Duniya Suri: ದುನಿಯಾ ಸೂರಿ ಜನ್ಮದಿನ; ಡೈರೆಕ್ಟರ್​ ಆಗೋಕೂ ಮುನ್ನ ಹೇಗಿತ್ತು ಬದುಕು? ಇಲ್ಲಿದೆ ಇಂಟರೆಸ್ಟಿಂಗ್​ ವಿಷಯ

Duniya Suri Birthday: ಸಿನಿಮಾ ನಿರ್ದೇಶಕ ಆಗುವುದಕ್ಕೂ ಮುನ್ನ ಸೂರಿ ಅವರು ಪೇಂಟಿಂಗ್​ ಮಾಡುತ್ತಿದ್ದರು. ಧಾರಾವಾಹಿಗಳಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದರು.

Duniya Suri: ದುನಿಯಾ ಸೂರಿ ಜನ್ಮದಿನ; ಡೈರೆಕ್ಟರ್​ ಆಗೋಕೂ ಮುನ್ನ ಹೇಗಿತ್ತು ಬದುಕು? ಇಲ್ಲಿದೆ ಇಂಟರೆಸ್ಟಿಂಗ್​ ವಿಷಯ
ದುನಿಯಾ ಸೂರಿ
Follow us
TV9 Web
| Updated By: ಮದನ್​ ಕುಮಾರ್​

Updated on:Apr 04, 2022 | 12:35 PM

ಕನ್ನಡ ಚಿತ್ರರಂಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡ ನಿರ್ದೇಶಕ ದುನಿಯಾ ಸೂರಿ (Duniya Suri) ಮೊದಲ ನಿರ್ದೇಶನದ ಪ್ರಯತ್ನದಲ್ಲೇ ಅವರು ಅಭೂತಪೂರ್ವ ಯಶಸ್ಸು ಕಂಡರು. ‘ದುನಿಯಾ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ಟ್ರೆಂಡ್​ ಸೆಟ್ಟರ್​ ಚಿತ್ರವಾಗಿ ಹೊರಹೊಮ್ಮಿತು. ಆ ಬಳಿಕ ಹಲವು ಬಗೆಯ ಸಿನಿಮಾಗಳ ಮೂಲಕ ಸೂರಿ ಖ್ಯಾತಿ ಗಳಿಸಿದರು. ಪ್ರತಿ ಸಿನಿಮಾದಲ್ಲಿಯೂ ಏನಾದರೊಂದು ವಿಶೇಷವನ್ನು ಪ್ರೇಕ್ಷಕರಿಗೆ ಪರಿಚಯಿಸುವ ತವಕ ಅವರಲ್ಲಿದೆ. ಇಂದು (ಏ.4) ದುನಿಯಾ ಸೂರಿ ಜನ್ಮದಿನ (Duniya Suri Birthday). ಆ ಪ್ರಯುಕ್ತ ಅನೇಕರು ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಎಷ್ಟೋ ಯುವ ನಿರ್ದೇಶಕರಿಗೆ ಸೂರಿಯೇ ಸ್ಫೂರ್ತಿ. ಅಂಡರ್​ವರ್ಲ್ಡ್​ ಕಥೆಯನ್ನು ಬೇರೆಯದೇ ರೀತಿಯಲ್ಲಿ ಪ್ರೇಕ್ಷಕರ ಮುಂದಿಡುವ ಕಲೆ ಸೂರಿ ಅವರಿಗೆ ಸಿದ್ಧಿಸಿದೆ. ದುನಿಯಾ, ಕೆಂಡಸಂಪಿಗೆ, ಟಗರು, ಅಣ್ಣಾ ಬಾಂಡ್​, ಜಾಕಿ ಮುಂತಾದ ಸಿನಿಮಾಗಳ ಮೂಲಕ ಅವರು ಯಶಸ್ಸು ಕಂಡಿದ್ದಾರೆ. ಈಗ ಅಭಿಷೇಕ್​ ಅಂಬರೀಷ್​ ಜೊತೆ ‘ಬ್ಯಾಡ್​ ಮ್ಯಾನರ್ಸ್​’ ಸಿನಿಮಾ ಮಾಡುತ್ತಿದ್ದಾರೆ. ಪ್ರತಿ ಬಾರಿ ದುನಿಯಾ ಸೂರಿ ಅವರ ಹೊಸ ಸಿನಿಮಾ (Duniya Suri Movies) ಅನೌನ್ಸ್​ ಆದಾಗಲೂ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗುತ್ತದೆ. ಈ ಪರಿ ಗುಂಗು ಹತ್ತಿಸಿದ ನಿರ್ದೇಶಕನ ಬದುಕಿನ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ..

