ವಿಷ್ಣುವರ್ಧನ್ ಸಿನಿಮಾ ಮಾಡಿ ಕಟ್ಟಿಸಿದ್ದ ಮನೆ ಮಾರಿಕೊಂಡೆ: ಸೂರಪ್ಪ ಬಾಬು
Soorappa Babu: ಸುದೀಪ್ಗೆ ಕೋಟ್ಯಂತರ ಹಣ ಬಾಕಿ ಉಳಿಸಿಕೊಂಡಿರುವ ಸೂರಪ್ಪ ಬಾಬು ಹೊಸ ಮನೆ ಕಟ್ಟಿಸಿಕೊಂಡಿದ್ದಾರೆ ಎಂದು ಚಕ್ರವರ್ತಿ ಚಂದ್ರಚೂಡ್ ಮಾಡಿದ್ದ ಆರೋಪಕ್ಕೆ ಸೂರಪ್ಪ ಬಾಬು ಉತ್ತರಿಸಿದ್ದಾರೆ.
ಸುದೀಪ್ (Sudeep) ಹಾಗೂ ನಿರ್ಮಾಪಕ (Producer) ಕುಮಾರ (MN Kumar) ವಿವಾದದಲ್ಲಿ ಸುದೀಪ್ ಪರವಹಿಸಿದ್ದ ಚಕ್ರವರ್ತಿ ಚಂದ್ರಚೂಡ್, ವಿಡಿಯೋ ಒಂದರಲ್ಲಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಮಾಡಿದ್ದ ಆರೋಪಗಳಿಗೆ ಪ್ರತ್ಯುತ್ತರವನ್ನು ಸೂರಪ್ಪ ಬಾಬು ನೀಡಿದ್ದಾರೆ. ಇಂದು (ಜುಲೈ 23) ಸುದ್ದಿಗೋಷ್ಠಿ ಕರೆದಿದ್ದ ಸೂರಪ್ಪ ಬಾಬು ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಮೇಲೆ ವಾಗ್ದಾಳಿ ನಡೆಸಿದರು. ಮಾತ್ರವಲ್ಲದೆ, ತಮ್ಮ ಸಿನಿಮಾ ಜರ್ನಿಯ ಬಗ್ಗೆಯೂ ಮಾತನಾಡಿದರು.
ಸೂರಪ್ಪ ಬಾಬು, ಸುದೀಪ್ ಅವರಿಗೆ 7.50 ಕೋಟಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ ಎಂದು ವಿಡಿಯೋದಲ್ಲಿ ಚಕ್ರವರ್ತಿ ಚಂದ್ರಚೂಡ್ ಆರೋಪ ಮಾಡಿದ್ದರು. ಹೊಸ ಮನೆ ಸಹ ಕಟ್ಟಿಕೊಂಡಿದ್ದಾರೆ ಎಂದೆಲ್ಲ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದರು. ಇದಕ್ಕೆ ಇಂದಿನ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸೂರಪ್ಪ ಬಾಬು, ”ವಿಷ್ಣುವರ್ಧನ್ ಅವರ ‘ಕೋಟಿಗೊಬ್ಬ’ ನಿರ್ಮಾಣ ಮಾಡಿ ಒಂದು ಮನೆ ಕಟ್ಟಿಕೊಂಡಿದ್ದೆ. ಆ ಮನೆಯಲ್ಲಿ ಇದೇ ವರ್ಷ ಜನವರಿ 30ರಂದು ಮಾರಿದ್ದೇನೆ” ಎಂದಿದ್ದಾರೆ.
”ನನ್ನ ಮಗಳು ಫಾರಿನ್ನಲ್ಲಿ ಓದುತ್ತಿದ್ದಾಳೆ ಎಂದಿದ್ದಾರೆ. ಹೌದು ಓದುತ್ತಿದ್ದಾಳೆ. ಆದರೆ ನನ್ನ ಸ್ವಂತ ದುಡ್ಡಿನಲ್ಲಿ ಓದಿಸುತ್ತಿದ್ದೇನೆ. ಮಕ್ಕಳು, ಪತ್ನಿಯನ್ನು ಸ್ವಂತ ಹಣದಲ್ಲಿ ಸಾಕುತ್ತಿದ್ದೇನೆ. ಯಾರದ್ದೋ ಚಾರಿಟಿಯಲ್ಲಿ ಹಣ ತೆಗೆದುಕೊಂಡು ಸಂಸಾರ ನಡೆಸುತ್ತಿಲ್ಲ ಮಕ್ಕಳನ್ನು ಓದಿಸುತ್ತಿಲ್ಲ. ಹೊಸ ಮನೆ ಕಟ್ಟಿರುವುದು ಬೆವರು ಸುರಿಸಿ ದುಡಿದ ದುಡ್ಡಿನಿಂದ. ಅದಕ್ಕೆ ಬ್ಯಾಂಕ್ನಿಂದ ಸಾಲವನ್ನು ಪಡೆದಿದ್ದೀನಿ, ಅದರ ದಾಖಲೆಗಳು ಇವೆ” ಎಂದಿದ್ದಾರೆ ಸೂರಪ್ಪ ಬಾಬು.
