ವಿಷ್ಣು ಸ್ಮಾರಕಕ್ಕೆ ಸ್ಥಳ: ಮತ್ತೆ ಕಾನೂನು ಹೋರಾಟಕ್ಕೆ ಮುಂದಾದ ವಿಷ್ಣುಸೇನಾ ಸಮಿತಿ
Vishnuvardhan: ವಿಷ್ಣುವರ್ಧನ್ ಅಂತ್ರಕ್ರಿಯೆಗೊಂಡ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪುಣ್ಯಭೂಮಿಗೆ ಕನಿಷ್ಠ 20 ಗುಂಟೆಗಳ ಜಾಗ ನೀಡಬೇಕು ಎಂದು ಒತ್ತಾಯಿಸಿ ಡಾ.ವಿಷ್ಣು ಸೇನಾ ಸಮಿತಿಯು ಕಾನೂನು ಹೋರಾಟ ಮುಂದುವರೆಸಲಿದೆ.
ಹಲವು ಗೊಂದಲ, ತಕರಾರು, ಸತತ ಮನವಿ, ಕುಟುಂಬದವರು, ಅಭಿಮಾನಿಗಳ ಪರಿಶ್ರಮದ ಬಳಿಕ ವಿಷ್ಣುವರ್ಧನ್ (Vishnuvardhan) ಸ್ಮಾರಕ ಮೈಸೂರಿನಲ್ಲಿ ನಿರ್ಮಾಣವಾಗಿದೆ. ಮಾಜಿ ಸಿಎಂ ಬೊಮ್ಮಾಯಿ ಅವರು ಇದೇ ವರ್ಷಾರಂಭದಲ್ಲಿ ಸ್ಮಾರಕ ಉದ್ಘಾಟನೆಯನ್ನೂ ಮಾಡಿದರು. ಆದರೆ ಇದೀಗ ವಿಷ್ಣು ಸೇನಾ ಸಮಿತಿಯವರು ಬೆಂಗಳೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕಕ್ಕೆ ಸ್ಥಳ ಮಂಜೂರು ಮಾಡುವಂತೆ ಕಾನೂನು ಹೋರಾಟವನ್ನು ಮತ್ತೆ ಆರಂಭ ಮಾಡಿದ್ದಾರೆ.
ವಿಷ್ಣುವರ್ಧನ್ ಅಂತ್ರಕ್ರಿಯೆಗೊಂಡ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪುಣ್ಯಭೂಮಿಗೆ ಕನಿಷ್ಠ 20 ಗುಂಟೆಗಳ ಜಾಗ ನೀಡಬೇಕು ಎಂದು ಈ ಹಿಂದೆಯೇ ಡಾ.ವಿಷ್ಣು ಸೇನಾ ಸಮಿತಿಯು 18.09.2015 ರ ಪ್ರಕರಣದಲ್ಲಿ ವಾದ ಮಂಡಿಸಿತ್ತು. ಜೊತೆಗೆ ಹಿರಿಯ ನಟ ಬಾಲಕೃಷ್ಣ ಅವರಿಗೆ ನೀಡಿರುವಂತಹ ಜಮೀನು ಅರಣ್ಯ ಇಲಾಖೆಗೆ ಒಳಪಟ್ಟಿರುತ್ತದೆ ಮತ್ತು ಅವರ ಕಾಲ ನಂತರದಲ್ಲಿ ಅವರ ಮಕ್ಕಳು/ಮೊಮ್ಮಕ್ಕಳು ಹತ್ತು ಎಕರೆಯನ್ನು ಮಾರಾಟ ಮಾಡಿ ಸರ್ಕಾರಕ್ಕೆ ವಂಚಿಸಿರುತ್ತಾರೆ ಎಂಬ ವಿಷಯವನ್ನು ಪ್ರಸ್ತಾಪಿಸಿತ್ತು.
