ಧ್ರುವ ಸರ್ಜಾ ‘ದುಬಾರಿ’ ಆಲೋಚನೆ ಸದ್ಯಕ್ಕೆ ಕೈಬಿಟ್ಟ ನಿರ್ಮಾಪಕರು; ಚಿತ್ರದಿಂದ ಹೊರನಡೆದ ನಿರ್ದೇಶಕ ನಂದ ಕಿಶೋರ್?
ಚಿತ್ರದ ಬಹುತೇಕ ಶೂಟಿಂಗ್ ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆಯಲಿದೆ. ಸದ್ಯ, ಕೊವಿಡ್ ಇರುವುದರಿಂದ, ಬೇರೆ ರಾಷ್ಟ್ರಕ್ಕೆ ತೆರಳೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಿನಿಮಾ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
‘ಪೊಗರು’ ಸಿನಿಮಾ ತೆರೆಕಂಡ ನಂತರದಲ್ಲಿ ಧ್ರುವ ಸರ್ಜಾ ‘ದುಬಾರಿ’ ಸಿನಿಮಾ ಸೆಟ್ ಸೇರಿಕೊಳ್ಳಬೇಕಿತ್ತು. ಆದರೆ, ಮುಹೂರ್ತ ನಡೆದಿದ್ದು ಬಿಟ್ಟರೆ ಈ ಚಿತ್ರದ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಇತ್ತೀಚೆಗೆ ಚಿತ್ರದ ನಿರ್ದೇಶಕ ನಂದ ಕಿಶೋರ್ ಈ ಪ್ರಾಜೆಕ್ಟ್ನಿಂದ ಹೊರ ಬಂದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈಗ ಈ ಎಲ್ಲಾ ವಿಚಾರಗಳಿಗೆ ಸಿನಿಮಾ ನಿರ್ಮಾಪಕ ಉದಯ್ ಕೆ . ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.
ಆಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಉದಯ್, ‘ನಂದಕಿಶೋರ್ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವುದು ಸುಳ್ಳು. ನಂದ ಕಿಶೋರ್ ಅವರೇ ‘ದುಬಾರಿ’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಆದರೆ, ಸಿನಿಮಾವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಅಷ್ಟೇ’ ಎಂದಿದ್ದಾರೆ.
ಹಾಗಾದರೆ ಸಿನಿಮಾ ನಿಲ್ಲಲು ಕಾರಣ? ಹೆಸರಿಗೆ ತಕ್ಕಂತೆ ಇದು ದೊಡ್ಡ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಚಿತ್ರದ ಬಹುತೇಕ ಶೂಟಿಂಗ್ ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆಯಲಿದೆ. ಸದ್ಯ, ಕೊವಿಡ್ ಇರುವುದರಿಂದ, ಬೇರೆ ರಾಷ್ಟ್ರಕ್ಕೆ ತೆರಳೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಿನಿಮಾ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಈ ವಿಚಾರ ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಳ್ಳುವಂತಿಲ್ಲ. ಏಕೆಂದರೆ, ಒಂದು ಗುಡ್ ನ್ಯೂಸ್ ಕೂಡ ಇದೆ. ಇದೇ ಸಮಯದಲ್ಲಿ ಹೊಸ ಸ್ಕ್ರಿಪ್ಟ್ ಒಂದನ್ನು ಸಿದ್ಧಪಡಿಸಲಾಗುತ್ತಿದ್ದು, ಧ್ರುವ ಅವರೇ ಚಿತ್ರದಲ್ಲಿ ಲೀಡ್ ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.
ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾಗೆ ಧ್ರುವ ನಾಯಕ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಈ ಪ್ರಾಜೆಕ್ಟ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಈವರೆಗೆ ಹೊರಬಿದ್ದಿಲ್ಲ. ಫೆಬ್ರವರಿ ತಿಂಗಳಲ್ಲಿ ಪೊಗರು ಸಿನಿಮಾ ತೆರೆಗೆ ಬಂದಿತ್ತು. ಮೊದಲ ಮೂರು ದಿನಕ್ಕೆ ಈ ಚಿತ್ರ 30 ಕೋಟಿ ರೂ. ಕಲೆಕ್ಷನ್ ಮಾಡಿತು. 6 ದಿನಗಳಲ್ಲಿ 46 ಕೋಟಿ ರೂ. ಗಳಿಸಿರುವ ಬಗ್ಗೆ ಮಾಹಿತಿ ಕೇಳಿಬಂದಿತ್ತು. ಒಟ್ಟಾರೆಯಾಗಿ ಈ ಚಿತ್ರಕ್ಕೆ 50 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಈ ಚಿತ್ರ ತೆರೆಕಂಡಿತ್ತು. ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು.
ಇದನ್ನೂ ಓದಿ: Dhruva Sarja : ಧ್ರುವ ಸರ್ಜಾ ಬೌನ್ಸರ್ಗೆ ಹಿಗ್ಗಾಮುಗ್ಗ ತರಾಟೆ, ನೂಕುನುಗ್ಗಲು ಜಟಾಪಟಿ