ಚಿತ್ರ ಕಲಾವಿದ ಸೂರಿ: ಎಷ್ಟೋ ಜನರಿಗೆ ಈ ವಿಷಯ ತಿಳಿದಿಲ್ಲ. ಸಿನಿಮಾ ನಿರ್ದೇಶಕ ಆಗುವುದಕ್ಕೂ ಮುನ್ನ ಸೂರಿ ಅವರು ಪೇಂಟಿಂಗ್​ ಮಾಡುತ್ತಿದ್ದರು. ಬಾಲ್ಯದಲ್ಲಿಯೇ ಅವರು ಚಿತ್ರ ಬರೆಯುವುದನ್ನು ಚೆನ್ನಾಗಿ ಕಲಿತಿದ್ದರು. ಅದು ಅವರ ಜೀವನಕ್ಕೂ ಅನುಕೂಲ ಆಯಿತು. ಸೈನ್​ ಬೋರ್ಡ್​ ಅಂಗಡಿಯಲ್ಲಿ ಕೆಲಸ ಮಾಡುವ ಮೂಲಕ ಅವರು ಬದುಕಿನ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ವಿಶ್ಯವಲ್​ ಆರ್ಟ್ಸ್​ನಲ್ಲಿ ಅವರು ಪದವಿ ಪಡೆದರು. ಗೆಳಯರ ಜೊತೆ ಸೇರಿ ತಮ್ಮದೇ ಕಂಪನಿ ಶುರು ಮಾಡಿದರು. ಚಿತ್ರಕಲೆಯ ಜೊತೆ ಹೊಂದಿಕೊಂಡ ಅನೇಕ ಕೆಲಸಗಳನ್ನು ಸೂರಿ ಮಾಡುತ್ತಿದ್ದರು.

ಆಗಲೇ ಮೂಡಿತ್ತು ಸಿನಿಮಾ ಮೇಲೆ ಆಸಕ್ತಿ:

ಚಿತ್ರ ಕಲಾವಿದನಾಗಿದ್ದಾಗಲೇ ಸೂರಿ ಅವರಿಗೆ ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಚೈನ್ನೈನಲ್ಲಿ ಕೆಲಸ ಮಾಡುತ್ತಿದ್ದಾಗ ಅನೇಕ ಸಿನಿಮಾಗಳನ್ನು ಅವರು ನೋಡುತ್ತಿದ್ದರು. ಅವುಗಳ ಬಗ್ಗೆ ಸ್ನೇಹಿತರ ಜೊತೆ ಚರ್ಚೆ ಮಾಡುತ್ತಿದ್ದರು. ನಿರ್ದೇಶಕನಾಗುವ ಉದ್ದೇಶ ಅವರಿಗೆ ಆಗ ಇರಲಿಲ್ಲ. ಬದುಕಿನ ಪಯಣ ಅವರನ್ನು ಚಿತ್ರರಂಗದ ಕಡೆಗೆ ಕರೆದುಕೊಂಡು ಬಂತು. ಕಡೆಗೂ ಅವರು ನಿರ್ದೇಶಕನಾಗಿ ಯಶಸ್ವಿ ಆಗುವ ಮಟ್ಟಕ್ಕೆ ಬೆಳೆದರು. ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದರು.

ಕಿರುತೆರೆಯಲ್ಲೂ ಕೆಲಸ ಮಾಡಿದ ಸೂರಿ:

