ಆರ್.ಪಿ. ಪಟ್ನಾಯಕ್ ಸಂಗೀತದಲ್ಲಿ ‘ನಾನು ಮತ್ತು ಗುಂಡ 2’ ಸಿನಿಮಾದ ಹಾಡು
ಶ್ವಾನಗಳ ಕಥೆ ಇರುವ ಸಿನಿಮಾಗಳೆಂದರೆ ಪ್ರಾಣಿಪ್ರಿಯರಿಗೆ ತುಂಬ ಇಷ್ಟ. ಅಂಥ ಸಿನಿಮಾಗಳಿಗೆ ಪ್ರೇಕ್ಷಕರು ಫಿದಾ ಆದ ಉದಾಹರಣೆಗಳು ಸಾಕಷ್ಟಿವೆ. ಈಗ ‘ನಾನು ಮತ್ತು ಗುಂಡ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಚಿತ್ರಕ್ಕೆ ಆರ್.ಪಿ. ಪಟ್ನಾಯಕ್ ಸಂಗೀತ ನೀಡಿದ್ದಾರೆ.

2020ರಲ್ಲಿ ಬಂದ ‘ನಾನು ಮತ್ತು ಗುಂಡ’ (Naanu Matthu Gunda) ಸಿನಿಮಾ ಜನರ ಮೆಚ್ಚುಗೆ ಪಡೆದಿತ್ತು. ನಾಯಿ ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಆ ಸಿನಿಮಾ ವಿವರಿಸಿತ್ತು. ನಟ ಶಿವರಾಜ್ ಕೆ.ಆರ್. ಪೇಟೆ ನಾಯಕನಾಗಿ ನಟಿಸಿದ ಆ ಸಿನಿಮಾಗೆ ರಘು ಹಾಸನ್ ಅವರು ನಿರ್ದೇಶನ ಮಾಡಿದ್ದರು. ಈಗ ಆ ಕಥೆಯ ಮುಂದುವರಿದ ಭಾಗವಾಗಿ ‘ನಾನು ಮತ್ತು ಗುಂಡ 2’ (Naanu Matthu Gunda 2) ಸಿನಿಮಾ ಸಿದ್ಧವಾಗಿದೆ. ರಘು ಹಾಸನ್ ಅವರೇ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ರಾಕೇಶ್ ಅಡಿಗ ಮತ್ತು ರಚನಾ ಇಂದರ್ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಸೆಪ್ಟೆಂಬರ್ 5ರಂದು ‘ನಾನು ಮತ್ತು ಗುಂಡ 2’ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಡಾ. ವಿ. ನಾಗೇಂದ್ರಪ್ರಸಾದ್ ಅವರು ಶಿವನ ಮೇಲೆ ರಚಿಸಿರುವ ಗೀತೆ ಇದೆ. ಅದಕ್ಕೆ ವಿಜಯ್ ಪ್ರಕಾಶ್ ಅವರು ಧ್ವನಿ ನೀಡಿದ್ದಾರೆ. ‘ಓಂ ಶಿವಾಯ, ನಮೋ ಶಿವಾಯ..’ ಎಂಬ ಈ ಹಾಡಿಗೆ ಆರ್.ಪಿ. ಪಟ್ನಾಯಕ್ ಅವರು ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ವೇಳೆ ನಾಗೇಂದ್ರ ಪ್ರಸಾದ್ ಮಾತನಾಡಿದರು. ‘ರಘು ಹಾಸನ್ ಈ ಹಾಡಿನ ಬಗ್ಗೆ ಹೇಳಿದಾಗ ತುಂಬಾ ವಿಷಯಗಳು ಇದರಲ್ಲಿವೆ ಎನಿಸಿತು. ಮನಸಿಗೆ ಇಳಿಯುವಂತಹ ಕಂಟೆಂಟ್ ಈ ಹಾಡಲ್ಲಿ ಇದೆ. ಇದು ಪಕ್ಕಾ ಚಿತ್ರಗೀತೆ. ಸಿನಿಮಾದಲ್ಲಿ ನೋಡಿದಾಗ ಬಹಳ ಇಂಪ್ಯಾಕ್ಟ್ ಆಗುತ್ತದೆ. ಟ್ರೇಲರ್ನಲ್ಲಿ ಎಲ್ಲ ಎಮೋಷನ್ ಹೇಳುವ ಪ್ರಯತ್ನ ಮಾಡಿದ್ದಾರೆ’ ಎಂದು ಅವರು ಹೇಳಿದರು.
ನಿರ್ದೇಶಕ ರಘು ಹಾಸನ್ ಅವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ‘ನಮ್ಮ ಸಿನಿಮಾ ಕೆಲಸ 2022ರಲ್ಲಿ ಪ್ರಾರಂಭವಾಗಿತ್ತು. ಈಗ ಬಿಡುಗಡೆ ಆಗುತ್ತಿದೆ. ಸಂಗೀತ ನಿರ್ದೇಶಕ ಪಟ್ನಾಯಕ್ ಅವರು ಈ ಹಾಡಿನ ಟ್ಯೂನ್ ಕೊಟ್ಟಾಗ ತಕ್ಷಣ ನೆನಪಾಗಿದ್ದೇ ನಾಗೇಂದ್ರ ಪ್ರಸಾದ್. ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕು ಎಂದಾಗ ಹುಟ್ಟಿದ್ದೇ ಗುಂಡನ ಕಥೆ. ಸೆನ್ಸಾರ್ ಮಂಡಳಿ ಈ ಸಿನಿಮಾಗೆ ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಕೊಟ್ಟಿದೆ’ ನಿರ್ದೇಶಕರು ಹೇಳಿದರು.
ಇದನ್ನೂ ಓದಿ: ರಿಯಲ್ ಲೈಫ್ನಲ್ಲೂ ಇದ್ದಾರೆ ‘ನಾನು ಮತ್ತು ಗುಂಡ’; ಆಟೋ ಚಾಲಕನ ನೆಚ್ಚಿನ ಬಂಟ ರೋನಿ
‘ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಮುಂದುವರಿಯುತ್ತದೆ. ರಾಕೇಶ್ ಅಡಿಗ ಅವರು ಶಂಕರನ ಮಗನಾಗಿ ನಟಿಸಿದ್ದಾರೆ. ಆತನಿಗೆ ನಾಯಿಯೇ ಪ್ರಪಂಚ. ಸಾಮಾಜಿಕ ಕಾಳಜಿ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಸಿನಿಮಾದಲ್ಲಿದೆ. ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಊಟಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸಿನಿಮಾದಲ್ಲಿ 6 ಹಾಡುಗಳಿವೆ. ಆರ್.ಪಿ. ಪಟ್ನಾಯಕ್ ಉತ್ತಮವಾಗಿ ಸಂಗೀತ ನೀಡಿದ್ದಾರೆ’ ಎಂದರು ರಘು ಹಾಸನ್. ಶ್ವಾನಗಳಾದ ಸಿಂಬಾ, ಬಂಟಿ ಈ ಸಿನಿಮಾದಲ್ಲಿ ನಟಿಸಿವೆ.‘ಪೊಯೆಮ್ ಪಿಕ್ಚರ್ಸ್’ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣ ಆಗಿದೆ. ರುತ್ವಿಕ್ ಮುರಳೀಧರ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ತನ್ವಿಕ್ ಅವರು ಛಾಯಾಗ್ರಹಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




