
ಕನ್ನಡ ಚಿತ್ರರಂಗದ ಯಶಸ್ವಿ ಮತ್ತು ಜನಪ್ರಿಯ ನಿರ್ದೇಶಕ ಪವನ್ ಒಡೆಯರ್ ಕುಟುಂಬಕ್ಕೆ ಭರಿಸಲಾಗದ ದುಃಖ ಎದುರಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ತಾಯಿ ಗೀತಾ ಒಡೆಯರ್ (73) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಗೀತಾ ಆರೋಗ್ಯ ತುಂಬಾನೇ ಹದಗೆಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ತಾಯಿಯನ್ನು ಪವನ್ ಒಡೆಯರ್ ಬೆಂಗಳೂರಿನಲ್ಲೇ ಇರಿಸಿಕೊಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತ ಗೀತಾ ಒಡೆಯರ್ ಅವರು ಕಳೆದ ಕೆಲವು ಸಮಯದಿಂದ ಮಲ್ಟಿಪಲ್ ಮೈಲೋಮ (ಒಂದು ರೀತಿಯ ರಕ್ತದ ಕ್ಯಾನ್ಸರ್) ಮತ್ತು ಜಿಬಿ ಸಿಂಡ್ರೋಮ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸದ್ಯ ಮೃತರ ಪಾರ್ಥಿವ ಶರೀರವನ್ನು ಅವರ ಸ್ವಂತ ಊರಾದ ಕುಣಿಗಲ್‌ಗೆ ಕೊಂಡೊಯ್ಯಲಾಗಿದೆ. ಇಂದು (ಜೂನ್ 17) ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕುಣಿಗಲ್‌ನಲ್ಲಿಯೇ ಅಂತ್ಯಕ್ರಿಯೆ ನೆರವೇರಲಿದೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಪವನ್ ಒಡೆಯರ್ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಯುವ ನಿರ್ದೇಶಕರಲ್ಲಿ ಪವನ್ ಒಡೆಯರ್ ಪ್ರಮುಖರು. 2012ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕೋಮಲ್ ನಟನೆಯ ಸೂಪರ್ ಹಿಟ್ ‘ಗೋವಿಂದಾಯ ನಮಃ’ ಚಿತ್ರದ ಮೂಲಕ ಪವನ್ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ‘ಪ್ಯಾರ್ಗೇ ಆಗ್ಬಿಟ್ಟೈತೆ’ ಹಾಡು ಟ್ರೆಂಡ್ ಆಗಿತ್ತು. ಇದಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಗೂಗ್ಲಿ’ ನಿರ್ದೇಶನ ಮಾಡಿ ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿದರು.
ನಂತರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ‘ರಣವಿಕ್ರಮ’ ಮತ್ತು ‘ನಟಸಾರ್ವಭೌಮ’ದಂತಹ ಸಾಹಸ ಪ್ರಧಾನ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇವರದ್ದಾಗಿದೆ. ಸದ್ಯ ಕೇವಲ ನಿರ್ದೇಶನ ಮಾತ್ರವಲ್ಲದೆ ಒಡೆಯರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೆವಿಎನ್ ಪ್ರೊಡಕ್ಷನ್ಸ್ ಜತೆ ಶಿವರಾಜ್ಕುಮಾರ್ ಹೊಸ ಸಿನಿಮಾ; ಪವನ್ ಒಡೆಯರ್ ನಿರ್ದೇಶನ
ಜೂನ್ 16ರಂದು ಸ್ಯಾಂಡಲ್‌ವುಡ್‌ನ ಸ್ಟಾರ್ ಸಹೋದರರಾದ ಶ್ರೀಮುರಳಿ ಮತ್ತು ವಿಜಯ್ ರಾಘವೇಂದ್ರ ಅವರ ತಾಯಿ, ಹಿರಿಯ ನಿರ್ಮಾಪಕ ಚಿನ್ನೇಗೌಡರ ಧರ್ಮಪತ್ನಿ ಜಯಮ್ಮ ಅವರು ನಿಧನರಾಗಿದ್ದರು. ಜಯಮ್ಮ ಅವರ ಅಗಲಿಕೆಯ ಆಘಾತದಿಂದ ಚಿತ್ರರಂಗ ಇನ್ನು ಹೊರಬರುವ ಮುನ್ನವೇ, ಈಗ ನಿರ್ದೇಶಕ ಪವನ್ ಒಡೆಯರ್ ಅವರ ತಾಯಿ ಗೀತಾ ಒಡೆಯರ್ ಇಹಲೋಕ ತ್ಯಜಿಸಿರುವುದು ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಶೋಕದ ಛಾಯೆ ಆವರಿಸುವಂತೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Wed, 17 June 26