ಇದು ನನ್ನ ನಂಬಿಕೆಗೆ ಸಿಕ್ಕ ಜಯ: ದುನಿಯಾ ವಿಜಯ್ ಪತ್ನಿ ನಾಗರತ್ನ
ಪತ್ನಿ ನಾಗರತ್ನ ರಿಂದ ವಿಚ್ಛೇದನ ಕೋರಿ ದುನಿಯಾ ವಿಜಯ್ ಸಲ್ಲಿಸಿದ್ದ ಅರ್ಜಿ ವಜಾ ಆಗಿದ್ದು, ನಾಗರತ್ನಗೆ ಗೆಲುವಾಗಿದೆ. ಇದೀಗ ನಾಗರತ್ನ ಈ ಬಗ್ಗೆ ದೀರ್ಘವಾದ ಫೇಸ್ಬುಕ್ ಪೋಸ್ಟ್ ಹಾಕಿದ್ದು, ಕೊನೆಯ ವರೆಗೆ ಪತಿಯ ಜೊತೆಯಲ್ಲಿದ್ದೇ ಸಾಯುತ್ತೇನೆ ಎಂದಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ (Sandalwood) ಒಂದರ ಹಿಂದೊಂದು ಘಟನೆಗಳು ನಡೆಯುತ್ತಿವೆ. ಕಳೆದ ಕೆಲ ವಾರಗಳಿಂದಲೂ ಸ್ಯಾಂಡಲ್ವುಡ್ ವಿವಾದಗಳನ್ನು ಸೃಷ್ಟಿಸುವ ಕಾರ್ಖಾನೆಯಂತಾಗಿದೆ. ನಿವೇದಿತಾ-ಚಂದನ್ ವಿಚ್ಛೇದನ, ಅದಾದ ಮೇಲೆ ನಡೆದ ಕೆಲವು ಘಟನೆಗಳು, ಅವರ ಸ್ಪಷ್ಟೀಕರಣ, ಅದರ ಬೆನ್ನಲ್ಲೆ ಯುವ ರಾಜ್ಕುಮಾರ್ ಹಾಗೂ ಶ್ರೀದೇವಿಯ ವಿಚ್ಛೇದನ ಪರಸ್ಪರ ಆರೋಪ-ಪ್ರತ್ಯಾರೋಪ. ಇದಾದ ಬಳಿಕ ದರ್ಶನ್ ಕೊಲೆ ಪ್ರಕರಣ. ಇದರ ಬಳಿಕ ದುನಿಯಾ ವಿಜಯ್ ದಾಂಪತ್ಯ ಪ್ರಕರಣವೂ ಸದ್ದು ಮಾಡುತ್ತಿದೆ. ಕೆಲ ವರ್ಷಗಳ ಹಿಂದೆ ತಮಗೆ ಪತ್ನಿ ನಾಗರತ್ಯ ಅವರಿಂದ ವಿಚ್ಛೇದನ ಬೇಕೆಂದು ನಟ ವಿಜಯ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಕೊಂಡಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ್ದು, ವಿಚ್ಛೇದನ ನೀಡಲು ನಿರಾಕರಿಸಿದೆ.
ಪ್ರಕರಣದಲ್ಲಿ ದುನಿಯಾ ವಿಜಯ್ ಪತ್ನಿ ನಾಗರತ್ನ ಅವರಿಗೆ ಗೆಲುವಾಗಿದೆ. ಅದರ ಬೆನ್ನಲ್ಲೆ ಫೇಸ್ಬುಕ್ನಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ನಾಗರತ್ನ, ಇದು ನಾನು ನಂಬಿದ ದೇವರಿಂದ ಸಿಕ್ಕ ಗೆಲುವು, ನನ್ನ ನಂಬಿಕೆಗೆ ಸಿಕ್ಕ ಗೆಲುವು’ ಎಂದಿದ್ದಾರೆ. ‘ಸಮಸ್ತ ನಾಡಿನ ಜನತೆಗೆ ನನ್ನ ನಮಸ್ಕಾರ , ಈ ದಿನ ತುಂಬಾ ಖುಷಿ ಕೊಟ್ಟ ದಿನವಾಗಿದೆ, ನನ್ನ ಪತಿ ವಿಜಯ್ ರವರು ತಮಗೆ ವಿಚ್ಛೇಧನ ಬೇಕೆಂದು ಸ್ವಲ್ಪ ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ, ಆ ಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ, ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ, ಇದು ನನ್ನ ಜಯ ಅನ್ನೋದಕ್ಕಿಂತ ನನ್ನ ಪತಿ ಅಧಿಕೃತವಾಗಿ ಇನ್ನೊಂದು ಮದುವೆಯಾಗಲು ಅವಕಾಶ ಸಿಕ್ಕಿಲ್ಲ ಅನ್ನೋ ನಿಜ!!! ಏಕೆಂದರೆ ನನಗೆ , ನನ್ನ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಾಗ ಹೇಳಿದ್ದು ಕಲಿಸಿದ್ದು ಒಂದೇ , ಗಂಡನೇ ದೇವರು, ಅತ್ತೆ ಮಾವನೇ ನಿಮ್ಮವರು, ಗಂಡನ ಮನೆಯೇ ನಿನ್ನ ಮನೆ, ಎಷ್ಟೇ ಕಷ್ಟಗಳು, ಏನೇ ಸಮಸ್ಯೆ ಬಂದರೂ ಅದೇ ಮನೆಯಲ್ಲೇ ಇರ್ಬೇಕು ಅವರೇ ನಿನಗೆ ಎಲ್ಲಾ ಎಂದಿದ್ದರು, ನಾನೂ ಅದನ್ನೇ ಪಾಲಿಸಿಕೊಂಡು ಬಂದವಳು!, ಅದನ್ನೇ ಪಾಲಿಸಿಕೊಂಡು ಹೋಗುವಳು , ನನಗೆ ನನ್ನ ಗಂಡ ಮಕ್ಕಳು ಇಷ್ಟೇ ಸರ್ವಸ್ವ! ನನ್ನ ಜೀವ ಇರುವವರೆಗೂ ಅವರ ಜೊತೆಯಲ್ಲೇ ಇದ್ದು ಸಾಯುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ:ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಪ್ರಕರಣ; ಇಂದು ಬರಲಿದೆ ತೀರ್ಪು
ನಮ್ಮ ಕಾನೂನಿನ ಪ್ರಕಾರ ವಿಚ್ಚೇದನ ಆದ ನಂತರನೇ ಇನ್ನೊಂದು ಮದುವೆಗೆ ಅವಕಾಶ ಇರುವುದು ಎಂಬ ಸತ್ಯ ನಿಮಗೂ ಗೊತ್ತು,, ನನ್ನ ಪತಿ ಇನ್ನೊಂದು ಮದುವೆಯಾಗಿಲ್ಲ ಎಂದು ಅವರೇ ನಮಗೆ ಹೇಳಿರುತ್ತಾರೆ, ಈ ಕೇಸಿನಲ್ಲಿ ನಮ್ಮ ವಕೀಲರಾದ ಬಿಎನ್ ನಾಗರಾಜ್ ಸರ್ ಅವರ ಶ್ರಮ ಅಪಾರವಾದುದು, ದಯವಿಟ್ಟು ಬೇರೆ ವದಂತಿಗಳಿಗೆ ಕಿವಿಕೊಡದೆ, ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಸಮಸ್ತ ನಾಡಿನ ಜನತೆಗೆ ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಮಾಧ್ಯಮಗಳಿಗೆ ಮನವಿ ಮಾಡಿರುವ ನಾಗರತ್ನ, ‘ವಿಜಯ್ ಆಪ್ತೆ ಕೀರ್ತಿಯ ಕುರಿತಾಗಿ ವರದಿ ಪ್ರಸಾರ ಮಾಡುವಾಗ ಅವರನ್ನು ಎರಡನೇ ಹೆಂಡತಿ ಎಂದು ಹಾಕಬೇಡಿ’ ಎಂದಿದ್ದಾರೆ. ದುನಿಯಾ ವಿಜಯ್ ಹಾಗೂ ನಾಗರತ್ನ ಮದುವೆಯಾಗಿ ಅವರಿಗೆ ಮೂವರು ಮಕ್ಕಳಿದ್ದಾರೆ. ಆದರೆ ದುನಿಯಾ ವಿಜಯ್ ನಾಗರತ್ನ ಅವರಿಂದ ದೂರಾಗಿ ಕೀರ್ತಿ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಇವರಿಬ್ಬರ ನಡುವೆ ಸಾಕಷ್ಟು ಜಗಳಗಳು ಸಹ ನಡೆದಿದ್ದವು. ಬಳಿಕ ದುನಿಯಾ ವಿಜಯ್, ನಾಗರತ್ನ ಅವರಿಂದ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ವಿಜಯ್ ಅರ್ಜಿ ವಜಾ ಆಗಿದ್ದು, ವಿಚ್ಛೇದನ ದೊರೆತಿಲ್ಲ. ಈಗ ವಿಜಯ್, ಹೈಕೋರ್ಟ್ ಮೆಟ್ಟಿಲೇರುವ ಸಂಭವ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