತ್ಮಚರಿತ್ರೆ ಬರೆಯುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ. ‘ತಾನು ಯಾರು, ತನ್ನ ಬದುಕು ಹೇಗಿತ್ತು ಹಾಗೂ ತಾನು ಏನು ಮಾಡಿದ್ದೇನೆ ಎಂಬುದನ್ನೆಲ್ಲಾ ಅವರು ಬರೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ಯೋಗ ದಿನಾಚರಣೆಯ ಅಭ್ಯಾಸಕ್ಕೂ ಬಾರದೇ ಪವಿತ್ರಾ ಗೌಡ ಅವರು ಜೈಲಿನ ಕೋಣೆಯಲ್ಲಿ ಕುಳಿತು ಆತ್ಮಚರಿತ್ರೆ ಬರೆಯುವುದರಲ್ಲೇ ಮೌನವಾಗಿ ಕಾಲ ಕಳೆದಿದ್ದಾರೆ ಎಂದು ತಿಳಿದುಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.