ಈ ಹಿಂದೆ ವಾದ ವಿವಾದ ಆಲಿಸಿದ್ದ ನ್ಯಾಯಾಲಯವು “ಈ ಸಂಬಂಧ ಅಭಿಮಾನಿ ಸಂಘವಾದ ಡಾ.ವಿಷ್ಣು ಸೇನಾ ಸಮಿತಿಗೆ ಹಕ್ಕಿರುವುದಿಲ್ಲವೆಂದೂ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಥವಾ ಸರ್ಕಾರದ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಬೇಕೆಂದು ತಿಳಿಸಿತ್ತು.
ಇದನ್ನೂ ಓದಿ: ವಿಷ್ಣುವರ್ಧನ್ ಸಿನಿಮಾ ಮಾಡಿ ಕಟ್ಟಿಸಿದ್ದ ಮನೆ ಮಾರಿಕೊಂಡೆ: ಸೂರಪ್ಪ ಬಾಬು
ನ್ಯಾಯಾಧೀಶರ ಅಭಿಪ್ರಾಯದಂತೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ನಟ ದಿ.ಬಾಲಕೃಷ್ಣ ಅವರ ಕಲಾಸೇವೆಗೆ ಮೆಚ್ಚಿ ಸರ್ಕಾರವು ನೀಡಿದ 20 ಎಕರೆಯ ಭೂಮಿಯನ್ನು ಅವರ ಮಕ್ಕಳು ಖಾಸಗಿ ಸ್ವತ್ತಿನಂತೆ ಭಾವಿಸಿ ಹತ್ತು ಎಕರೆಯನ್ನು ಮಾರಾಟ ಮಾಡಿರುತ್ತಾರೆ. ಇದು ಸರ್ಕಾರದ ಭೋಗ್ಯ ಹಕ್ಕುಗಳ ಕಾಯ್ದೆಗೆ ವಿರುದ್ದವಾಗಿರುತ್ತದೆ. ಮತ್ತು ಸದರಿ ಜಮೀನು ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಜಾಗದ ಅನುದಾನ ಸಹ ತಪ್ಪಾಗಿದ್ದು ಅದನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸುವ ನಿರ್ಧಾರಕ್ಕೆ ಡಾ.ವಿಷ್ಣು ಸೇನಾ ಸಮಿತಿಯು ಬಂದಿದ್ದು. ಆ ನಿಟ್ಟಿನಲ್ಲಿ ಅಗತ್ಯವಿರುವ ಕಾನೂನು ಪ್ರಕ್ರಿಯೆ ಮತ್ತು ಹೋರಾಟಕ್ಕೆ ಡಾ.ವಿಷ್ಣು ಸೇನಾ ಸಮಿತಿಯು ಚಾಲನೆ ನೀಡಲಿದೆ ಎಂದು ಸಮಿತಿಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ವಿಷ್ಣುಸೇನಾ ಸಮಿತಿಯು ಹಲವು ವರ್ಷಗಳಿಂದ ವಿಷ್ಣುವರ್ಧನ್ರ ಹೆಸರಿನಲ್ಲಿ ಹಲವು ಕಾರ್ಯಗಳನ್ನು, ಸೇವೆಗಳನ್ನು ಮಾಡುತ್ತಾ ಬಂದಿದೆ. ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಕಟೌಟ್ ಜಾತ್ರೆ, ಹೊರರಾಜ್ಯದಲ್ಲಿ ವಿಷ್ಣುವರ್ಧನ್ರ ಮರಳು ಶಿಲ್ಪ ನಿರ್ಮಾಣ ಹೀಗೆ ಹಲವು ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಇದೀಗ ಅಭಿಮಾನ್ ಸ್ಟುಡಿಯೋ ಅಥವಾ ವಿಷ್ಣು ಸ್ಮಾರಕಕ್ಕೆ ಈ ಹಿಂದೆ ಮಂಜೂರು ಮಾಡಲಾಗಿದ್ದ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಶ್ರಮಿಸುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Wed, 11 October 23