ಇದನ್ನೂ ಓದಿ:ಶಿಖಂಡಿ ಅಂದ ಚಕ್ರವರ್ತಿ ಚಂದ್ರಚೂಡ್ ವಿರುದ್ಧ ಸೂರಪ್ಪ ಬಾಬು ಫೈರ್
”ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದೀನಿ. 75 ರೂಪಾಯಿಗೆ ಕಾಫಿ-ಟೀ ತಂದುಕೊಡುವ ಕೆಲಸ ಮಾಡುತ್ತಿದ್ದೆ. ಈಗ 65-70 ಕೋಟಿ ಸಿನಿಮಾ ಮಾಡುವ ಹಂತ ತಲುಪಿದ್ದೀನಿ. ಈ ಸಾಧನೆ ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ. ಅದನ್ನು ಸ್ವಾಭಿಮಾನದಿಂದ ಹೇಳಿಕೊಳ್ಳುತ್ತೀನಿ. ವೀರಸ್ವಾಮಿ ಅವರೂ ಸಹ ಯಾವುದೋ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅದಾದ ಮೇಲೆ ದೊಡ್ಡ-ದೊಡ್ಡ ಸಿನಿಮಾ ನಿರ್ಮಾಣ ಮಾಡಿದರು” ಎಂದಿದ್ದಾರೆ.
ಚಂದ್ರಚೂಡ್ ಬಗ್ಗೆ ಮಾತನಾಡಿರುವ ಸೂರಪ್ಪ ಬಾಬು, ”ನಾನು ಉತ್ತರ ಕೊಡಬೇಕಾಗಿರುವುದು ನನ್ನ ಕುಟುಂಬಕ್ಕೆ ಹಾಗೂ ನನಗೆ ಸಾಲ ಕೊಟ್ಟವರಿಗೆ ಮಾತ್ರ. ನನ್ನ ವಿರುದ್ಧ ಆರೋಪ ಮಾಡಲು ಅವರು ಯಾರು? ನನ್ನ ನಿರ್ಮಾಣ ಸಂಸ್ಥೆಗೂ ಅವರಿಗೂ ಏನು ಸಂಬಂಧ. ನನ್ನ ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದಾರಾ? ಸಿನಿಮಾಗಳಿಗೆ ಏನಾದರೂ ಸಹಾಯ ಮಾಡಿದ್ದಾರಾ? ಎಂದು ಸೂರಪ್ಪ ಪ್ರಶ್ನೆ ಮಾಡಿದ್ದಾರೆ.
ಕೋಟಿಗೊಬ್ಬ 3 ಸಿನಿಮಾ ನಿರ್ಮಾಣ ಮಾಡಿದ್ದ ಸೂರಪ್ಪ ಬಾಬು, ಅವರ ಹಣಕಾಸು ಯೋಜನೆ ಕೊರತೆಯಿಂದಾಗಿ ಸಿನಿಮಾ ಬಿಡುಗಡೆ ಒಂದು ದಿನ ತಡವಾಗಿತ್ತು. ಆಗ ಸಿನಿಮಾದ ನಾಯಕರಾಗಿದ್ದ ಸುದೀಪ್, ತಮ್ಮ ಆಪ್ತ ಜಾಕ್ ಮಂಜು ಹಾಗೂ ಇನ್ನೊಬ್ಬರಿಗೆ ಸಿನಿಮಾದ ವಿತರಣೆ ಜವಾಬ್ದಾರಿ ವಹಿಸಿದ್ದರು. ಇತ್ತೀಚೆಗೆ ಸುದೀಪ್-ಕುಮಾರ್ ವಿವಾದದ ಕುರಿತು ಮಾತನಾಡಿದ್ದ ಜಾಕ್ ಮಂಜು ಹಾಗೂ ಚಕ್ರವರ್ತಿ ಚಂದ್ರಚೂಡ್, ವಿವಾದದ ಹಿಂದೆ ಸೂರಪ್ಪ ಬಾಬು ಕೈವಾಡ ಇದೆ ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