ಕೊಡಗಿನಿಂದ ಬಂದು ಚಿತ್ರರಂಗದಲ್ಲಿ ಮಿಂಚಿದ ಮೊದಲ ನಟಿ ರಶ್ಮಿಕಾ ಮಂದಣ್ಣ ಅಲ್ಲ

ನಟಿ ರಶ್ಮಿಕಾ ಮಂದಣ್ಣ ಅವರ ಹೇಳಿಕೆಗಳೇ ಅವರಿಗೆ ಮುಳುವಾಗುತ್ತವೆ. ವಿವಾದಕ್ಕೂ ಕಾರಣ ಆಗುತ್ತವೆ. ಕೊಡಗಿನಿಂದ ಚಿತ್ರರಂಗಕ್ಕೆ ಬಂದ ಮೊದಲ ನಟಿ ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿಕೊಂಡಿದ್ದಾರೆ. ಆದರೆ ಅದು ಸತ್ಯವಲ್ಲ ಎಂಬುದು ಎಲ್ಲರಿಗೂ ಗೊತ್ತು. ಚಿತ್ರರಂಗದವರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕೊಡಗಿನಿಂದ ಬಂದು ಚಿತ್ರರಂಗದಲ್ಲಿ ಮಿಂಚಿದ ಮೊದಲ ನಟಿ ರಶ್ಮಿಕಾ ಮಂದಣ್ಣ ಅಲ್ಲ
Coorg Actress

Updated on: Jul 06, 2025 | 1:18 PM

ಕೊಡಗಿನಿಂದ (Coorg) ಬಂದ ಅನೇಕರು ಚಿತ್ರರಂಗದಲ್ಲಿ ಸಾಧನೆ ಮಾಡಿದ್ದಾರೆ. ಅವರ ಸಾಲಿನಲ್ಲಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಇದ್ದಾರೆ. ಆದರೆ ಇತ್ತೀಚೆಗೆ ರಶ್ಮಿಕಾ ಅವರು ಸಂದರ್ಶನವೊಂದರಲ್ಲಿ ಮಾತನಾಡುವಾಗ, ‘ಕೊಡಗಿನಿಂದ ಚಿತ್ರರಂಗಕ್ಕೆ ಬಂದ ಮೊದಲ ನಟಿ ನಾನು’ ಎಂದು ಹೇಳಿದರು. ಆ ಹೇಳಿಕೆಗೆ ಜನರಿಂದ ಟೀಕೆ ವ್ಯಕ್ತವಾಗಿದೆ. ಈ ಮೊದಲು ಕೂಡ ರಶ್ಮಿಕಾ ಮಂದಣ್ಣ ಅವರು ನೀಡಿದ ಹೇಳಿಕೆಗಳು ವಿವಾದ ಉಂಟು ಮಾಡಿದ್ದವು. ಈಗ ಅವರ ಹೊಸ ಹೇಳಿಕೆಗೆ ಚಿತ್ರರಂಗದ ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ. ನಿರ್ದೇಶಕಿ ಸುಮನ್ ಕಿತ್ತೂರು (Director Suman Kittur) ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

‘ಕಲಾವಿದೆ ರಶ್ಮಿಕಾ ಮಂದಣ್ಣ ಸಂದರ್ಶನ ಒಂದರಲ್ಲಿ, ಕೊಡವ ಜನಾಂಗದ ಮೊದಲ ನಟಿ ತಾವೇ ಎಂದು ಹೇಳಿಕೆ ನೀಡಿದ್ದಾರೆ! ರಶ್ಮಿಕಾ ಅವರ ಯಶಸ್ಸಿಗೆ ಮತ್ತು ಖ್ಯಾತಿಗೆ ಭಾರಿ ಪ್ರಶಂಸೆ ಸಲ್ಲಿದರೂ, ಆಗಿನ ಶಶಿಕಲಾ ಎನ್ನುವ ಕಲಾವಿದೆಯಿಂದ ಹಿಡಿದು, ಈಗಿನ ಕೊಡವ ಮಹಿಳಾ ನಟಿಯರ ತನಕದ ಚಿತ್ರರಂಗದ ನಂಟಿನ ಇತಿಹಾಸವು ಬಹಳ ದೊಡ್ಡದಿದೆ’ ಎಂದು ಸುಮನ್ ಕಿತ್ತೂರು ಅವರು ಈ ಬರಹ ಆರಂಭಿಸಿದ್ದಾರೆ.

