ನಟ ವಿಷ್ಣುವರ್ಧನ್ (Dr Vishnuvardhan) ಅವರ ಪುಣ್ಯಭೂಮಿ ಮತ್ತು ಸ್ಮಾರಕಕ್ಕೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ಜಟಾಪಟಿ ನಡೆಯುತ್ತಲೇ ಇದೆ. ಈಗ ವಿಷ್ಣು ಅಭಿಮಾನಿಗಳು ಮತ್ತೆ ಗರಂ ಆಗಿದ್ದಾರೆ. ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಮೈಸೂರಿಗೆ ಸ್ಥಳಾಂತರ ಮಾಡಿದ್ದು ಗೊತ್ತೇ ಇದೆ. ಆದರೆ ಸ್ಮಾರಕ ಎಲ್ಲಿಯೇ ನಿರ್ಮಾಣ ಆಗಿದ್ದರೂ ಅಂತ್ಯಸಂಸ್ಕಾರ ಆಗಿರುವ ಜಾಗದಲ್ಲಿಯೇ ಪುಣ್ಯಭೂಮಿ ಇರಬೇಕು ಎಂದು ಅವರ ಅಭಿಮಾನಿಗಳು (Vishnuvardhan Fans) ಹಠ ಹಿಡಿದು ಕುಳಿತಿದ್ದಾರೆ. ಅದರಂತೆ, ಪ್ರತಿ ವರ್ಷವೂ ‘ಸಾಹಸ ಸಿಂಹ’ ಅವರ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಯನ್ನು ಬಹಳ ಅದ್ದೂರಿಯಾಗಿ ಅಭಿಮಾನ್ ಸ್ಟುಡಿಯೋದ (Abhiman Studio) ಡಾ. ವಿಷ್ಣು ಪುಣ್ಯಭೂಮಿಯಲ್ಲಿ ಆಚರಿಸುವುದನ್ನು ಮುಂದುವರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಈಗೊಂದು ವಿವಾದ ಎದುರಾಗಿದೆ.
ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರ ನಡೆದ ಅಭಿಮಾನ್ ಸ್ಟುಡಿಯೋದ ಒಳಗೆ ಪ್ರವೇಶಿಸಲು ಅಭಿಮಾನಿಗಳಿಗೆ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಸ್ಟುಡಿಯೋದ ಮಾಲೀಕರಿಂದ ಈ ರೀತಿ ಆಗುತ್ತಿದೆ ಎಂದು ವಿಷ್ಣು ಅಭಿಮಾನಿಗಳು ಆರೋಪಿಸಿದ್ದಾರೆ. ಪ್ರತಿವರ್ಷದ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಗೆ ಹಲವಾರು ತೊಂದರೆಗಳನ್ನು ನೀಡಲಾಗುತ್ತಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಭಾರತಿ ವಿಷ್ಣುವರ್ಧನ್ ಜೀವನದ ಕುರಿತ ಸಾಕ್ಷ್ಯಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜತ್ಕರ್
ವಿಷ್ಣುವರ್ಧನ್ ಅವರಿಗೆ ಎರಡೆರಡು ಕಡೆ ಸ್ಮಾರಕ ಮತ್ತು ಪುಣ್ಯಭೂಮಿ ಮಾಡುವುದು ರಾಜ್ಯ ಸರ್ಕಾರಕ್ಕೆ ಕಷ್ಟವಾದರೆ, ಆ ಜಮೀನಿಗೆ ತಗಲುವ ಮತ್ತು ಪುಣ್ಯಭೂಮಿ ಅಭಿವೃದ್ಧಿ ಪಡಿಸಲು ಬೇಕಾಗುವ ಹಣವನ್ನು ಅಭಿಮಾನಿಗಳೇ ನೀಡುತ್ತೇವೆ ಎಂದು ಸರ್ಕಾರಕ್ಕೆ ವಿಷ್ಣು ಫ್ಯಾನ್ಸ್ ತಿಳಿದ್ದಾರೆ. ಹಾಗಿದ್ದರೂ ಕೂಡ ಸರ್ಕಾರದ ಕಡೆಯಿಂದ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ ಎಂಬ ಕಾರಣದಿಂದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಆ ಕುರಿತು ‘ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟ’ದ ಮುಖಂಡ ವೀರಕಪುತ್ರ ಶ್ರೀನಿವಾಸ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರತಿಭಟನೆ ಕುರಿತ ಸಮಾಲೋಚನಾ ಸಭೆಯನ್ನು ಭಾನುವಾರ (ನ.26) ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಅದರಲ್ಲಿ ಐನೂರಕ್ಕೂ ಹೆಚ್ಚು ಮಂದಿ ಭಾಗಿ ಆಗಿದ್ದರು.
ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕದಲ್ಲಿ ಅನಿರುದ್ಧ್ ಹೊಸ ಸಿನಿಮಾಕ್ಕೆ ಚಾಲನೆ: ಕತೆ ತುಸು ಭಿನ್ನ
ಡಿಸೆಂಬರ್ 17ರಂದು ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು. ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ ಆರರ ತನಕ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ಕನ್ನಡಪರ ಸಂಘಟನೆಗಳು, ಕಲಾವಿದರ ಸಂಘ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ವಿಷ್ಣುವರ್ಧನ್ ಅವರ ಒಡನಾಡಿಗಳೆಲ್ಲರೂ ಭಾಗವಹಿಸುತ್ತಿದ್ದಾರೆ ಎಂಬ ನಿರೀಕ್ಷೆ ಇದೆ. ಅಂದಾಜು 50 ಸಾವಿರ ಜನರು ಸೇರುವ ಸಾಧ್ಯತೆ ಇದೆ ಎಂದು ವೀರಕಪುತ್ರ ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.