ಜಯಮಾಲಾ, ಸಾ.ರಾ. ಗೋವಿಂದುಗೆ ‘ಡಾ. ರಾಜ್ಕುಮಾರ್ ಪ್ರಶಸ್ತಿ’ ಪ್ರಕಟ
ಡಾ. ರಾಜ್ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ಸರ್ಕಾರ ಪ್ರಕಟ ಮಾಡಿದೆ. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದ ಸಾಧಕರಿಗೆ ಈ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ. 2020 ಹಾಗೂ 2021ನೇ ಸಾಲಿನ ಪ್ರಶಸ್ತಿಗಳನ್ನು ಒಟ್ಟಿಗೆ ಘೋಷಣೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರ ಬಗ್ಗೆ ಇಲ್ಲಿದೆ ಮಾಹಿತಿ..

2020 ಹಾಗೂ 2021ನೇ ಸಾಲಿನ ‘ಡಾ. ರಾಜ್ಕುಮಾರ್ ಪ್ರಶಸ್ತಿ’ (Dr Rajkumar Award) ಪ್ರಕಟ ಮಾಡಲಾಗಿದೆ. ಜೊತೆಗೆ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ ಹಾಗೂ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಕೂಡ ಘೋಷಣೆ ಆಗಿದೆ. ಹಿರಿಯ ನಟಿ ಜಯಮಾಲಾ (Jayamala) ಅವರಿಗೆ 2020ನೇ ಸಾಲಿನ ಡಾ. ರಾಜ್ಕುಮಾರ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು ಅವರು 2020ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಿರಿಯ ಛಾಯಾಗ್ರಾಹಕರಾದ ಪ್ರಗತಿ ಅಶ್ವತ್ಥ್ ನಾರಾಯಣ ಅವರಿಗೆ 2020ನೇ ಸಾಲಿನ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ. ಚಿತ್ರರಂಗದಲ್ಲಿ ಮಾಡಿದ ಜೀವಮಾನ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ.
ನಿರ್ಮಾಪಕ ಸಾ.ರಾ. ಗೋವಿಂದು ಅವರಿಗೆ 2021ನೇ ಸಾಲಿನ ‘ಡಾ. ರಾಜ್ಕುಮಾರ್ ಪ್ರಶಸ್ತಿ’ ಘೋಷಣೆ ಆಗಿದೆ. ನಿರ್ದೇಶಕ ಶಿವರುದ್ರಯ್ಯ ಅವರು 2021ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಹಿರಿಯ ನಟ ಎಂ.ಕೆ. ಸುಂದರ್ ರಾಜ್ ಅವರಿಗೆ 2021ನೇ ಸಾಲಿನ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ ಘೋಷಣೆ ಮಾಡಲಾಗಿದೆ.
‘ಡಾ. ರಾಜ್ಕುಮಾರ್ ಪ್ರಶಸ್ತಿ’ ಪುರಸ್ಕೃತರಿಗೆ ತಲಾ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಜೀವಮಾನ ಸಾಧನೆಗಾಗಿ 1993ರಿಂದ ‘ಡಾ. ರಾಜ್ಕುಮಾರ್ ಪ್ರಶಸ್ತಿ’ ನೀಡಲಾಗುತ್ತಿದೆ. ಮೊದಲು ಈ ಪ್ರಶಸ್ತಿಯನ್ನು ಪಡೆದವರು ಕೆ.ಎಸ್. ಅಶ್ವತ್ಥ್. 2019ರಲ್ಲಿ ನಟಿ ಉಮಾಶ್ರೀ ಅವರು ‘ಡಾ. ರಾಜ್ಕುಮಾರ್ ಪ್ರಶಸ್ತಿ’ ಪಡೆದಿದ್ದರು.
ಈಗ ಹಿರಿಯ ನಟಿ ಜಯಮಾಲಾ ಅವರು ‘ಡಾ. ರಾಜ್ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಜಯಮಾಲಾ ಅವರು 1974ರಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಭೂತಯ್ಯನ ಮಗ ಅಯ್ಯು’, ‘ಗಿರಿ ಕನ್ಯೆ’, ‘ಪ್ರೇಮದ ಕಾಣಿಕೆ’, ‘ಶಂಕರ್ ಗುರು’, ‘ದಾರಿ ತಪ್ಪಿದ ಮಗ’, ‘ತಾಯಿ ಸಾಹೇಬ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಮಹಿಳೆಗೆ ‘ಕರ್ನಾಟಕ ರತ್ನ’ ಪ್ರಶಸ್ತಿ: ಜಯಮಾಲಾ, ಶ್ರುತಿ, ಮಾಳವಿಕಾ ಸಂತಸ
2021ನೇ ಸಾಲಿನ ‘ಡಾ. ರಾಜ್ಕುಮಾರ್ ಪ್ರಶಸ್ತಿ’ಗೆ ಭಾಜನರಾಗಿರುವ ಹಿರಿಯ ನಿರ್ಮಾಪಕ ಸಾರಾ ಗೋವಿಂದು ಅವರು ಕೂಡ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಕನ್ನಡ ಪರ ಹೋರಾಟದಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಅಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




