ಕೆವಿಎನ್ ಪ್ರೊಡಕ್ಷನ್ಸ್ ಜತೆ ಶಿವರಾಜ್‌ಕುಮಾರ್ ಹೊಸ ಸಿನಿಮಾ; ಪವನ್ ಒಡೆಯರ್ ನಿರ್ದೇಶನ
ನಿರ್ದೇಶಕ ಪವನ್ ಒಡೆಯರ್ ಅವರು ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್’ ಸಂಸ್ಥೆ ಕೂಡ ಮೊದಲ ಬಾರಿಗೆ ಶಿವಣ್ಣನ ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿದೆ. ಸೆ.3ರಂದು ಈ ಚಿತ್ರಕ್ಕೆ ಶೂಟಿಂಗ್ ಶುರುವಾಗಲಿದೆ. ಹಲವು ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಯಶ್ ನಟನೆಯ ‘ಟಾಕ್ಸಿಕ್’, ಧ್ರುವ ಸರ್ಜಾ ನಟನೆಯ ‘ಕೆಡಿ’, ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸೇರಿ ಹಲವು ಬಹುನಿರೀಕ್ಷಿತ ಸಿನಿಮಾಗಳನ್ನು ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇತ್ತೀಚೆಗೆ ಈ ಸಂಸ್ಥೆ ತೆಲುಗು ಚಿತ್ರರಂಗಕ್ಕೂ ಎಂಟ್ರಿ ನೀಡಿತು. ಈಗ ನಟ ಶಿವರಾಜ್‌ಕುಮಾರ್ (Shivarajkumar) ಜೊತೆ ಸಿನಿಮಾ ಮಾಡಲು ‘ಕೆವಿಎನ್ ಪ್ರೊಡಕ್ಷನ್ಸ್’ ಮುಂದಾಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಪವನ್ ಒಡೆಯರ್ (Pavan Wadeyar) ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾಗೆ ಸ್ಕ್ರಿಪ್ಟ್ ಪೂಜೆ ಮಾಡಲಾಯಿತು.
ನಿರ್ದೇಶಕ ಪವನ್ ಒಡೆಯರ್ ಅವರು ಪುನೀತ್ ರಾಜ್‌ಕುಮಾರ್ ಜೊತೆ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ಈಗ ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ಜೊತೆ ಸಿನಿಮಾ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ. ಸೆಪ್ಟೆಂಬರ್ 3ರಂದು ಈ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ನಿರ್ದೇಶನ ಮಾಡುವುದರ ಜೊತೆಗೆ ಪವನ್ ಒಡೆಯರ್ ಅವರು ನಿರ್ಮಾಣದಲ್ಲೂ ಕೈ ಜೋಡಿಸುತ್ತಿದ್ದಾರೆ.
ವೆಂಕಟ್ ಕೊನಂಕಿ ಅವರ ‘ಕೆವಿಎನ್ ಪ್ರೊಡಕ್ಷನ್ಸ್’ ಮತ್ತು ಪವನ್ ಒಡೆಯರ್ ಅವರ ‘ಒಡೆಯರ್ ಮೂವೀಸ್’ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿವೆ. ದೇಶದ ಹಲವು ಭಾಗಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ನಡೆಯಲಿದೆ. ಸೆಪ್ಟೆಂಬರ್ 3ರಂದು ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಶುರು ಆಗಲಿದೆ. ನಂತರ ಮಂಡ್ಯ , ಮುಂಬೈ, ಹೈದರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಇದು ಒಂದು ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಸಿನಿಮಾ ಆಗಿರಲಿದೆ ಎಂದು ಚಿತ್ರತಂಡ ಹೇಳಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ನಾರಾಯಣ್ ಅವರು ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ , ಪವನ್ ಒಡೆಯರ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಕಾಂಬಿನೇಷನ್ ಆದ್ದರಿಂದ ನಿರೀಕ್ಷೆ ಜೋರಾಗಿದೆ.
ಇದನ್ನೂ ಓದಿ: ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕೆವಿಎನ್ ಪ್ರೊಡಕ್ಷನ್ಸ್ ಹೊಸ ಸಿನಿಮಾ
ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಜೊತೆ ಹಲವು ಕಲಾವಿದರು ಅಭಿನಯಿಸಲಿದ್ದಾರೆ. ಜಯರಾಮ್, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿ, ಸಾಯಿ ಕುಮಾರ್, ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಇತ್ತೀಚೆಗೆ ನಡೆದ ಸ್ಕ್ರಿಪ್ಟ್ ಪೂಜೆಯಲ್ಲಿ ಚಿತ್ರತಂಡದ ಹಲವರು ಭಾಗಿಯಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




