ಆಗಸ್ಟ್ 29ಕ್ಕೆ ‘ಅಂದೊಂದಿತ್ತು ಕಾಲ’ ರಿಲೀಸ್: ಹಾಡಿನ ಮೂಲಕ ಮೋಡಿ ಮಾಡಿದ ಸಿನಿಮಾ
ಸಿದ್ ಶ್ರೀರಾಮ್ ಕಂಠದಲ್ಲಿ ಮೂಡಿಬಂದ ‘ಮುಂಗಾರು ಮಳೆಯಲ್ಲಿ..’ ಹಾಡು ಜನಪ್ರಿಯ ಆಗಿದೆ. ಹಾಡಿನ ಮೂಲಕ ‘ಅಂದೊಂದಿತ್ತು ಕಾಲ’ ಸಿನಿಮಾ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡುವಂತಾಗಿದೆ. ವಿನಯ್ ರಾಜ್ಕುಮಾರ್ ಹೀರೋ ಆಗಿ ನಟಿಸಿರುವ ಈ ಸಿನಿಮಾದ ಆಗಸ್ಟ್ 29ರಂದು ತೆರೆಕಾಣಲಿದೆ. ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ..

ನಟ ವಿನಯ್ ರಾಜ್ಕುಮಾರ್ (Vinay Rajkumar) ಹಾಗೂ ನಟಿ ಅದಿತಿ ಪ್ರಭುದೇವ ಅವರು ‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಕೀರ್ತಿ ಕೃಷ್ಣ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ಆಗಸ್ಟ್ 29ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ‘ಭುವನ್ ಸಿನಿಮಾಸ್’ ಮೂಲಕ ಭುವನ್ ಸುರೇಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಕೀರ್ತಿ ಕೃಷ್ಣ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹಾಡುಗಳ ಮೂಲಕ ಈ ಸಿನಿಮಾ ಈಗಾಗಲೇ ಸದ್ದು ಮಾಡಿದೆ. ಪ್ರತಿ ಹಾಡು ಕೂಡ ಭಿನ್ನವಾಗಿ ಮೂಡಿಬಂದಿದ್ದು. ರಾಘವೇಂದ್ರ ವಿ. ಅವರು ‘ಅಂದೊಂದಿತ್ತು ಕಾಲ’ (Andondittu Kaala) ಸಿನಿಮಾಗೆ ಸಂಗೀತ ನೀಡಿದ್ದಾರೆ.
ಧನಂಜಯ್ ರಂಜನ್ ಸಾಹಿತ್ಯದಲ್ಲಿ ಮೂಡಿಬಂದ ‘ಮುಂಗಾರು ಮಳೆಯಲ್ಲಿ…’ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ. ಆ ಮೂಲಕ ‘ಅಂದೊಂದಿತ್ತು ಕಾಲ’ ಸಿನಿಮಾದ ಮೇಲೆ ನಿರೀಕ್ಷೆ ಮೂಡಿಸಿದೆ. ಗಾಯಕ ಸಿದ್ ಶ್ರೀರಾಮ್ ಧ್ವನಿ ನೀಡಿರುವ ಈ ಹಾಡಿಗೆ ಕೇಳುಗರು ಫಿದಾ ಆಗಿದ್ದಾರೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆಯಲು ಈ ಹಾಡು ಆಹ್ವಾನದ ರೀತಿ ಇದೆ.
ಹಾಡುಗಳ ರೀತಿಯೇ ‘ಅಂದೊಂದಿತ್ತು ಕಾಲ’ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಸಹ ಬಹಳಷ್ಟು ನಿರೀಕ್ಷೆ ಹುಟ್ಟಲು ಕಾರಣ ಆಗಿದೆ. ಈ ಸಿನಿಮಾದಲ್ಲಿ ವಿನಯ್ ರಾಜ್ಕುಮಾರ್ ಅವರು 2 ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ವೃತ್ತಿಜೀವನದ ಡಿಫರೆಂಟ್ ಸಿನಿಮಾ ಇದಾಗಲಿದೆ ಎಂದು ಚಿತ್ರತಂಡ ಹೇಳಿದೆ. ಇದು ಓರ್ವ ನಿರ್ದೇಶಕನ ಜೀವನದ ಕಹಾನಿ. ನಿರ್ದೇಶಕ ಕೀರ್ತಿ ಅವರು ಜೀವನದಲ್ಲಿ ಅನುಭವಿಸಿದ ಘಟನೆಗಳು ಹಾಗೂ ಅವರ ಸ್ನೇಹಿತರ ಅನುಭವಗಳು ಸೇರಿ ಈ ಸಿನಿಮಾ ಆಗಿದೆ.
ನಟಿ ಅದಿತಿ ಪ್ರಭುದೇವ ಅವರು ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ‘ನಿರ್ದೇಶಕ ಕೀರ್ತಿ ಹಾಗೂ ನಿರ್ಮಾಪಕ ಸುರೇಶ್ ನನಗೆ ಸುಂದರವಾದ ಪಾತ್ರ ನೀಡಿದ್ದಾರೆ. ಈ ಸಿನಿಮಾದಲ್ಲಿ ನನಗೆ ಕಣ್ಣಲ್ಲೇ ಮಾತಾಡುವ ಪಾತ್ರವಿದೆ. ವಿನಯ್ ಜೊತೆಗೆ ಬಹಳ ಖುಷಿಯಿಂದ ಕೆಲಸ ಮಾಡಿದ್ದೇನೆ. ಸಂಗೀತ ನಿರ್ದೇಶಕ ರಾಘವೇಂದ್ರ ಬಹಳ ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ. ಖಂಡಿತವಾಗಿ ಈ ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.
ಕಿರುತೆರೆಯ ಖ್ಯಾತಿ ನಟಿ ನಿಶಾ ರವಿಕೃಷ್ಣನ್ ಕೂಡ ಒಂದು ಪ್ರಮುಖವಾದ ಪಾತ್ರ ಮಾಡಿದ್ದಾರೆ. ಅತಿಥಿ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಅರುಣಾ ಬಾಲರಾಜ್, ಜಗಪ್ಪ ಮುಂತಾದ ಕಲಾವಿದರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಅಭಿಷೇಕ್ ಕಾಸರಗೋಡು ಅವರು ಛಾಯಾಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ: ಜೊತೆಯಾಗಿ ಫೋಟೋಶೂಟ್ ಮಾಡಿಸಿದ ರಮ್ಯಾ-ವಿನಯ್ ರಾಜ್ಕುಮಾರ್; ಏನಿದು ಹೊಸ ಅಪ್ಡೇಟ್
ಈ ಸಿನಿಮಾದಲ್ಲಿ ಐದು ಹಾಡುಗಳಿವೆ. ಎ.ಆರ್. ಕೃಷ್ಣ, ಸುರೇಶ್ ಆರ್ಮುಗಂ ಅವರು ಸಂಕಲನ ಮಾಡಿದ್ದಾರೆ. ರವಿವರ್ಮ ಅವರ ಸಾಹಸ, ರಘು ಆರ್.ಜೆ. ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಕ್ರಿಯೇಟಿವ್ ನಿರ್ಮಾಪಕರಾಗಿ ಶಿವು ಗೌಡ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಲೋಕೇಶ್ ಎನ್. ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