‘ರಶ್ಮಿಕಾ ಅವರಿಗಿಂತಲೂ ಮುಂಚೆ ತೆಲುಗು ನಾಡಲ್ಲಿ ನಟಿಸಿ, ಸೂಪರ್ ಸ್ಟಾರ್ ಆಗಿದ್ದವರು ನಮ್ಮ ಕ್ರೀಡಾಪಟು ಕೊಡಗಿನ ಅಶ್ವಿನಿ ನಾಚಪ್ಪ. ಇವರು ಕೆಲವು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದು ಮಾತ್ರವಲ್ಲ, ಅವರ ಸ್ವಂತ ಜೀವನಚರಿತ್ರೆಯನ್ನು ಆಧರಿಸಿದ ‘ಅಶ್ವಿನಿ’ ತೆಲುಗು ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಟಿ ರಾಜ್ಯ ನಂದಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.’

ಇದನ್ನೂ ಓದಿ
‘ನನ್ನ ತಂಗಿಗೆ ಸವಲತ್ತು ಸಿಗಬಾರದು’; ರಶ್ಮಿಕಾ ಮಂದಣ್ಣ ಹೀಗೆ ಅಂದಿದ್ಯಾಕೆ?
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
‘ನಾನು ಹೈದರಾಬಾದ್​ನವಳು’ ಎಂದು ಹೆಮ್ಮೆಯಿಂದ ಹೇಳಿದ ರಶ್ಮಿಕಾ
‘ಎಲ್ಲರಿಗೂ ಆ ವಿಚಾರ ಗೊತ್ತಿದೆ’; ಮದುವೆ ಬಗ್ಗೆ ನೇರವಾಗಿ ಮಾತನಾಡಿದ ರಶ್ಮಿಕಾ

‘ಇನ್ನು, ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಪ್ರೇಮಾ, ಕೊಡಗಿನ ಮುರ್ನಾಡುವಿನ ನೆರವಂಡ ಕುಟುಂಬದ ಹುಡುಗಿ. ಆ ಕಾಲದಲ್ಲೇ ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸಿದ ದಕ್ಷಿಣ ಭಾರತದ ನಟಿ. ‘ಓಂ’ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಕೂಡ ಪಡೆದಿದ್ದಾರೆ.’

‘ಪ್ರೇಮಾ ಅವರ ನಂತರ ಹಲವಾರು ಕೊಡಗಿನ ಹುಡುಗಿಯರು ಚಿತ್ರರಂಗ ಪ್ರವೇಶಿಸಿದ್ದಿದೆ. ಕನ್ನಡ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿರುವ ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ, ಡೈಸಿ ಬೋಪಣ್ಣ, ಸಣ್ಣುವಂಡ ನಯನಾ ಕಾವೇರಪ್ಪ, ರೀಷ್ಮಾ ನಾಣಯ್ಯ, ವರ್ಷಾ ಬೊಳ್ಳಮ್ಮ, ಶ್ವೇತಾ ಚೆಂಗಪ್ಪ, ತಸ್ವಿನಿ ಕರುಂಬಯ್ಯ… ಸದ್ಯ, ನನಗೆ ನೆನಪಾದ ಹೆಸರುಗಳಿವು. ಆದರೆ ಪಟ್ಟಿ ದೊಡ್ಡದಿದೆ, ಬೆಳೆಯುತ್ತಲೇ ಹೋಗುತ್ತದೆ.’

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ ಪೂಣಚ್ಚ

‘ಈಗಂತೂ ಕಿರುತೆರೆಯಲ್ಲೂ ಕೊಡಗಿನ ಕಲಾವಿದೆಯರು ಮಾತ್ರವಲ್ಲ, ಕಲಾವಿದರ ಸಂಖ್ಯೆಯೂ ಹೆಚ್ಚಿದೆ. ರಶ್ಮಿಕಾ ಮಂದಣ್ಣ ಇಂದು ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವುದು ಹೆಮ್ಮೆಯ ವಿಷಯ. ಆದರೆ ‘ಮೊದಲ ಕೊಡವ ನಟಿ’ ಎಂಬ ಗೌರವ ಅವರ ಹಿರಿಯರಿಗೂ ಸಲ್ಲುತ್ತದೆ ಎಂಬುದು ಅಂಶವಷ್ಟೆ’ ಎಂದು ಸುಮನ್ ಕಿತ್ತೂರು ಅವರು ಬರಹ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.