ಜಗಳವಾಡುತ್ತಲೇ ಲವ್ ಮಾಡಿದವರ ಕಥೆ ‘ಜಂಬೂ ಸರ್ಕಸ್’; ಹೇಗಿದೆ ಟ್ರೇಲರ್?
ಪ್ರವೀಣ್ ತೇಜ್, ಅಂಜಲಿ ಅನೀಶ್, ಅಚ್ಚುತ್ ಕುಮಾರ್, ಲಕ್ಷ್ಮೀ ಸಿದ್ದಯ್ಯ, ಸ್ವಾತಿ, ಅವಿನಾಶ್, ರವಿಶಂಕರ್ ಗೌಡ ಅವರು ‘ಜಂಬೂ ಸರ್ಕಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಎಂ.ಡಿ. ಶ್ರೀಧರ್ ಅವರು ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ಟ್ರೇಲರ್ ಮೂಲಕ ‘ಜಂಬೂ ಸರ್ಕಸ್’ ಬಗ್ಗೆ ನಿರೀಕ್ಷೆ ಮೂಡಿಸಲಾಗಿದೆ.
ಹಿಟ್ ಸಿನಿಮಾಗಳ ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ಈಗ್ ‘ಜಂಬೂ ಸರ್ಕಸ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕಥೆ ಮತ್ತು ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ. ಈ ಸಿನಿಮಾದಲ್ಲಿ ಪ್ರವೀಣ್ ತೇಜ್ ಮತ್ತು ಅಂಜಲಿ ಎಸ್. ಅನೀಶ್ ಅವರು ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ಕಳೆದ 3 ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹೆಚ್.ಸಿ. ಸುರೇಶ್ ಅವರು ‘ಮಹತಿ ಕಂಬೈನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿ ಅವರು ಕೂಡ ನಿರ್ಮಾಪಕಿಯಾಗಿ ಕೈಜೋಡಿಸಿದ್ದಾರೆ. ಈಗ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸುಪ್ರೀತಾ ಶೆಟ್ಟಿ, ಅಂಜಲಿ ಅನೀಶ್ ಮತ್ತು ನಯನಾ ಅವರು ಈ ಟ್ರೇಲರ್ ಬಿಡುಗಡೆ ಮಾಡಿದ್ದು ವಿಶೇಷ.
ಸ್ನೇಹ ಮತ್ತು ಪ್ರೀತಿಯ ಸುತ್ತ ನಡೆಯುವ ಕಥಾಹಂದರ ‘ಜಂಬೂ ಸರ್ಕಸ್’ ಸಿನಿಮಾದಲ್ಲಿ ಇದೆ ಎಂಬುದನ್ನು ಟ್ರೇಲರ್ ಹೇಳುತ್ತಿದೆ. ಈ ಬಗ್ಗೆ ನಿರ್ದೇಶಕ ಎಂ.ಡಿ. ಶ್ರೀಧರ್ ಮಾತನಾಡಿದರು. ‘ಆತ್ಮೀಯ ಗೆಳೆಯರಿಬ್ಬರು ತುಂಬಾ ಚೆನ್ನಾಗಿ ಬದುಕುತ್ತಾರೆ. ಆದರೆ ಅವರ ಹೆಂಡತಿಯರು ಜಡೆ ಜಗಳು ಶುರು ಮಾಡುತ್ತಾರೆ. ಹಾಗಾದರೆ ಅವರ ಮಕ್ಕಳ ಭವಿಷ್ಯ ಏನಾಗಲಿದೆ? ಅವರು ಕೂಡ ಜಗಳದಲ್ಲೇ ದಿನ ಕಳೆಯುತ್ತಾರೆ. ಆಮೇಲೆ ಅವರಿಬ್ಬರ ನಡುವೆ ಪ್ರೀತಿ ಸಿಗುರುತ್ತದೆ. ಈ ಜರ್ನಿಯಲ್ಲಿ ಆಗುವ ಫನ್ನಿ ಸಂಗತಿಗಳೇ ಪ್ರೇಕ್ಷಕರಿಗೆ ಮನರಂಜನೆ ನೀಡಲಿವೆ’ ಎಂದು ಅವರು ಹೇಳಿದ್ದಾರೆ.
‘ಯಾವಾಗಲೂ ಕಚ್ಚಾಡುತ್ತಾ ಬೆಳೆದ ನಾಯಕ-ನಾಯಕಿ ನಡುವೆ ಪ್ರೀತಿ ಮೂಡುತ್ತದೆ. ಅದನ್ನು ಕಾಮಿಡಿಯಾಗಿ ತೋರಿಸಿದ್ದೇವೆ. ನಮ್ಮ ಸಿನಿಮಾ ಈಗ ರಿಲೀಸ್ ಹಂತಕ್ಕೆ ಬಂದಿದೆ. ಸೆಪ್ಟೆಂಬರ್ 3ನೇ ವಾರ ಅಥವಾ ಕೊನೆವಾರ ರಿಲೀಸ್ ಮಾಡುವ ಆಲೋಚನೆ ಇದೆ. ಕವಿರಾಜ್ ಬರೆದಿರುವ 2 ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಚೆಲ್ಲಾಟ ಸಿನಿಮಾದಿಂದಲೂ ಅವರು ನನ್ನೊಂದಿಗೆ ಇದ್ದಾರೆ’ ಎಂದಿದ್ದಾರೆ ಎಂ.ಡಿ. ಶ್ರೀಧರ್.
ಈ ಸಿನಿಮಾದಲ್ಲಿ ಅಂಜಲಿ ಅನೀಶ್ ಅವರು ಬಜಾರಿ ಹುಡುಗಿಯ ಪಾತ್ರ ಮಾಡಿದ್ದಾರೆ. ‘ಈ ಸಿನಿಮಾ ಎಲ್ಲರಿಗೂ ಇಷ್ಟ ಆಗಲಿದೆ’ ಎಂದು ಅಂಜಲಿ ಹೇಳಿದ್ದಾರೆ. ಗೀತರಚನಕಾರ ಕವಿರಾಜ್ ಮಾತನಾಡಿ, ‘ನಿರ್ದೇಶಕ ಶ್ರೀಧರ್ ಅವರಲ್ಲಿ ಬೇರೆಯದೇ ರೀತಿ ಕಾಮಿಡಿ ಸೆನ್ಸ್ ಇದೆ. ಪ್ರವೀಣ್ ತೇಜ್ ಅವರು ಭರವಸೆಯ ನಾಯಕನಾಗುತ್ತಾರೆ. ನಿರ್ಮಾಪಕರು ತೀರ್ಥಹಳ್ಳಿ ಕಡೆಯವರು. ಪ್ರೀತಿಯಿಂದ ಮಾಡಿದ ಈ ಸಿನಿಮಾ ಹಿಟ್ ಆಗಬೇಕು’ ಎಂದಿದ್ದಾರೆ. ಈ ಸಿನಿಮಾಗೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲೂ ‘ಹೇಮಾ ಸಮಿತಿ’ ರೀತಿ ವರದಿ ಬೇಕು ಎಂಬ ಮಾತಿಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಅಚ್ಚುತ್ ಕುಮಾರ್, ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅವಿನಾಶ್, ರವಿಶಂಕರ್ ಗೌಡ ಅವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎ.ವಿ. ಕೃಷ್ಣಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಕವಿರಾಜ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:33 pm, Fri, 6 September 24