ಸದ್ಯಕ್ಕೆ ನಟ ದರ್ಶನ್ ತೂಗುದೀಪ ಅವರು ಕಾನೂನಿನ ಸಂಕಷ್ಟ ಎದುರಿಸುತ್ತಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಹತ್ಯೆ ಮಾಡಿದ ಆರೋಪ ದರ್ಶನ್ ಮೇಲಿದೆ. ಈ ಕೇಸ್ನಲ್ಲಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ದರ್ಶನ್ ಅರೆಸ್ಟ್ ಆದ ಬಳಿಕ ಅವರ ಕುಟುಂಬದ ಬಗೆಗಿನ ಅನೇಕ ವಿಚಾರಗಳು ಬಹಿರಂಗ ಆಗಿವೆ. ತಾಯಿ ಮತ್ತು ಸಹೋದರನ ಜೊತೆ ದರ್ಶನ್ ಅವರು ಜಗಳ ಮಾಡಿಕೊಂಡು ದೂರಾಗಿದ್ದಾರೆ ಎಂಬ ಮಾಹಿತಿ ಕೂಡ ಕೇಳಿಬಂದಿದೆ. ಇದರ ಕುರಿತಂತೆ ನಿರ್ದೇಶಕ ಎಚ್. ವಾಸು ಮಾತನಾಡಿದ್ದಾರೆ.
‘ತುಂಬ ಚೆನ್ನಾಗಿ ಓಡುವ ಕುದುರೆ ಇನ್ನೂ ಚೆನ್ನಾಗಿ ಓಡಲಿ ಅಂತ ಚಾಟಿ ಏಟು ನೀಡುತ್ತಾರೆ. ಚೆನ್ನಾಗಿ ಹಣ್ಣು ಬಿಡುವ ಮರಕ್ಕೆ ಜನರು ಕಲ್ಲು ಹೊಡೆಯುತ್ತಾರೆ. ಹಾಗಾಗಿ ಜನರು ದರ್ಶನ್ ಬಗ್ಗೆ ಮಾತನಾಡುತ್ತಿದ್ದಾರೆ. ತಾಯಿಗೆ ಕ್ಯಾನ್ಸರ್ ಆದಾಗ ದರ್ಶನ್ ಅವರು ಹುಡುಗರನ್ನು ಇಟ್ಟಿದ್ದರು. ಗಂಡ ಕಟ್ಟಿಸಿದ ಮೈಸೂರಿನ ಮನೆಯಲ್ಲೇ ಇರುತ್ತೇನೆ ಅಂತ ತಾಯಿ ಹೇಳಿದ್ದಾರೆ. ಹಾಗಾಗಿ ಅವರು ಮೈಸೂರಿನಲ್ಲಿ ಇದ್ದಾರೆ’ ಎಂದು ಎಚ್. ವಾಸು ಹೇಳಿದ್ದಾರೆ.
ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ಬಾಡಿಗೆ ಮನೆಯಲ್ಲಿ ಇದ್ದಾರೆ ಎಂಬ ವಿಚಾರದ ಬಗ್ಗೆಯೂ ಎಚ್. ವಾಸು ಪ್ರತಿಕ್ರಿಯೆ ನೀಡಿದ್ದಾರೆ. ‘ದಿನಕರ್ ಅವರು ಚೆನ್ನಾಗಿಯೇ ಇದ್ದಾರೆ. ಅವರದ್ದು ಒಂದು ಪಾಲಿಸಿ ಇದೆ. ತಮ್ಮದೇ ಸ್ವಂತ ದುಡ್ಡಿನಲ್ಲಿ ಮನೆ ಕಟ್ಟಬೇಕು ಎಂಬ ಉದ್ದೇಶ ಅವರಿಗೆ ಇದೆ. ಒಂದು ಮಾತು ಹೇಳಿದರೆ ದಿನಕರ್ಗೆ ಮನೆ ಕೊಡಿಸೋಕೆ ದರ್ಶನ್ಗೆ ಆಗಲ್ವಾ? ದಿನಕರ್ ಅವರು ಸೈಟ್ ತೆಗೆದುಕೊಂಡು ಮನೆ ಕಟ್ಟುತ್ತಿದ್ದಾರೆ. ತುಂಬ ಬಡತನದಲ್ಲಿ ಅವರು ಇಲ್ಲ. ಹೀರೋ ತಮ್ಮ ಹೇಗೆ ಇರಬೇಕೋ ಹಾಗೆಯೇ ಇದ್ದಾರೆ’ ಎಂದಿದ್ದಾರೆ ಎಚ್. ವಾಸು.
ಇದನ್ನೂ ಓದಿ: ದರ್ಶನ್ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ ರಾಮಣ್ಣ
‘ಮನುಷ್ಯ ಒಂದು ತಪ್ಪು ಮಾಡಿದ ತಕ್ಷಣ ಒಂದಕ್ಕೊಂದು ಲಿಂಕ್ ಆಗುತ್ತದೆ. ಅದು ಸಹಜ. ಎಲ್ಲರೂ ಮಾತನಾಡುತ್ತಾರೆ. ಚೆನ್ನಾಗಿದ್ದಾಗ ಯಾರೂ ಆ ವಿಚಾರಗಳ ಬಗ್ಗೆ ಮಾತನಾಡುವುದೇ ಇಲ್ಲ. ತಾವು ಕಷ್ಟದಲ್ಲಿ ಇರುವ ಬಗ್ಗೆ, ಮನೆ ಇಲ್ಲ ಎಂಬ ಬಗ್ಗೆ ಯಾವ ವಾಹಿನಿಗೂ ಹೋಗಿ ದಿನಕರ್ ಹೇಳಿಲ್ಲ. ಅವರು ಕೂಡ ಒಳ್ಳೊಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಅವರು ಸಹ ದುಡ್ಡು ಮಾಡಿದ್ದಾರೆ. ಅಣ್ಣ-ತಮ್ಮನ ಹೊಂದಾಣಿಕೆ ಯಾವ ರೀತಿ ಇದೆಯೋ ಅವರಿಗೆ ಗೊತ್ತು. ಒಮ್ಮೆ ಜಗಳ ಆಡಬಹುದು. ಆದರೆ ಆಮೇಲೆ ಒಟ್ಟಿಗೆ ಸೇರುತ್ತಾರೆ’ ಎಂದು ಎಚ್ ವಾಸು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:51 pm, Wed, 26 June 24