
ಹಿರಿಯ ನಟ ದಿನೇಶ್ (Dinesh) ಮಂಗಳೂರು ಅವರು ನಿಧನ ಹೊಂದಿದ್ದಾರೆ. ಕರಾವಳಿ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದ ಅವರು ನಮ್ಮ ಜೊತೆ ಇಲ್ಲವಾಗಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಉಂಟಾದ ದೊಡ್ಡ ನಷ್ಟ. ದಿನೇಶ್ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಹಾಗಾದರೆ ದಿನೇಶ್ ಅವರು ನಿಧನಕ್ಕೂ ಮೊದಲು ಏನೆಲ್ಲ ಸಮಸ್ಯೆ ಎದುರಿಸಿದ್ದರು? ಅವರಿಗೆ ಇದ್ದ ಸಮಸ್ಯೆ ಏನು ಎಂಬಿತ್ಯಾದಿ ಪ್ರಶ್ನೆಗೆ ಅವರ ಮಗ ಸಜನ್ ಪ್ರತಿಕ್ರಿಯೆ ನೀಡಿದ್ದಾರೆ.
‘ತಂದೆಗೆ ವರ್ಷದ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಗಸ್ಟ್ 6ರಂದು ಅಸ್ಪತ್ರೆಗೆ ದಾಖಲು ಮಾಡಿದ್ದೆವು. ಸ್ವಲ್ಪ ದಿನದ ಬಳಿಕ ಚೇತರಿಸಿಕೊಂಡಿದ್ದರು. ವಾರದ ಹಿಂದೆ ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು (ಆಗಸ್ಟ್ 25) ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ’ ಎಂದು ಅವರು ವಿವರ ನೀಡಿದ್ದಾರೆ.
‘ಕಾಂತಾರ’ ಸಿನಿಮಾದಲ್ಲಿ ದಿನೇಶ್ ನಟಿಸಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಜನ್ ಸ್ಪಷ್ಟನೆ ನೀಡಿದ್ದಾರೆ. ‘ಆ ದಿನಗಳು ಚಿತ್ರದಿಂದ ನನ್ನ ತಂದೆ ನಟನೆ ಆರಂಭಿಸಿದರು. ಅದರ ಬಳಿಕ ರಿಕ್ಕಿ, ಉಳಿದವರು ಕಂಡಂತೆ, ಕೆಜಿಎಫ್ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದಾರೆ. ಕಾಂತಾರ ಚಿತ್ರದಲ್ಲಿ ನಟನೆ ಮಾಡಿಲ್ಲ. ಕಾಂತಾರ ಸೆಟ್ಗೂ ಹೋಗಲಿಲ್ಲ’ ಎಂದು ಅವರು ಹೇಳಿದ್ದಾರೆ. ದಿನೇಶ್ ಅವರ ಬೆಂಗಳೂರಿನ ಮನೆಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಆಗಸ್ಟ್ 26ರ ಮಧ್ಯಾಹ್ನದವರೆಗೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕುಂದಾಪುರದ ಸರ್ಜನ್ ಆಸ್ಪತ್ರೆಯಲ್ಲಿ ದಿನೇಶ್ ನಿಧನ ಹೊಂದಿದ್ದಾರೆ. ಸರ್ಜನ್ ಆಸ್ಪತ್ರೆಯ ಮುಖ್ಯಸ್ಥ ಡಾ. ವಿಶ್ವೇಶ್ವರ ರಾವ್ ಹೇಳಿಕೆ ನೀಡಿದ್ದಾರೆ. ‘ನಟ ದಿನೇಶ್ ಮಂಗಳೂರು ಅವರಿಗೆ 2012ರಿಂದ ಅನಾರೋಗ್ಯ ಇತ್ತು. ಗ್ಯಾಂಗ್ರಿನ್ ಆಗಿ ಬೆರಳುಗಳನ್ನು ಕಟ್ ಮಾಡಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಕಾಪಾಡಿಕೊಂಡಿದ್ದರು’ ಎಂದಿದ್ದಾರೆ ವಿಶ್ವೇಶ್ವರ್ ರಾವ್.
ಇದನ್ನೂ ಓದಿ: ದಿನೇಶ್ಗಾಗಿ ಮಂಗಳೂರು ಮೀನಿನ ಅಡುಗೆ ಮಾಡಿಸಿದ್ದ ಅಣ್ಣಾವ್ರು
‘ವರ್ಷದ ಹಿಂದೆ ದಿನೇಶ್ಗೆ ಸ್ಟ್ರೋಕ್ ಆಗಿತ್ತು. ದೇಹದ ಒಂದು ಭಾಗ ಕಾರ್ಯ ನಿರ್ವಹಿಸುವುದು ಸ್ಥಗಿತಗೊಳಿಸಿತ್ತು. ಫಿಜಿಯೋಥೆರಪಿ ಮಾಡಲಾಗುತ್ತಿತ್ತು. ಇತ್ತೀಚಿಗೆ ಅವರಿಗೆ ಮತ್ತೊಮ್ಮೆ ಬ್ರೈನ್ ಹ್ಯಾಮರೇಜ್ ಉಂಟಾಯಿತು. ಮೆದುಳಿನಲ್ಲಿ ರಕ್ತನಾಳ ಒಡೆದ ಕಾರಣ ಬಹು ಅಂಗಾಂಗ ವೈಫಲ್ಯ ಉಂಟಾಯಿತು. ಅವರು ಬಿಪಿ, ಡಯಾಬಿಟಿಸ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೊನೆಯದಾಗಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.