‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ ಅವ್ಯವಸ್ಥೆ: ದರ್ಶನ್ ಅಭಿಮಾನಿಗಳ ಆಕ್ರೋಶ

Sangolli Rayanna Movie: ದರ್ಶನ್ ನಟನೆಯ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಇಂದು ಮರು ಬಿಡುಗಡೆ ಆಗಿದೆ. ಆದರೆ ದರ್ಶನ್ ಅಭಿಮಾನಿಗಳು ಸಿನಿಮಾದ ನಿರ್ಮಾಪಕ, ವಿತರಕ ಹಾಗೂ ಚಿತ್ರಮಂದಿರಗಳ ಮಾಲೀಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ ಅವ್ಯವಸ್ಥೆ: ದರ್ಶನ್ ಅಭಿಮಾನಿಗಳ ಆಕ್ರೋಶ

Updated on: Nov 22, 2024 | 12:16 PM

ದರ್ಶನ್ ನಟನೆಯ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಇಂದು (ನವೆಂಬರ್ 22) ಮರು ಬಿಡುಗಡೆ ಆಗಿದೆ. ಆದರೆ ದರ್ಶನ್ ಅಭಿಮಾನಿಗಳೇ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಸಂಗೊಳ್ಳಿ ರಾಯಣ್ಣ’ ಸಿನಿಮಾದ ಮರು ಬಿಡುಗಡೆಯನ್ನು ಸೂಕ್ತವಾಗಿ ಮಾಡಿಲ್ಲವೆಂದು, ಸಿನಿಮಾಕ್ಕೆ ಮೇನ್ ಥಿಯೇಟರ್ ನೀಡಿಲ್ಲ, ಸರಿಯಾದ ಪ್ರಚಾರ ಮಾಡಿಲ್ಲ, ಬುಕ್​ಮೈ ಶೋನಲ್ಲಿಯೂ ಸಹ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಬೆಳ್ಳಂಬೆಳಿಗ್ಗೆ ‘ಸಂಗೊಳ್ಳಿ ರಾಯಣ್ಣ’ ಸಿನಿಮಾದ ಶೋ ಹಾಕಲಾಗಿತ್ತು, ಸಿನಿಮಾ ವೀಕ್ಷಿಸಲು ಬಂದ ಅಭಿಮಾನಿಗಳು ಮಾಧ್ಯಮದವರ ಮುಂದೆ ಅಸಮಾಧಾನ ತೋಡಿಕೊಂಡರು. ‘ಸಂಗೊಳ್ಳಿ ರಾಯಣ್ಣ’ ದೇಶಪ್ರೇಮ, ಕನ್ನಡ ಪ್ರೇಮ ಸಾರುವ ಸಿನಿಮಾ, ಈ ಸಿನಿಮಾಕ್ಕೆ ವೀರೇಶ್ ಮತ್ತಿತರೆ ಯಾವುದಾದರೂ ಮುಖ್ಯ ಚಿತ್ರಮಂದಿರಗಳನ್ನು ನೀಡಬೇಕಿತ್ತು, ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರ ನೀಡಿರುವುದು ಸರಿಯಲ್ಲ’ ಎಂದಿದ್ದಾರೆ.

ದರ್ಶನ್​ರ ಸಿನಿಮಾಗಳನ್ನು ನೋಡುವ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಗೆ ಸೂಕ್ತವಾದ ಮಾಹಿತಿಯನ್ನೇ ನೀಡಲಾಗಿಲ್ಲ. ನಿನ್ನೆ ರಾತ್ರಿ ವರೆಗೂ ಬುಕ್​ಮೈಶೋ ನಲ್ಲಿ ಅಪ್​ಡೇಟ್ಸ್ ನೀಡಲಾಗಿರಲಿಲ್ಲ. ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಬೆಳಿಗ್ಗೆ ಶೋ ಇರುವ ಬಗ್ಗೆ ಸಹ ಅಭಿಮಾನಿಗಳಿಗೆ ಮಾಹಿತಿ ನೀಡಲಾಗಿಲ್ಲ. ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಅಂಥಹಾ ದೇಶ ಪ್ರೇಮ ಸಾರುವ ಸಿನಿಮಾವನ್ನು ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕಿತ್ತು. ಆದರೆ ಅದಾಗಿಲ್ಲ’ ಎಂದು ಅಭಿಮಾನಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ ಖಡ್ಗ ಝಳಪಳಿಸಿದರು!

ಬುಕ್​ ಮೈ ಶೋನಲ್ಲಿ ಸಹ ತಪ್ಪು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ. ಸಿದ್ದಲಿಂಗೇಶ್ವರ ಚಿತ್ರಮಂದಿರದ 10 ಗಂಟೆ ಶೋ ಈಗಾಗಲೇ ಫುಲ್ ಆಗಿದೆ ಎಂದು ಬುಕ್​ಮೈ ಶೋನಲ್ಲಿ ತೋರಿಸಲಾಗುತ್ತಿದೆ. ಆದರೆ ಅಷ್ಟು ಬುಕಿಂಗ್ ಆಗಿಯೇ ಇಲ್ಲ. ಇಲ್ಲೇ ಚಿತ್ರಮಂದಿರದವರಿದ್ದಾರೆ ಅವರನ್ನೇ ಕೇಳೋಣ, ಯಾಕೆ ಹೀಗೆ ಮಾಡುತ್ತಿದ್ದಾರೆ, ಅಭಿಮಾನಿಗಳಿಗೆ ಯಾಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಕೆಲ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಜನವರಿಯಲ್ಲಿ ಸಂಗೊಳ್ಳಿ ರಾಯಣ್ಣನವರ ಜಯಂತಿ ಇತ್ತು, ಅಂದು ‘ಸಂಗೊಳ್ಳಿ ರಾಯಣ್ಣ’ ಸಿನಿಮಾ ಬಿಡುಗಡೆ ಮಾಡಬಹುದಿತ್ತು. ಈಗ ಬಿಡುಗಡೆ ಮಾಡಿದ್ದರೂ ಸಹ ಯಾವುದೇ ಪ್ರಚಾರ ಮಾಡಿಲ್ಲ. ಪ್ರಚಾರ ಮಾಡದೇ ಇರುವ ಕಾರಣಕ್ಕೆ ಚಿತ್ರಮಂದಿರಗಳು ಖಾಲಿ ಇವೆ. ಮಾಧ್ಯಮದವರು, ಡಿಜಿಟಲ್ ಮೀಡಿಯಾದವರು ಬಂದು ಖಾಲಿ ಚಿತ್ರಮಂದಿರದ ವಿಡಿಯೋ ತೆಗೆದುಕೊಂಡು ಹೋಗಿದ್ದಾರೆ. ಮುಂದಿನ ಶೋಗೂ ಹಾಗೆ ಆಗಲಿದೆ. ದರ್ಶನ್​ಗೆ ಕೆಟ್ಟ ಹೆಸರು ತರಲೆಂದೇ ಹೀಗೆ ಮಾಡಲಾಗುತ್ತಿದೆ’ ಎಂದು ಆಕ್ರೋಶ ಹೊರಹಾಕಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Fri, 22 November 24