ಸಿನಿಮಾ ಜಗತ್ತಿಗೆ ಎಂಟ್ರಿ ನೀಡುವುದಕ್ಕೂ ಮುನ್ನ ಸೂರಿ ಅವರು ಸೀರಿಯಲ್​ಗಳಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದರು. ಬಿ. ಸುರೇಶ್​ ನಿರ್ದೇಶನದ ‘ಸಾಧನಾ’ ಧಾರಾವಾಹಿಯ ನೂರಾರು ಎಪಿಸೋಡ್​ಗಳಿಗೆ ಸೂರಿ ಅವರು ಕಲಾ ನಿರ್ದೇಶನ ಮಾಡಿದರು. ಅಲ್ಲಿ ಅವರಿಗೆ ನಿರ್ದೇಶಕ ಯೋಗರಾಜ್​ ಭಟ್​ ಅವರ ಪರಿಚಯ ಆಯಿತು. ನಂತರ ಸಿನಿಮಾ ಜಗತ್ತಿನ ಅನೇಕರ ಸಂಪರ್ಕ ಸೂರಿ ಅವರಿಗೆ ಸಿಕ್ಕಿತು. ಯೋಗರಾಜ್​ ಭಟ್​ ನಿರ್ದೇಶನ ಮಾಡಿದ್ದ ‘ಮಣಿ’, ‘ರಂಗ ಎಸ್​ಎಸ್​ಎಲ್​ಸಿ’ ಸಿನಿಮಾಗಳಿಗೆ ಬಹರಗಾರನಾಗಿ ಸೂರಿ ಕೆಲಸ ಮಾಡಿದರು. ನಂತರ ತಮ್ಮದೇ ಹೊಸ ‘ದುನಿಯಾ’ ತೋರಿಸಿದರು.

ಪುನೀತ್​ ಜೊತೆ 3 ಸಿನಿಮಾ ಮಾಡುವ ಅವಕಾಶ:

ಪುನೀತ್​ ಹೀರೋ ಆದ ಬಳಿಕ ಇಂಥ ಅವಕಾಶ ಸಿಕ್ಕಿದ್ದು ದುನಿಯಾ ಸೂರಿ ಅವರಿಗೆ ಮಾತ್ರ. ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಅವರ ಮೂರು ಸಿನಿಮಾಗಳಿಗೆ ಸೂರಿ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ಜಾಕಿ’, ‘ಅಣ್ಣಾ ಬಾಂಡ್​’, ‘ದೊಡ್ಮನೆ ಹುಡ್ಗ’ ಚಿತ್ರಗಳು ಅವರ ನಿರ್ದೇಶನದಲ್ಲಿ ಮೂಡಿಬಂದವು. ಈ ಸಿನಿಮಾಗಳು ಅಭಿಮಾನಿಗಳಿಗೆ ಎಂದಿಗೂ ಸ್ಪೆಷಲ್​.

ಸ್ಟಾರ್​ ಮೇಕರ್​ ಸೂರಿ:

ಕಲಾವಿದರಿಗೆ ದೊಡ್ಡ ಯಶಸ್ಸು ನೀಡುವಲ್ಲಿ ಸೂರಿ ಫೇಮಸ್​. ದುನಿಯಾ ಸಿನಿಮಾ ಹಿಟ್​ ಆದ ಬಳಿಕ ನಟ ವಿಜಯ್​ ಸ್ಟಾರ್​ ಆದರು. ‘ಕೆಂಡಸಂಪಿಗೆ’ ಚಿತ್ರದಲ್ಲಿ ಹೊಸ ಕಲಾವಿದರಾದ ವಿಕ್ಕಿ ಮತ್ತು ಮಾನ್ವಿತಾ ಮಿಂಚಿದರು. ‘ಟಗರು’ ಸಿನಿಮಾದಲ್ಲಿ ನಟ ಧನಂಜಯ ಅವರಿಗೆ ಡಾಲಿ ಪಾತ್ರ ನೀಡುವ ಮೂಲಕ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಕೊಟ್ಟಿದ್ದೇ ಸೂರಿ. ಈ ಎಲ್ಲ ಕಾರಣಗಳಿಂದಾಗಿ ಅವರು ಕನ್ನಡ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಅವರ ಮುಂಬರುವ ಸಿನಿಮಾಗಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ:

ಪೊಲೀಸ್​ ಗೆಟಪ್​ನಲ್ಲಿ ಬ್ಯಾಡ್​ ಮ್ಯಾನರ್ಸ್​ ತೋರಿಸಲು ಬಂದ ಅಭಿಷೇಕ್​ ಅಂಬರೀಷ್​; ಇಲ್ಲಿದೆ ಸ್ಯಾಂಪಲ್​

ದುನಿಯಾ ವಿಜಯ್ ಜತೆ ಮತ್ತೆ ಸಿನಿಮಾ? ನಟ ಯೋಗಿ ಹೇಳಿದ್ದಿಷ್ಟು

Published On - 12:24 pm, Mon, 4 April 22