ಶರವೇಗದಲ್ಲಿ ಕೆವಿಎನ್ ಪ್ರೊಡಕ್ಷನ್, ನಿರ್ಮಿಸುತ್ತಿರುವ ಸಿನಿಮಾಗಳೆಷ್ಟು? ಹಾಕಿರುವ ಬಂಡವಾಳ ಎಷ್ಟು?
KVN Productions: ಕರ್ನಾಟಕದ ಸಿನಿಮಾ ನಿರ್ಮಾಣ ಸಂಸ್ಥೆಗಳು ಈಗ ದೇಶದಾದ್ಯಂತ ಸದ್ದು ಮಾಡುತ್ತಿವೆ. ಬಾಲಿವುಡ್ನ ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ ಠಕ್ಕರ್ ನೀಡುತ್ತಿವೆ. ಕೆಲ ವರ್ಷಗಳ ಹಿಂದಷ್ಟೆ ಸಿನಿಮಾ ನಿರ್ಮಾಣ ಪ್ರಾರಂಭಿಸಿದ ಕರ್ನಾಟಕದ್ದೇ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಸಾವಿರಾರು ಕೋಟಿ ಬಂಡವಾಳವನ್ನು ಸಿನಿಮಾಗಳ ಮೇಲೆ ಹೂಡಿದೆ. ಇಲ್ಲಿದೆ ನೋಡಿ ಮಾಹಿತಿ...

ಸಿನಿಮಾಗಳು ‘ದೊಡ್ಡ ಸಿನಿಮಾ’ ಎನಿಸಿಕೊಳ್ಳುವುದು ಅವುಗಳ ಹಿಂದಿರುವ ನಿರ್ಮಾಣ ಸಂಸ್ಥೆಗಳ ಕಾರಣಕ್ಕೆ. ಕರ್ನಾಟಕದ ಹೊಂಬಾಳೆ ನಿರ್ಮಾಣ ಸಂಸ್ಥೆ ಈಗಾಗಲೇ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳ ಮೂಲಕ ಇಡೀ ದೇಶದಲ್ಲಿ ಸದ್ದು ಮಾಡಿದೆ. ಸಿನಿಮಾ ಪ್ರೇಮಿಗಳಿಗೆ ಕೆಲ ಒಳ್ಳೆಯ ಸಿನಿಮಾಗಳನ್ನು ನೀಡಿದೆ. ಇದೀಗ ಮತ್ತೊಂದು ಕರ್ನಾಟಕದ್ದೇ ನಿರ್ಮಾಣ ಸಂಸ್ಥೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಲವು ಚಿತ್ರರಂಗಗಳಲ್ಲಿ ಆಯಾ ಚಿತ್ರರಂಗದ ಸ್ಟಾರ್ ನಟರುಗಳೊಡನೆ ಸಿನಿಮಾ ಮಾಡುತ್ತಿದೆ.
ಸಿಂಪಲ್ ಸುನಿ ನಿರ್ದೇಶಿಸಿ, ಗಣೇಶ್ ನಟಿಸಿದ್ದ ‘ಸಖತ್’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟ ಕೆವಿಎನ್ ಪ್ರೊಡಕ್ಷನ್ಸ್ ಈಗ ಬರೋಬ್ಬರಿ ಏಳು ದೊಡ್ಡ ಬಜೆಟ್ ಸಿನಿಮಾಗಳನ್ನು ಏಕಕಾಲಕ್ಕೆ ನಿರ್ಮಾಣ ಮಾಡುತ್ತಿದೆ. ಕೆವಿಎನ್ ಪ್ರೊಡಕ್ಷನ್ ಹಿಂದಿರುವ ಶಕ್ತಿ ವೆಂಕಟ್ ಅವರು ತಮ್ಮ ಸಿನಿಮಾ ಪ್ರೀತಿ, ದೂರದೃಷ್ಟಿ ಮತ್ತು ರಿಸ್ಕ್ ತೆಗೆದುಕೊಳ್ಳುವ ಛಾತಿಯಿಂದಾಗಿ ಇಡೀ ಭಾರತೀಯ ಚಿತ್ರರಂಗ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಕೇವಲ ಎರಡು ಸಿನಿಮಾಗಳು ಮಾತ್ರವೇ ಈ ವರೆಗೆ ಬಿಡುಗಡೆ ಆಗಿವೆ. ಆದರೆ ಅವರ ನಿರ್ಮಾಣದ ಬರೋಬ್ಬರಿ ಏಳು ಸಿನಿಮಾಗಳು ಪ್ರಸ್ತುತ ಚಿತ್ರೀಕರಣ ಗೊಳ್ಳುತ್ತಿವೆ. ಈ ಏಳೂ ಸಿನಿಮಾಗಳು ಒಂದಕ್ಕಿಂತಲೂ ಒಂದು ದೊಡ್ಡ ಸಿನಿಮಾಗಳು. ಏಳೂ ಸಿನಿಮಾಗಳೂ ಸಹ ಸ್ಟಾರ್ ನಟರ ಸಿನಿಮಾಗಳೇ ಆಗಿದ್ದು, ಭಾರಿ ಬಜೆಟ್ನ ಸಿನಿಮಾಗಳು ಇವಾಗಿವೆ.
ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಹಿಂದೆಯೇ ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಕಟ್ಟಕಡೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ಆಗಲಿದೆ. ಈ ಸಿನಿಮಾಕ್ಕೆ ವಿಜಯ್ ಅವರಿಗೆ ದಾಖಲೆ ಮೊತ್ತದ ಸಂಭಾವನೆ ಕೊಟ್ಟಿದ್ದಾರೆ ಕೆವಿಎನ್ ವೆಂಕಟ್. ಇವುಗಳ ಜೊತೆಗೆ ಮಲಯಾಳಂನಲ್ಲಿ ‘ಬಾಲನ್’ ಹೆಸರಿನ ಒಂದು ಸಿನಿಮಾ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ:ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕೆವಿಎನ್ ಪ್ರೊಡಕ್ಷನ್ಸ್ ಹೊಸ ಸಿನಿಮಾ
ಕೆವಿಎನ್ ಅವರು ಕಳೆದ ಒಂದು ವಾರದಲ್ಲಿ ಮೂರು ದೊಡ್ಡ ಬಜೆಟ್ ಸಿನಿಮಾಗಳ ಘೋಷಣೆ ಮಾಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟಿಸಲಿರುವ 157ನೇ ಸಿನಿಮಾಕ್ಕೆ ಕೆವಿಎನ್ ಅವರದ್ದೇ ಬಂಡವಾಳ. ಇನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿ, ಕಾರ್ತಿ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಖೈದಿ’ಯ ಎರಡನೇ ಭಾಗ ‘ಖೈದಿ 2’ ಅನ್ನು ಕೆವಿಎನ್ ಅವರೇ ನಿರ್ಮಾಣ ಮಾಡಲಿದ್ದಾರೆ. ಇನ್ನು ಇತ್ತೀಚೆಗಷ್ಟೆ ಬಾಲಿವುಡ್ಗೂ ಸಹ ಕಾಲಿಟ್ಟಿರುವ ಕೆವಿಎನ್, ಬಾಲಿವುಡ್ನ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹಾಗೂ ಸೈಫ್ ಅಲಿ ಖಾನ್ ಅವರಿಗಾಗಿ ‘ಹೈವಾನ್’ ಹೆಸರಿನ ಸಿನಿಮಾ ಮಾಡುತ್ತಿದೆ. ಇಬ್ಬರು ಸೂಪರ್ ಸ್ಟಾರ್ಗಳನ್ನು ಒಂದೇ ಸಿನಿಮಾನಲ್ಲಿ ಹಾಕಿಕೊಂಡಿದೆ.
ಇದೆಲ್ಲದಕ್ಕೂ ಮುಂಚೆ ನಟ ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾ ಘೋಷಿಸಿ, ಆ ಸಿನಿಮಾವನ್ನು ಹಾಲಿವುಡ್ಡಿಗರೂ ಸಹ ಮೂಗಮೇಲೆ ಬೆರಳಿಡುವಂಥಹಾ ಸಿನಿಮಾ ಮಾಡುತ್ತಿದ್ದಾರೆ. ಕೆವಿಎನ್ ಪ್ರಸ್ತುತ ನಿರ್ಮಿಸುತ್ತಿರುವ ಏಳು ಸಿನಿಮಾಗಳ ಒಟ್ಟು ಬಜೆಟ್ ಸುಮಾರು 1500 ರಿಂದ 1800 ಕೋಟಿ ರೂಪಾಯಿಗಳು ಎನ್ನಲಾಗುತ್ತಿದೆ. ಇಷ್ಟು ದೊಡ್ಡ ಬಂಡವಾಳವನ್ನು ಒಂದೇ ಬಾರಿಗೆ ಹೂಡಿಕೆ ಮಾಡಿರುವ ಇನ್ನೊಂದು ನಿರ್ಮಾಣ ಸಂಸ್ಥೆ ಭಾರತದಲ್ಲಿ ಇನ್ಯಾವುದೂ ಇಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




