ಮನುಷ್ಯ ಹಾಗೂ ಪ್ರಾಣಿ ಮಧ್ಯೆ ಇರುವ ಬಾಂಧವ್ಯದ ಬಗ್ಗೆ ಹೇಳುವ ಅನೇಕ ಸಿನಿಮಾಗಳು ಈಗಾಗಲೇ ಬಂದು ಹೋಗಿವೆ. ‘777 ಚಾರ್ಲಿ’, ‘ನಾನು ಮತ್ತು ಗುಂಡ’ ಸೇರಿದಂತೆ ಅನೇಕ ಸಿನಿಮಾಗಳು ಈ ಸಾಲಿನಲ್ಲಿ ಇವೆ. ಈಗ ‘ನಾನು ಮತ್ತು ಗುಂಡ’ ಚಿತ್ರಕ್ಕೆ ಎರಡನೇ ಭಾಗ ಬರುತ್ತಿದೆ. ಈ ಸಿನಿಮಾದಲ್ಲಿ ಶ್ವಾನದ ಪಾತ್ರಕ್ಕೆ ಅದುವೇ ಡಬ್ ಮಾಡಿದೆ ಅನ್ನೋದು ವಿಶೇಷ. ಕಿವಿಗೆ ಹೆಡ್ಫೋನ್ ಹಾಕಿ, ರೆಕಾರ್ಡಿಂಗ್ ಮೈಕ್ ಮುಂದೆ ಶ್ವಾನ ಬೌ, ಬೌ ಎಂದು ಬೊಗಳಿದೆ. ಇದನ್ನು ಸಿನಿಮಾದಲ್ಲಿ ಅಗತ್ಯ ಇರುವ ಕಡೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇವಲ ಬೊಗಳೋದು ಮಾತ್ರವಲ್ಲದೆ ವಿವಿಧ ಭಾವನೆಗಳನ್ನು ಹೊರಹಾಕುವ ಶಬ್ದವನ್ನು ಕೂಡ ರೆಕಾರ್ಡ್ ಮಾಡಲಾಗಿದೆ.
ಶಿವರಾಜ್ ಕೆ.ಆರ್. ಪೇಟೆ ಅಭಿನಯದ ‘ನಾನು ಮತ್ತು ಗುಂಡ’ ಚಿತ್ರ ಪ್ರಾಣಿ ಪ್ರಿಯರಿಂದ ಮೆಚ್ಚುಗೆ ಪಡೆಯಿತು. ಈಗ ಈ ಚಿತ್ರಕ್ಕೆ ಎರಡನೇ ಭಾಗ ಬರುತ್ತಿದೆ. ಈ ಚಿತ್ರದಲ್ಲಿ ರಾಕೇಶ್ ಅಡಿಗ ನಟಿಸುತ್ತಿದ್ದು, ಇವರ ಜೊತೆ ಸಿಂಬ ಹೆಸರಿನ ಶ್ವಾನ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ‘ನಾನು ಮತ್ತು ಗುಂಡ’ ಸಿನಿಮಾ ನಿರ್ದೇಶಿಸಿದ್ದ ರಘು ಹಾಸನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಡಬ್ಬಿಂಗ್ ಶುರುವಾಗಿದೆ. ಚಿತ್ರದ ಉದ್ದಕ್ಕೂ ಸಿಂಬಾನ ಧ್ವನಿಯೇ ಇರಲಿದೆ.
ಈ ಬಗ್ಗೆ ನಿರ್ದೇಶಕ ರಘು ಹಾಸನ್ ಅವರು ಮಾತನಾಡಿದ್ದಾರೆ. ‘ಒಂದೊಂದು ಜಾತಿಯ ಶ್ವಾನಕ್ಕೆ ಒಂದೊಂದು ರೀತಿಯ ಸೌಂಡ್ ಇರುತ್ತದೆ. ಬೊಗಳೋ ಶಬ್ದ ನೈಜವಾಗಿ ಮೂಡಿ ಬರಲಿ ಎನ್ನುವ ಕಾರಣಕ್ಕೆ ಸಿಂಬನಿಂದಲೇ ಡಬ್ ಮಾಡಿಸಲಾಗಿದೆ. ಶ್ವಾನದಿಂದ ಡಬ್ ಮಾಡಿಸುತ್ತಿರುವುದು ಭಾರತದ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲು’ ಎಂದಿದ್ದಾರೆ ಅವರು.
ಇದನ್ನೂ ಓದಿ: 777 Charlie: ಜಪಾನ್ ಭಾಷೆಯಲ್ಲಿ ರಿಲೀಸ್ ಆದ ‘777 ಚಾರ್ಲಿ’; ಹೇಗಿದೆ ಪ್ರತಿಕ್ರಿಯೆ?
ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ರಘು ಹಾಸನ್ ‘ನಾನು ಮತ್ತು ಗುಂಡ 2’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆರ್.ಪಿ. ಪಟ್ನಾಯಕ್ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣ ಚಿತ್ರಕ್ಕೆ ಇದೆ. ರಾಕೇಶ್ ಅಡಿಗ ಅವರಿಗೆ ನಾಯಕಿಯಾಗಿ ರಚನಾ ಇಂದರ್ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:31 am, Wed, 14 August 24