ಮೇರುನಟ ಡಾ. ರಾಜ್ಕುಮಾರ್ (Dr Rajkumar) ಮೇಲೆ ಜನರು ಇಟ್ಟಿರುವ ಅಭಿಮಾನ ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಅವರು ನಟಿಸಿದ ಅನೇಕ ಸಿನಿಮಾಗಳು ಈಗಾಗಲೇ ಮರುಬಿಡುಗಡೆ ಆಗಿ ದಾಖಲೆ ಮಾಡಿವೆ. ಈಗ ಮತ್ತೊಮ್ಮೆ ‘ಭಾಗ್ಯವಂತರು’ ಸಿನಿಮಾ ರಿಲೀಸ್ ಆಗಲಿದೆ. ದ್ವಾರಕೀಶ್ ನಿರ್ಮಾಣ ಮಾಡಿದ್ದ ಈ ಸಿನಿಮಾದಲ್ಲಿ ಡಾ. ರಾಜ್ಕುಮಾರ್ ಮತ್ತು ಬಿ. ಸರೋಜಾದೇವಿ (B Sarojadevi) ಅವರು ಜೋಡಿಯಾಗಿ ನಟಿಸಿದ್ದರು. ಅಭಿಮಾನಿಗಳ ಫೇವರಿಟ್ ಸಿನಿಮಾಗಳ ಪಟ್ಟಿಯಲ್ಲಿ ‘ಭಾಗ್ಯವಂತರು’ (Bhagyavantharu) ಚಿತ್ರ ಇಂದಿಗೂ ಸ್ಥಾನ ಪಡೆದುಕೊಂಡಿದೆ. ಈ ಚಿತ್ರಕ್ಕೆ ಹೊಸ ತಂತ್ರಜ್ಞಾನ ಅಳವಡಿಸಲಾಗಿದ್ದು, ಮುನಿರಾಜು ಎಂ. ಅವರು ಮರು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಜುಲೈ 8ರಂದು ಈ ಚಿತ್ರ ರಿ-ರಿಲೀಸ್ ಆಗಲಿದೆ. ಇದು ಡಾ. ರಾಜ್ಕುಮಾರ್ ಅಭಿಮಾನಿಗಳಿಗೆ ಖುಷಿ ನೀಡಿದೆ. ದೊಡ್ಡ ಪರದೆಯಲ್ಲಿ ಮತ್ತೆ ಅಣ್ಣಾವ್ರನ್ನು ನೋಡಿ ಎಂಜಾಯ್ ಮಾಡಲು ಫ್ಯಾನ್ಸ್ ಸಜ್ಜಾಗಿದ್ದಾರೆ.
‘ಭಾಗ್ಯವಂತರು’ ಸಿನಿಮಾ ತೆರೆಕಂಡಿದ್ದು 1974ರಲ್ಲಿ. ಈಗ ಬರೋಬ್ಬರಿ 48 ವರ್ಷಗಳ ಬಳಿಕ ಈ ಸಿನಿಮಾ ಮತ್ತೆ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಈ ಬಾರಿ ಒಂದಷ್ಟು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. 7.1 ಡಿಜಿಟಲ್ ಸೌಂಡ್, ಕಲರಿಂಗ್, ಡಿಟಿಎಸ್ ಮುಂತಾದ ಆಧುನಿಕ ಸೌಲಭ್ಯಗಳೊಂದಿಗೆ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜುಲೈ 8ರಂದು ರಾಜ್ಯಾದ್ಯಂತ 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಭಾಗ್ಯವಂತರು’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಮುನಿರಾಜು ತಿಳಿಸಿದ್ದಾರೆ.
ಮುನಿರಾಜು ಅವರು ಡಾ. ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಅಣ್ಣಾವ್ರ ಸಿನಿಮಾಗಳು ಎಂದರೆ ಅವರಿಗೆ ಸಖತ್ ಇಷ್ಟ. ಈ ಹಿಂದೆ ‘ಆಪರೇಷನ್ ಡೈಮೆಂಡ್ ರಾಕೇಟ್’, ‘ನಾನೊಬ್ಬ ಕಳ್ಳ’, ‘ದಾರಿ ತಪ್ಪಿದ ಮಗ’ ಸೇರಿದಂತೆ ಕೆಲವು ಸಿನಿಮಾಗಳನ್ನು ಹೊಸ ತಂತ್ರಜ್ಞಾನದೊಂದಿಗೆ ಅವರು ಬಿಡುಗಡೆ ಮಾಡಿದ್ದರು. ಈಗ ‘ಭಾಗ್ಯವಂತರು’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ‘ಹುಲಿ ಹಾಲಿನ ಮೇವು’ ಸೇರಿದಂತೆ ಡಾ. ರಾಜ್ಕುಮಾರ್ ನಟನೆಯ ಇನ್ನಷ್ಟು ಐಕಾನಿಕ್ ಸಿನಿಮಾಗಳನ್ನು ಹೊಸ ತಂತ್ರಜ್ಞಾನದೊಂದಿಗೆ ರೀ-ರಿಲೀಸ್ ಮಾಡಬೇಕು ಎಂಬ ಆಲೋಚನೆ ಅವರಿಗಿದೆ.
ಇದನ್ನೂ ಓದಿ: ‘ಬೈರಾಗಿ’ ಯಾತ್ರೆ: ಡಾ. ರಾಜ್ ಹುಟ್ಟಿ ಬೆಳೆದ ಗಾಜನೂರು ನೋಡಲು ಶಿವಣ್ಣನ ಜತೆ ಹೊರಟ ಡಾಲಿ ಧನಂಜಯ
‘ಡಾ. ರಾಜ್ಕುಮಾರ್ ಬಗ್ಗೆ ಅವರ ತಂದೆ ನುಡಿದಿದ್ರು ಭವಿಷ್ಯ’: ಅಚ್ಚರಿಯ ಘಟನೆ ಮೆಲುಕು ಹಾಕಿದ ರಾಘಣ್ಣ
Published On - 9:57 am, Mon, 27 June 22